ಎಇಇ ನೇಮಕಾತಿ ಅಕ್ರಮ| ಸರಣಿ ಪ್ರಶ್ನೆ ಕೇಳಿ ಪ್ರಿಯಾಂಕ್‌ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ

Coastal Bulletin
ಎಇಇ ನೇಮಕಾತಿ ಅಕ್ರಮ| ಸರಣಿ ಪ್ರಶ್ನೆ ಕೇಳಿ ಪ್ರಿಯಾಂಕ್‌ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಪುನರುಚ್ಚರಿಸಿದ್ದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ರಮದ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದಿರುವ ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊತ್ತು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ನಿಮ್ಮ ಗಮನಕ್ಕೆ ಬಂದಿಲ್ಲ ಎಂದರೆ ಯಾರ ಕಿವಿಗೆ ಹೂ ಮುಡಿಸುತ್ತಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿದ ಕುಮಾರಸ್ವಾಮಿ ಪ್ರಿಯಾಂಕ್‌ ಖರ್ಗೆ ನೇರ ಸವಾಲು ಹಾಕಿ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಿಯಾಂಕ್‌ಗೆ ಹೆಚ್‌ಡಿಕೆ ಪ್ರಶ್ನೆ

1 ಕೆಪಿಎಸ್‌ಸಿಯ ಅಂದಿನ ಕಾರ್ಯದರ್ಶಿಗಳು ಆಯೋಗದ ಗಮನಕ್ಕೇ ತರದೆ ಅಂತಿಮ ಆಯ್ಕೆ ಪಟ್ಟಿಯನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸಿದ್ದು ಹೇಗೆ?

2. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಉಪಸಮಿತಿ ಸ್ಪಷ್ಟ ವರದಿ ನೀಡಿದ ಮೇಲೂ ಸರ್ಕಾರ ಷರತ್ತುಬದ್ಧವಾಗಿ 24 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದ್ದು ಏಕೆ?

3. ಪರೀಕ್ಷೆ ನಡೆಸಿ ಪಟ್ಟಿ ಕೊಡುವುದು

ಮಾತ್ರ ಕೆಪಿಎಸ್‌ಸಿ ಕೆಲಸ, ನೇಮಕಾತಿ ಆದೇಶ ನೀಡುವುದು ಇಲಾಖೆಯ ಜವಾಬ್ದಾರಿ. ಹೀಗಿರುವಾಗ ನಿಮ್ಮ ಇಲಾಖೆಯಿಂದ ನೇಮಕಾತಿ ಪತ್ರ ಹೋಗುವಾಗ ಅಕ್ರಮ ನಿಮ್ಮ ಗಮನಕ್ಕೆ ಬರಲಿಲ್ಲವೇ?

4. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಇರಲಿಲ್ಲವೇ? ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಪ್ರಕರಣವನ್ನು ಎಳೆಯುತ್ತಿರುವುದು ಏಕೆ?

5. ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅಭಿಪ್ರಾಯಪಟ್ಟಿದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ?

6. ಅಕ್ರಮದ ಮಾಹಿತಿ ಇರಲಿಲ್ಲವೆಂದಾದರೆ, ಉಪಸಮಿತಿ ವರದಿ ಆಧರಿಸಿ ನೀವೇಕೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಿಲ್ಲ?

7. ಪ್ರಕ್ರಿಯೆಯಲ್ಲಿ ಲೋಪವಿರುವುದು ಗೊತ್ತಿದ್ದೇ ಷರತ್ತುಬದ್ಧ ನೇಮಕಾತಿ ನೀಡಲಾಯಿತೇ? ಅಕ್ರಮ ನಡೆದಿದ್ದರೂ ಇಷ್ಟು ತರಾತುರಿಯಲ್ಲಿ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದರ ಹಿಂದಿನ ಮರ್ಮವೇನು?

8. ಅಭ್ಯರ್ಥಿಗಳಿಗೆ ನೇಮಕಾತಿ ನೀಡಿದ ಬಳಿಕ ಅವರ ಕೈಯಿಂದಲೇ ಕೆಎಟಿಗೆ ಅರ್ಜಿ ಸಲ್ಲಿಸುವಂತೆ ಮಾಡಿದ್ದು ಯಾರು?

Leave a Comment