ಬಂಟ್ವಾಳ : ಮಣ್ಣಿನ ಸೊಗಡಿನ ಕುಂಬಾರಿಕೆ ವೃತ್ತಿಯಿಂದ ಹಿಡಿದು ಸಹಕಾರ ಕ್ಷೇತ್ರದ ಉನ್ನತ ಜವಾಬ್ದಾರಿಗಳವರೆಗೆ ಸಮಾಜಮುಖಿ ಬದುಕು ಕಟ್ಟಿಕೊಂಡಿದ್ದ, ಕುಲಾಲ ಸಮಾಜದ ಹಿರಿಯ ಮುಖಂಡ ಹಾಗೂ ಸಹಕಾರ ಕ್ಷೇತ್ರದ ‘ಭೀಷ್ಮ’ ಎಂದೇ ಗುರುತಿಸಿಕೊಂಡಿದ್ದ ಶತಾಯುಷಿ ಬಿ.ಎಸ್. ಕುಲಾಲ್ (102) ಅವರು ಆ.30ರಂದು ನಿಧನರಾಗಿದ್ದು ಈ ಸಂದರ್ಭದಲ್ಲಿ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕವೂ ವಿಶ್ರಾಂತಿಗೆ ಮೊರೆ ಹೋಗದೆ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರು, ಪುತ್ತೂರು ಕುಲಾಲ ಸಮಾಜ ಸೇವಾ ಸಂಘ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದ್ದರು. ಸಂಘದ ಹಾಲಿ ಗೌರವಾಧ್ಯಕ್ಷರಾಗಿ ನಿರ್ದೇಶಕರಾಗಿಯೂ ಮಾರ್ಗದರ್ಶನ ನೀಡುತ್ತಿದ್ದರು.
ಸಮಾಜದ ಏಳಿಗೆಗೆ ಬದುಕು :
ಕುಂಬಾರಿಕೆ ಸೇರಿದಂತೆ ಸಾಂಪ್ರದಾಯಿಕ ವೃತ್ತಿಗಳ ಉಳಿವು ಮತ್ತು ಅಭಿವೃದ್ಧಿ, ಸಮಾಜದ ಆರ್ಥಿಕ ಸ್ವಾವಲಂಬನೆ ಹಾಗೂ ಸಂಘಟನೆಯ ಬಲವರ್ಧನೆಗೆ ಬಿ.ಎಸ್. ಕುಲಾಲ್ ಅವರ ಕೊಡುಗೆ ಗಮನಾರ್ಹ. ಸರಳತೆ, ಪ್ರಾಮಾಣಿಕತೆ ಮತ್ತು ಸಂಘಟನಾ ಕೌಶಲ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಅವರು, ‘ಸಹಕಾರಿ ಭೀಷ್ಮ’ ಹಾಗೂ ‘ಸಮಾಜ ರತ್ನ’ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.
ಹಿರಿಯ ನಾಗರಿಕರ ಹಿತರಕ್ಷಣಾ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಅವರು, ಇಳಿವಯಸ್ಸಿನಲ್ಲಿಯೂ ಸಮಾಜದ ಆಗುಹೋಗುಗಳ ಬಗ್ಗೆ ಕಾಳಜಿ ಹೊಂದಿದ್ದರು. ಅವರ ಜೀವನಾನುಭವ ಮತ್ತು ಸಮಾಜ ಸೇವೆಯನ್ನು ದಾಖಲಿಸುವ ‘ಶಂಕರ ಶತಪಥ’ ಕೃತಿಯೂ ಪ್ರಕಟಗೊಂಡಿದೆ.
ಪುತ್ತೂರಿನಲ್ಲಿ ಅಂತಿಮ ನಮನ:
ಬಿ.ಎಸ್. ಕುಲಾಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಂಘ-ಸಂಸ್ಥೆಗಳ ಪ್ರಮುಖರು, ಸಮಾಜದ ಗಣ್ಯರು, ಬಂಧುಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ವಾದ್ಯ ಘೋಷದೊಂದಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಹಿರಿಯ ಸಹಕಾರಿ, ಸಮಾಜದ ಮಾರ್ಗದರ್ಶಕ ಹಾಗೂ ಸರಳ ಸಜ್ಜನಿಕೆಯ ಪ್ರತೀಕವಾಗಿದ್ದ ಬಿ.ಎಸ್. ಕುಲಾಲ್ ಅವರ
ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಗಣ್ಯರಿಂದ ಅಂತಿಮ ನಮನ :
ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ, ಉಪಾಧ್ಯಕ್ಷ ದಾಮೋದರ ಕುಲಾಲ್, ನಿರ್ದೇಶಕರಾದ ಗಣೇಶ್ ಪಿ., ಪದ್ಮಕುಮಾರ್ ಎಚ್., ಪೂವಪ್ಪ ಕಡಂಬಾರು, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ನಾಗೇಶ್ ಕುಲಾಲ್, ರೇಖಾ ದಿನೇಶ್, ರಂಜಿತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಮತ್ತು ಸಿಬ್ಬಂದಿಗಳು, ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಷಪ್ಪ ಕುಲಾಲ್ ಹಾಗೂ ಸಂಘದ ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಕೊಟ್ಟು, ಮಾಜಿ ಶಾಸಕ ಸಂಜೀವ ಮಠಂದೂರು, ಮುರಳಿಕೃಷ್ಣ ಹಸಂತಡ್ಯ, ರಾಜೇಶ್ ಬನ್ನೂರು, ಕೃಷ್ಣ ಎಂ. ಅಳಿಕೆ, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ಜಗನ್ನಾಥ ರೈ, ನಗರಸಭೆ ಮಾಜಿ ಸದಸ್ಯ ಹೆಚ್. ಮಹಮ್ಮದ್ ಅಲಿ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಬಿ. ಐತ್ತಪ್ಪ ನಾಯ್ಕ್, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರ ಸಹಿತ ಹಲವಾರು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಗೌರವ ಸಲ್ಲಿಕೆ:
ಶತಾಯುಷಿ ಬಿ.ಎಸ್. ಕುಲಾಲ್ ಅವರ ಅಂತಿಮ ಯಾತ್ರೆಗಾಗಿ ಪಾರ್ಥಿವ ಶರೀರವನ್ನು ವಾಹನಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಹಾಗೂ ವಾಹನದಿಂದ ಇಳಿಸುವ ಸಂದರ್ಭದಲ್ಲೂ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಹಾಗೂ ಉಪಾಧ್ಯಕ್ಷ ದಾಮೋದರ್ ಕುಲಾಲ್ ಅವರು ಹೆಗಲು ನೀಡಿ ಗೌರವ ಸಲ್ಲಿಸಿದರು
ಮೃತರು ಪುತ್ರರಾದ ದಿವಾಕರ ಕುಲಾಲ್, ಗೋಕುಲದಾಸ್ ಕುಲಾಲ್, ಪುತ್ರಿ ಜ್ಯೋತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.















