ಬೆಳ್ತಂಗಡಿಯಲ್ಲಿ ಖೋಟಾ ನೋಟು ತಯಾರಿಕಾ ಅಡ್ಡೆ ಮೇಲೆ ಪೊಲೀಸರ ದಾಳಿ: 7 ಮಂದಿ ಬಂಧನ, ಮುದ್ರಣ ಉಪಕರಣಗಳು ವಶಕ್ಕೆ

Coastal Bulletin
ಬೆಳ್ತಂಗಡಿಯಲ್ಲಿ ಖೋಟಾ ನೋಟು ತಯಾರಿಕಾ ಅಡ್ಡೆ ಮೇಲೆ ಪೊಲೀಸರ ದಾಳಿ: 7 ಮಂದಿ ಬಂಧನ, ಮುದ್ರಣ ಉಪಕರಣಗಳು ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಪೊಲೀಸ್​ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದ ಅಡೆಂಜದಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಅಡ್ಡೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.

ಇಬ್ರಾಹಿಂ (60), ಶರೀಫ್​ (51), ಸಂದೀಪ್​ ಪುಂಡಲಿಕ ಶೋಳಂಬಿ (30), ಮಹಮ್ಮದ್ ನಬಾಸ್ (37), ಸಲ್ಮಾನ್ ಫಾರೀಸ್ (25), ಸಿರಾಜುದ್ದೀನ್ (34), ಇರ್ಷಾದ್ (31) ಬಂಧಿತ ಆರೋಪಿಗಳು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಅವರ ಮಾಹಿತಿ ಪ್ರಕಾರ, ಆರೋಪಿಗಳು ಕಾಗದದ ಮೇಲೆ 500 ರೂಪಾಯಿ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆ ಖೋಟಾನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳು ಹಾಗೂ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸುತೇಶ್ ಕೆ.ಪಿ. ಅವರಿಗೆ ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ 500 ರೂಪಾಯಿ ನೋಟುಗಳ ಮುದ್ರಿತ ಶೀಟ್‌ಗಳು, 500 ರೂಪಾಯಿ ನೋಟುಗಳ ಬಂಡಲ್,

ಎ4 ಶೀಟ್‌ಗಳು, ಸಿಪಿಯು, ಪ್ರಿಂಟರ್, ಪೇಪರ್ ಕಟಿಂಗ್ ಉಪಕರಣ, ಸ್ಕೇಲ್, ಲ್ಯಾಂಪ್, ಮಹಾತ್ಮ ಗಾಂಧೀಜಿ ಚಿತ್ರದ ಸೀಲ್, ಆರ್‌ಬಿಐ ಸೆಕ್ಯುರಿಟಿ ಥ್ರೆಡ್‌ಗೆ ಬಳಸಲಾಗುತ್ತಿದ್ದ ಪಿವಿಸಿ ಗ್ಲಾಸ್ ಸೇರಿದಂತೆ ಖೋಟಾನೋಟು ಮುದ್ರಣಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಕೆಲವು ಖೋಟಾನೋಟುಗಳನ್ನು ಮುದ್ರಿಸಿ ಇಟ್ಟಿದ್ದು, ಇನ್ನೂ ಕೆಲವು ಕತ್ತರಿಸಿ ಬಂಡಲ್ ಮಾಡುವ ಹಂತದಲ್ಲಿದ್ದವು ಎಂದು ಎಸ್ಪಿ ತಿಳಿಸಿದ್ದಾರೆ. ಬಂಧಿತರು ಎಷ್ಟು ದಿನಗಳಿಂದ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ಸೇರಿದಂತೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 178(1) ಹಾಗೂ 181 ಸೇರಿದಂತೆ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

Leave a Comment