ಶಾಲೆಗಳಲ್ಲಿ ದೈಹಿಕ ಶಿಕ್ಷೆಗೆ ಸಂಪೂರ್ಣ ಬ್ರೇಕ್? ಕಟ್ಟುನಿಟ್ಟಿನ ಆದೇಶ ಹೊರಡಿಸಲು ಶಿಕ್ಷಣ ಇಲಾಖೆಗೆ ತಜ್ಞರ ಒತ್ತಾಯ

Coastal Bulletin
ಶಾಲೆಗಳಲ್ಲಿ ದೈಹಿಕ ಶಿಕ್ಷೆಗೆ ಸಂಪೂರ್ಣ ಬ್ರೇಕ್? ಕಟ್ಟುನಿಟ್ಟಿನ ಆದೇಶ ಹೊರಡಿಸಲು ಶಿಕ್ಷಣ ಇಲಾಖೆಗೆ ತಜ್ಞರ ಒತ್ತಾಯ

ಬೆಂಗಳೂರು: ಕರ್ನಾಟಕದ (Karnataka) ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೈಹಿಕ ಶಿಕ್ಷೆ ಮತ್ತು ಮಾನಸಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ಆರೋಪಗಳು ಕೇಳಿಬಂದಿದ್ದು, ಇದರ ತಡೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಒತ್ತಾಯ ಕೇಳಿಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೊಸುಂಬೆ ಅವರು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು, ಶಾಲೆಗಳಲ್ಲಿ ಯಾವುದೇ ರೀತಿಯ ದೈಹಿಕ ಶಿಕ್ಷೆ, ಅವಮಾನಕಾರಿ ಶಿಕ್ಷೆ ಅಥವಾ ಮಾನಸಿಕ ಕಿರುಕುಳವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸ್ಪಷ್ಟ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಅವಮಾನಕಾರಿ ಶಿಕ್ಷೆ ವಿಧಿಸುವಂಥ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯಲ್ಲೇ ಸ್ಪಷ್ಟ ನಿಷೇಧ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ (Right to Education Act) ಸೆಕ್ಷನ್ 17ರ ಪ್ರಕಾರ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ಹಾಗೂ ಮಾನಸಿಕ ಕಿರುಕುಳ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದಾಗ್ಯೂ, ಕೆಲವು ಶಾಲೆಗಳಲ್ಲಿ ಈ ಕಾನೂನು ಉಲ್ಲಂಘನೆಯಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಮತ್ತೊಮ್ಮೆ ಸ್ಪಷ್ಟ ಮಾರ್ಗಸೂಚಿ ನೀಡುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಶಿಕ್ಷಣ ಇಲಾಖೆಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಪ್ರತಿಕ್ರಿಯಿಸಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಹಾಗೂ ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿನ ಘಟನೆಗಳಿಂದ ಹೆಚ್ಚಿದ ಆತಂಕ

ಇತ್ತೀಚೆಗೆ ಬೆಂಗಳೂರಿನ ಮರಿಯಪ್ಪನಪಾಳ್ಯದ ಸೆಂಟ್ ಫಿಲೋಮಿನಾಸ್ ಶಾಲೆಯಲ್ಲಿ

ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷೆಯ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಗೂ ಯಲಹಂಕದಲ್ಲಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣ ಸೇರಿದಂತೆ ಹಲವು ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಈ ಘಟನೆಗಳ ಬಳಿಕ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

ತಪ್ಪಿತಸ್ಥ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ರಾಜ್ಯ ಪೋಷಕರ ಸಮನ್ವಯ ಸಮಿತಿಯೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ಅಥವಾ ಮಾನಸಿಕ ಕಿರುಕುಳ ನೀಡುವ ಶಾಲೆಗಳು ಮತ್ತು ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಅಗತ್ಯವಿದ್ದರೆ ಅಂತಹ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸುವ ಕ್ರಮವನ್ನೂ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಶಾಲೆಗಳು ಶಿಕ್ಷಣ ನೀಡುವ ಸ್ಥಳವಾಗಿರಬೇಕೇ ಹೊರತು ಭಯ ಹುಟ್ಟಿಸುವ ಕೇಂದ್ರಗಳಾಗಬಾರದು ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಮಕ್ಕಳ ಸುರಕ್ಷತೆ, ಗೌರವ ಮತ್ತು ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಇನ್ನಷ್ಟು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆ ಇದೆ.

Leave a Comment