ಮೈಸೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮೈಸೂರಿನಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ (S.Janaki) ಅಂತ್ಯಕ್ರಿಯೆ ನಡೆಯಲಿದೆ.
ಮೊಮ್ಮಗಳು ಅಪ್ಸರಾ ಅವರಿಂದ ಎಸ್.ಜಾನಕಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕೆಲ ವರ್ಷಗಳ ಹಿಂದೆ ಜಾನಕಿ ಅವರ ಪುತ್ರ ನಿಧನರಾದರು. ಹೀಗಾಗಿ, ಅವರ ಮಗನ ಮಗಳಿಂದ ಗಾಯಕಿಯ ಅಂತ್ಯಸಂಸ್ಕಾರ ನಡೆಯಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಇಂದು ಬೆಳಗ್ಗೆ 8 ಗಂಟೆಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಸಂಜೆ ವೇಳೆಗೆ ಮೈಸೂರು ತಾಲೂಕಿನ ಕಣಿಯನ ಹುಂಡಿ ನವೀನ್ ಫಾರಂ ಹೌಸ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ತಿಳಿಸಿದರು.
ಎಸ್.ಜಾನಕಿ ಅವರು ಮೈಸೂರಿನಲ್ಲಿ ಅಂತ್ಯಸಂಸ್ಕಾರ
ನಡೆಯಬೇಕು ಎಂದು ಇಚ್ಛಿಸಿದ್ದರು. ಅವರ ಇಚ್ಛೆಯಂತೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಖುದ್ದು ಸಿಎಂ ಅವರೇ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೇರವೇರಿಸಿ ಎಂದು ಹೇಳಿದ್ದಾರೆ.
ಸಿಎಂ ನಿರ್ದೇಶನದಂತೆ ಎಲ್ಲವೂ ನಡೆಯಲಿದೆ. ಅಭಿಮಾನಿಗಳು ಯಾರೂ ಆಸ್ಪತ್ರೆ ಬಳಿ ಬರಬೇಡಿ. ಬೆಳಗ್ಗೆ 8 ಗಂಟೆ ನಂತರ ಅಂತಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಎಸ್.ಜಾನಕಿ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು, ಜಾನಕಿ ಅವರ ಕುಟುಂಬಸ್ಥರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸಭೆ ನಡೆಸಿದರು. ಸಭೆ ಬಳಿಕ ಅಧಿಕೃತವಾಗಿ ಮಾಹಿತಿ ನೀಡಿದರು.















