ಬಂಟ್ವಾಳ: ತಾಲೂಕಿನ ರಾಯಿ, ಕೊಯಿಲ ಅರಳ ಗ್ರಾಮಗಳನ್ನೊಳಗೊಂಡ ಯಕ್ಷ ಕೌಸ್ತುಭ ನಾಟ್ಯ ಅಧ್ಯಯನ ಕೇಂದ್ರ ಕೊಯಿಲ ಇದರ ವತಿಯಿಂದ ಯಕ್ಷ ಸಂಭ್ರಮ 2026, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಪ್ರಶಸ್ತಿ,ಸಮ್ಮಾನ, ಯಕ್ಷಗಾನ ಕಾರ್ಯಕ್ರಮ ಆ.22 ರಂದು ರಾಯಿ ಶ್ರೀಯಾ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿ ಸಂಚಾಲಕ ಸಂತೋಷ್ ಅಂಚನ್ ಕೊಯಿಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಚೌಕಿ ಪೂಜೆ ಬಳಿಕ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರ.ಅರ್ಚಕ ರಾಮಚಂದ್ರ ಭಟ್ ದೈಲ ಅವರು ಕಾರ್ಯಕ್ರಮ ಉದ್ಘಾಟಿಸಲಿರುವರು. ಮಾವಂತೂರು ಶ್ರೀ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ ಬಲ್ಲಾಳ್ ಅವರು ಅಧ್ಯಕ್ಷತೆ ವಹಿಸಲಿರುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ-ಪ್ರಮೀಳಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಆಸ್ರಣ್ಣರಾದ ವೇ.ಮೂ. ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಲಿರುವರು. ಸಂಸದ ಕ್ಯಾ.ಬೃಜೇಶ್
ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ,ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿರುವರು. ಯಕ್ಷ ಗುರುಗಳಾದ ಪ್ರೇಮ್ ರಾಜ್ ಕೊಯಿಲ ಹಾಗೂ ಶ್ರುತಿ ಪ್ರೇಮ್ ರಾಜ್ ಅವರಿಗೆ ಯಕ್ಷ ಕೌಸ್ತುಭ ಪ್ರಶಸ್ತಿ, ಹಿರಿಯ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ ಮತ್ತು ಭಾಗವತ ರವಿಚಂದ್ರ ಕನ್ನಡಿ ಕಟ್ಟೆ ಅವರಿಗೆ ಸಮ್ಮಾನ, ಆತ್ಯಧಿಕ ಅಂಕ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ ಗೆಂದಗಿಡಿ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.















