ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜು.20ರಿಂದ 25ರವರೆಗೆ ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ವಿಶೇಷಾಧಿಕಾರ ಬಳಸಿ ಮಂಗಳವಾರ ರದ್ದುಗೊಳಿಸಿದೆ. ಈ ಬೆನ್ನಲ್ಲೇ, ಸೆ.5ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಿಜೆಪಿ ಅಧಿಕೃತವಾಗಿ ಹಿಂಪಡೆದಿದೆ.
ವಿಶೇಷ ಅಧಿಕಾರವನ್ನು ಚಲಾಯಿಸಿ ಈ ತೀರ್ಪು
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಯುವ ಪ್ರತಿಭಟನಾಕಾರರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ 142ನೇ ವಿಧಿ ನೀಡಿರುವ ವಿಶೇಷ ಅಧಿಕಾರವನ್ನು ಚಲಾಯಿಸಿ ಈ ತೀರ್ಪು ನೀಡಿದೆ. ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಅವಧಿಯಲ್ಲಿ ದಾಖಲಾಗಿರುವ ಇಂತಹ ಎಲ್ಲಾ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವಿಶೇಷವೆಂದರೆ ಸಿಜೆಐ ಸೂರ್ಯಕಾಂತ್ ಅವರೇ ಪ್ರಕರಣವೊಂದರ ವಿಚಾರಣೆ ವೇಳೆ ವಿದ್ಯಾರ್ಥಿಗಳನ್ನು ಜಿರಳೆಗಳು ಎಂದು ಹೇಳಿದ್ದರಿಂದಲೇ ಸಿಜೆಪಿ ಅಭಿಯಾನ ಆರಂಭವಾಗಿತ್ತು.
ಇದೇ ವೇಳೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ರದ್ದತಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂತ್ರಸ್ತ ಕುಟುಂಬಗಳಿಗೆ 3 ತಿಂಗಳೊಳಗೆ ಪರಿಹಾರ ಒದಗಿಸುವಂತೆ ಮತ್ತು ಇದಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಸಮಗ್ರ ನೀತಿಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಕ್ರಿಮಿನಲ್ ಕೇಸ್ ರದ್ದಿಲ್ಲ
ಆದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಗಂಭೀರ ಸ್ವರೂಪದ ಅಪರಾಧ ಹಿನ್ನೆಲೆ ಹೊಂದಿದ್ದ ಹಾಗೂ ಹಿಂಸಾಚಾರದಲ್ಲಿ
ಭಾಗಿಯಾಗಿದ್ದ 2,873 ವ್ಯಕ್ತಿಗಳ ವಿರುದ್ಧ ಮಾತ್ರ ಹೊಸದಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ದೆಹಲಿ ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಇತರ ವಿಚಾರಗಳ ತನಿಖೆಗಾಗಿ ಈಗಾಗಲೇ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.
ದೆಹಲಿ ಚಲೋ ವಾಪಸ್
ಸುಪ್ರೀಂನ ಈ ಆದೇಶ ಹಾಗೂ ಸರ್ಕಾರದ ಸಕಾರಾತ್ಮಕ ಭರವಸೆಯ ಹಿನ್ನೆಲೆಯಲ್ಲಿ, ಸಿಜೆಪಿಯು ಸೆ.5ರಂದು ದೆಹಲಿಯಲ್ಲಿ ನಡೆಸಲು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಅಧಿಕೃತವಾಗಿ ಹಿಂಪಡೆದಿದೆ. ಸಿಜೆಪಿ ಸಂಚಾಲಕ ಸೌರವ್ ದಾಸ್ ಕೋರ್ಟ್ ವಿಚಾರಣೆ ವೇಳೆ ಹೇಳಿಕೆ ನೀಡಿ, ಸರ್ಕಾರದ ಆಶ್ವಾಸನೆಗಳು ಮತ್ತು ನ್ಯಾಯಾಲಯದ ಈ ನಿರ್ಣಯಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಸ್ವಾಗತ
ಈ ನಡುವೆ ಸೆ.5ರಂದು ದೆಹಲಿಯಲ್ಲಿ ನಡೆಸಲು ನಿರ್ಧರಿಸಿದ್ದ ಬೃಹತ್ ಪ್ರತಿಭಟನೆಯನ್ನು ಕೈಬಿಟ್ಟ ಸಿಜೆಪಿ ನಡೆಯನ್ನು ಕೇಂದ್ರ ಸಚಿವ ಜೆ.ಪಿ. ನಡ್ಡಾ ಸ್ವಾಗತಿಸಿದ್ದಾರೆ. ದೇಶದ ಯುವಕರ ಕಲ್ಯಾಣ ಮತ್ತು ಪ್ರಗತಿಯೇ ಸರ್ಕಾರದ ಪರಮೋಚ್ಚ ಆದ್ಯತೆ ಎಂದು ಅವರು ಭರವಸೆ ನೀಡಿದ್ದಾರೆ.















