ಬಂಟ್ವಾಳ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ನಿವೃತ್ತ ಮುಖ್ಯೋಪಾಧ್ಯಾಯ ರೊಬ್ಬರು, ಯಾರನ್ನೂ ಕಾಯದೆ ಸ್ವಂತ ಖರ್ಚಿನಲ್ಲಿ ಚರಂಡಿಯ ಹೂಳೆತ್ತಿಸಿ ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಸಮಾಜಕ್ಕೆ ನೀಡುವ ಸೇವೆಯೇ ನಿಜವಾದ ನಿವೃತ್ತಿ ಜೀವನದ ಸಾರ್ಥಕತೆ’ ಎಂಬ ಸಂದೇಶವನ್ನು ಅವರ ಕಾರ್ಯ ಸಾರಿದೆ.
ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ಕೈಕುಂಜೆ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಅವರು ಸ್ವಂತ ಖರ್ಚಿನಲ್ಲಿ ತಮ್ಮ ಮನೆ ಎದುರು ಇದ್ದ ಚರಂಡಿಯನ್ನು ಹೂಳೆತ್ತಿಸುವ ಮೂಲಕ ಪುರಸಭೆ ಮಾಡಬೇಕಾದ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದಾರೆ. ಪ್ರಸ್ತುತ ಸದಸ್ಯರಿಲ್ಲದ ಪುರಸಭೆ ಆಡಳಿತಾಧಿಕಾರಿಗಳ ಕೈಯಲ್ಲಿದ್ದು, ಮಳೆಗಾಲ ಆರಂಭಗೊಂಡು ತಿಂಗಳೆರಡಾದರೂ ಕೆಲಸವಾಗದೇ ಇದ್ದಾಗ ರಾವ್ ಅವರು ಸ್ವತಃ ವೆಚ್ಚ ಭರಿಸಿ ಕೆಲಸ ನಿರ್ವಹಿಸುವುದರ ಮೂಲಕ ಗಮನ ಸೆಳೆದಿದ್ದಾರೆ.
ಮಳೆಗಾಲದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ 14 ನೇ ವಾರ್ಡು ಪರಿಸರದ ರೈಲ್ವೆ ಸ್ಟೇಶನ್ ನಿಂದ ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರಸ್ತೆಯ ರಸ್ತೆ
ಬದಿಯ ತೋಡಿನಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿತ್ತು. ಇದರಿಂದಾಗಿ ಮಳೆನೀರು ಹರಿಯಲು ದಾರಿಯಿಲ್ಲದೆ, ಸ್ಥಳೀಯ ರಸ್ತೆಗೆ ಕೆಸರು ನುಗ್ಗಿತ್ತು.
ಸಮಸ್ಯೆಯ ಕುರಿತು ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ. ರಾಮಚಂದ್ರ ರಾವ್ ಸ್ಥಳೀಯರೊಂದಿಗೆ ಸೇರಿ ಸ್ಥಳೀಯ ಪುರಸಭೆ ಸದಸ್ಯರಿಗೂ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ಮನವಿಗಳನ್ನು ಸಲ್ಲಿಸಿದ್ದರೂ ಸ್ಪಂದನೆ ದೊರಕದೇ ಇದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಕೊನೆಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ತೋಡಿನ ಹೂಳೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿಸಿದ್ದಾರೆ.
ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕೇವಲ ದೂರು ನೀಡುವುದಕ್ಕಿಂತ, ತಮ್ಮ ಕೈಲಾದ ಮಟ್ಟಿಗೆ ಪರಿಹಾರ ಕಂಡುಕೊಳ್ಳುವ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘















