ಸುಹಾಸ್ ಶೆಟ್ಟಿ ಕೊಲೆ ಆರೋಪಿ ಸೇರಿದಂತೆ ಕೈದಿಗಳಿಂದ ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಮೇಲೆ ಹಲ್ಲೆ: ಐವರ ವಿರುದ್ಧ ಎಫ್ಐಆರ್!

Coastal Bulletin
ಸುಹಾಸ್ ಶೆಟ್ಟಿ ಕೊಲೆ ಆರೋಪಿ ಸೇರಿದಂತೆ ಕೈದಿಗಳಿಂದ ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಮೇಲೆ ಹಲ್ಲೆ: ಐವರ ವಿರುದ್ಧ ಎಫ್ಐಆರ್!

ಬೆಂಗಳೂರು: ಪರಪ್ಪನ ಅಗ್ರಹಾರ ಮಧ್ಯವರ್ತಿ ಕಾರಾಗೃಹದಲ್ಲಿ ಕೈದಿಗಳ ಅಟ್ಟಹಾಸ ಮಿತಿಮೀರಿದ್ದು, ಸಿಬ್ಬಂದಿಯೇ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಜೈಲಿನಲ್ಲಿ ಕೈದಿಗಳ ನಿಯಂತ್ರಣವೇ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಜೈಲು ವಾರ್ಡರ್ ಮಂಜುನಾಥ್ ಹವೇಲಿ ಅವರ ಮೇಲೆ ನಡೆದ ಭೀಕರ ಹಲ್ಲೆ ನಡೆದಿದೆ. ಈ ಹಿನ್ನೆಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಘಟನೆಯ ಹಿನ್ನೆಲೆ

ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಆಗಸ್ಟ್ 22 ರಂದು ಪರಪ್ಪನ ಅಗ್ರಹಾರದ ‘ಅನೆಕ್ಸ್-1’ ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಆ ವೇಳೆ ಆರೋಪಿಗಳು ತಮ್ಮೊಂದಿಗೆ ನಿಯಮಬಾಹಿರವಾಗಿ ಹೆಚ್ಚುವರಿ ವಸ್ತುಗಳನ್ನು ಜೈಲಿನೊಳಗೆ ತೆಗೆದುಕೊಂಡು ಹೋಗಲು ಯತ್ನಿಸಿದ್ದರು. ಆದರೆ ಜೈಲು ವಾರ್ಡರ್ ಮಂಜುನಾಥ್ ಅವರು ಕಾನೂನಿನಂತೆ ಆ ಹೆಚ್ಚುವರಿ ವಸ್ತುಗಳನ್ನು ಒಳಗೆ ಬಿಡದೆ ತಡೆದಿದ್ದರು. ಇದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ಮಂಜುನಾಥ್ ವಿರುದ್ಧ ವೈಷಮ್ಯ ಬೆಳೆಸಿಕೊಂಡಿದ್ದರು.

ಕೊಠಡಿಗೆ ಎಳೆದೊಯ್ದು ಹಲ್ಲೆ

ಸೆಪ್ಟೆಂಬರ್ 2 ರಂದು ಆರೋಪಿಗಳ ವಿಡಿಯೋ ಕಾನ್ಫರೆನ್ಸ್ (VC) ಹಾಜರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ವಾರ್ಡರ್ ಮಂಜುನಾಥ್ ಅವರು ಅನೆಕ್ಸ್-1 ಕಟ್ಟಡಕ್ಕೆ ತೆರಳಿದ್ದರು. ಈ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಆರೋಪಿ ಮೊಹಮ್ಮದ್ ಮುಜಾಮಿಲ್ ಹಳೆಯ ದ್ವೇಷವನ್ನು

ಮುಂದಿಟ್ಟುಕೊಂಡು ವಾರ್ಡರ್ ಜೊತೆ ವಾಗ್ವಾದ ನಡೆಸಿದ್ದಾನೆ. ಹಠಾತ್ತನೆ ಮಂಜುನಾಥ್ ಅವರ ಮುಖ ಹಾಗೂ ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿ ರಕ್ತ ಬರುವಂತೆ ಗಾಯಗೊಳಿಸಿದ್ದಾನೆ. ತಕ್ಷಣವೇ ಆತನ ಸಹಚರರು ಕೈಜೋಡಿಸಿ, ಮಂಜುನಾಥ್ ಅವರನ್ನು ಕೊಠಡಿ ಸಂಖ್ಯೆ 4 ಕ್ಕೆ ಎಳೆದುಕೊಂಡು ಹೋಗಿ ಮನಸೋಇಚ್ಛೆ ಥಳಿಸಿದ್ದಾರೆ.

ಐವರು ಆರೋಪಿಗಳ ವಿರುದ್ಧ FIR ದಾಖಲು

ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳಾದ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಗನ್ (ಶಫ್ವಾನ್), ಮೊಹಮ್ಮದ್ ರಿಜ್ವಾನ್, ನಿಯಾಜ್ (ನಯಾಜ್), ಕಲಂದರ್ ಶಫಿ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಘಟನೆಯ ಬಳಿಕ ಇತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಾರ್ಡರ್ ಅವರನ್ನು ರಕ್ಷಿಸಿದ್ದು, ಜೈಲಿನ ಆಡಳಿತ ವ್ಯವಸ್ಥೆ ಮತ್ತು ಭದ್ರತೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ಕಳವಳ ವ್ಯಕ್ತವಾಗಿದೆ.

Leave a Comment