ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ’ದ ಆವರಣದಲ್ಲಿ ಭಾನುವಾರ ಭಾರೀ ಹೈಡ್ರಾಮಾ ನಡೆದಿದೆ. ಕಾರ್ಯಕ್ರಮವೊಂದಕ್ಕೆ ನಟ ಪ್ರಕಾಶ್ ರಾಜ್(Prakash Raj) ಆಗಮಿಸಿದ್ದನ್ನು ವಿರೋಧಿಸಿ ಬಿಜೆಪಿ(BJP), ಆರ್‌ಎಸ್‌ಎಸ್ (RSS) ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದು, ವಾತಾವರಣ ಉದ್ವಿಗ್ನಗೊಂಡಿತ್ತು.
ಕರ್ನಾಟಕ ಸಮುದಾಯ ಸಂಘಟನೆಯ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ‘ಮನುಷ್ಯತ್ವದೆಡೆಗೆ ಸಮುದಾಯದ ಜಾಥಾ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಲು ನಟ ಪ್ರಕಾಶ್ ರಾಜ್ ಆಗಮಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರಯವ ‘ಪ್ರಕಾಶ್ ರಾಜ್ ಗೋಬ್ಯಾಕ್’ ಎಂದು ಘೋಷಣೆ ಕೂಗಿದ್ದಲ್ಲದೆ, ಅವರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದರು. ಕೆಲ ಕಾರ್ಯಕರ್ತರು ಸಭಾಂಗಣ ಮತ್ತು ವೇದಿಕೆ ಬಳಿ ನುಗ್ಗಲು ಯತ್ನಿಸಿದರು. ಇದಕ್ಕೆ ಪ್ರತಿಯಾಗಿ ಸಮುದಾಯ ಸಂಘಟನೆಯ ಸದಸ್ಯರು ‘ಆರ್‌ಎಸ್‌ಎಸ್ ಗೋಬ್ಯಾಕ್’ ಎಂದು ಧಿಕ್ಕಾರ ಕೂಗಿದರು. ಇದರಿಂದಾಗಿ ಇತ್ತಂಡಗಳ ನಡುವೆ ತೀವ್ರ ವಾಗ್ವಾದ ಹಾಗೂ ಗೊಂದಲದ
ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರತಿಭಟನೆ ನಡೆಸುತ್ತಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದರು. ಬಳಿಕ ಕಾರ್ಯಕ್ರಮ ಆಯೋಜಕರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇಷ್ಟೆಲ್ಲಾ ಗದ್ದಲ, ವಿರೋಧದ ನಡುವೆಯೂ ಮಾತನಾಡಿದ ನಟ ಪ್ರಕಾಶ್ ರಾಜ್, “ಪ್ರತಿಭಟನೆ ನಡೆಸುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಾಸಕ ಅರವಿಂದ ಬೆಲ್ಲದ್, ಪೊಲೀಸರ ಏಕಪಕ್ಷೀಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಮಾತ್ರ ಪೊಲೀಸರು ಏಕೆ ಬಂಧಿಸಿದ್ದಾರೆ? ಆರ್‌ಎಸ್‌ಎಸ್ ವಿರುದ್ಧ ಧಿಕ್ಕಾರ ಕೂಗಿದವರ ಮೇಲೆ ಕ್ರಮ ಯಾಕಿಲ್ಲ? ಪೊಲೀಸರು ಕಾರ್ಯಕ್ರಮ ಆಯೋಜಕರಿಗೆ ಬೆಂಬಲ ನೀಡುತ್ತಿದ್ದಾರೆ. ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ವೀಡಿಯೋ ಸಾಕ್ಷ್ಯಗಳನ್ನು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.















