ಬೆಂಗಳೂರು: ರಾಜ್ಯದಲ್ಲಿ 66 ಸಾವಿರ ಜನರಿಗೆ ಉದ್ಯೋಗಾವಕಾಶ ಒದಗಿಸುವ ಕೈಗಾರಿಕಾ ಕ್ಷೇತ್ರದಲ್ಲಿ ಒಟ್ಟು 29,679 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ 17 (9 ಹೊಸ ಮತ್ತು 8 ಹೆಚ್ಚುವರಿ ಹೂಡಿಕೆಯ) ಕೈಗಾರಿಕಾ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ದೊರೆತಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಕೈಗಾರಿಕೆಗಳ ಸ್ಥಾಪನೆಗೆ ಅನುಮೋದನೆ ನೀಡುವ ಸಂಬಂಧ ನಡೆದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು 9 ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗು 8 ಕೈಗಾರಿಕೆ ಯೋಜನೆಗಳ ವಿಸ್ತರಣೆಗೆ ಅನುಮತಿ ಕೊಟ್ಟಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯವು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಹೊಸ ಕೈಗಾರಿಕೆ ಯೋಜನೆಗಳ ಅಡಿಯಲ್ಲಿ ವೈಬ್ರನ್ಸಿ ರೆನ್ಯೂಅಬಲ್ ಎನರ್ಜೀಸ್ 2,194.94 ಕೋಟಿ ರೂ. ಹೂಡಲಿದ್ದು, 30 ಸಾವಿರ ಜನರಿಗೆ ಉದ್ಯೋಗ ನೀಡಲಿದೆ. ಹಾಗೆಯೇ ಮಹೀಂದ್ರ ಏರೋಸ್ಟ್ರಕ್ಚರ್ಸ್ 2,300 ಕೋಟಿ (3,000 ಉದ್ಯೋಗ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ 1,104 ಕೋಟಿ ರೂಪಾಯಿ (4,813 ಉದ್ಯೋಗ), ಹೀರೋ ಫ್ಯೂಚರ್ ಎನರ್ಜೀಸ್ 9,760 ಕೋಟಿ ರೂಪಾಯಿ (3,200 ಉದ್ಯೋಗ), ಎಪ್ಸಿಲಾನ್ 1,500 ಕೋಟಿ ರೂಪಾಯಿ, ಟೊಯೋಟಾ ಕಿರ್ಲೋಸ್ಕರ್ ₹1,200 ಕೋಟಿ, ನಿರಾಣಿ ಶುಗರ್ಸ್ ₹4,062 ಕೋಟಿ, ಟ್ರೂಆಲ್ಟ್ ಬಯೋ ಎನರ್ಜಿ ₹2,988 ಕೋಟಿ ಮತ್ತು ಲೈಟ್ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ 600 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಎಂಎಸ್ಪಿಎಲ್ ಕಂಪನಿಯು ₹884.25 ಕೋಟಿ, ಎನ್ಶೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ 250 ಕೋಟಿ, ಹೋಂಡಾ ಕಾರ್ಸ್ ₹437 ಕೋಟಿ, ಭೀಮಾ ಫೈನ್ ಕೆಮಿಕಲ್ಸ್ ₹605 ಕೋಟಿ, ಸನ್ಸೇರಾ ₹492.24 ಕೋಟಿ,
ಟಿವಿಎಸ್ ಮೋಟಾರ್ಸ್ 1,050 ಕೋಟಿ ಮತ್ತು ಹ್ಯಾವೆಲ್ಸ್ ಇಂಡಿಯಾ 250 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.
ಕೈಗಾರಿಕೆಗಳಿಗೆ ಪರವಾನಿಗೆ ನೀಡುವ ಯೋಜನಾ ವರದಿಗಳನ್ನು ಸರಿಯಾಗಿ ಪರಿಶೀಲಿಸಬೇಕು. ಯೋಜನೆಗೆ ಪರವಾನಿಗೆ ಪೂರ್ವದಲ್ಲಿ ಆಡಿಟ್ ಕಡ್ಡಾಯವಾಗಿ ನಡೆಸಬೇಕು. ಇದಕ್ಕಾಗಿ ಹೊಸ ಆಡಿಟ್ ತಂಡವನ್ನು ರಚಿಸಬೇಕು ಎಂದು ಮುಖ್ಯಮಂತ್ರಿ ಅವರು ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾರಿಕಾ ನೀತಿಯಲ್ಲಿನ ಎಲ್ಲಾ ಅಂಶಗಳನ್ನು ಸಮರ್ಪಕವಾಗಿ ಅನುಸರಿಸಬೇಕು. ಕೈಗಾರಿಕೆಗಳ ಸ್ಥಾಪನೆ ಮತ್ತು ವಿಸ್ತರಣೆಗೆ ಉತ್ತೇಜನ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೈಗಾರಿಕೆಗಳ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡುವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಮತ್ತು ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕೆ ಸಚಿವ ಅಜಯ್ ಸಿಂಗ್, ಕೃಷಿ ಸಚಿವ ಪಿ. ಎಂ. ನರೇಂದ್ರಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.















