ಬಂಟ್ವಾಳ: ಪ್ರತಿನಿತ್ಯದಂತೆ ದನಗಳಿಗೆ ಸೊಪ್ಪು ತರಲು ಗುಡ್ಡಕ್ಕೆ ಹೋಗಿ ಕೊಯ್ಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ರಾಜೀವ ಪಲ್ಕೆ ಎಂಬಲ್ಲಿ ಜು. 14ರಂದು ನಡೆದಿದೆ.
ಮೃತರನ್ನು ಕೃಷ್ಣಪ್ಪ ಕುಲಾಲ್ (82) ಎಂದು ಗುರುತಿಸಲಾಗಿದೆ.
ಮೃತರು ಮನೆಯ ಸಮೀಪದ ಗುಡ್ಡದಲ್ಲಿ ಸೊಪ್ಪು ಕೊಯ್ಯುವ ಕೆಲಸ ಮಾಡುತ್ತಿದ್ದರು. ವಿದ್ಯುತ್ ಪೂರೈಕೆಯಾಗುವ 110 ಕೆ.ವಿ. ಹೈಟೆನ್ಷನ್ ವಿದ್ಯುತ್ ಹಾದುಹೋಗುವ ಕೆಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿದ್ದವರು ತಕ್ಷಣ ನೆರವಿಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು
ಸ್ಥಳಕ್ಕೆ ಆಗಮಿಸಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಗೆ ನಿಖರ ಕಾರಣವೇನು ಹಾಗೂ 110 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ವಿದ್ಯುತ್ ಸ್ಪರ್ಶ ಹೇಗೆ ಸಂಭವಿಸಿತು ಎಂಬುದರ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಈ ನಡುವೆ ಬಹಳ ಕೆಲ ಮಟ್ಟದಲ್ಲಿ ಹೈಟೆನ್ಷನ್ ವೈರ್ ಹಾದುಹೋಗಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬಂದಿದೆ.
















