ಇಂದು ಸೆ. 5 ಶಿಕ್ಷಕರ ದಿನಾಚರಣೆಯ ಸಂಭ್ರಮ,ಶಿಕ್ಷಣವೆಂದರೆ ಕೇವಲ ಪುಸ್ತಕದ ಪಾಠ ಹಾಗೂ ಅಂಕ ಗಳಿಕೆಯಾಗದೆ ವಿದ್ಯಾರ್ಥಿಯು ತನ್ನ ವ್ಯಕ್ತಿತ್ವ ರೂಪಿಸಿ ಸಾಧನೆಯ ಹಾದಿಯ ಕಡೆಗೆ ಸಾಗಬೇಕಾದ ಮಹತ್ತರ ಜವಾಬ್ದಾರಿಯಲ್ಲಿ ಶಿಕ್ಷಕರ ಪಾತ್ರವೇ ಹಿರಿದು, ಶಿಕ್ಷಕರೆಂದರೆ ಕೇವಲ ಪಾಠ ಹೇಳುವವರಲ್ಲ; ಬದುಕಿನ ದಾರಿ ತೋರಿಸುವವರು.“ಗುರು” ಎಂಬುದು ಎರಡಕ್ಷರದ ಪದವಾದರೂ ಅದು ವಿಶಾಲವಾದ ಅರ್ಥವನ್ನು ಹೊಂದಿದೆ . ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು.
ವಿದ್ಯಾರ್ಥಿಯ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು.“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಗುರುವಿನ ಮಾರ್ಗದರ್ಶನ ಮತ್ತು ಶರಣಾಗತಿಯಿಲ್ಲದೆ ಮೋಕ್ಷ (ಮುಕ್ತಿ) ದೊರೆಯುವುದಿಲ್ಲ ಎಂಬುದನ್ನು ದಾಸ ಶ್ರೇಷ್ಠ ಪುರಂದದಾಸರ ಕೀರ್ತನೆ ತಿಳಿಸುತ್ತದೆ ಅಂದರೆ ಅಂಧವಾಗಿ ಯಾರನ್ನಾದರೂ ಅನುಸರಿಸುವುದಲ್ಲ. ತನ್ನ ಅಹಂಕಾರವನ್ನು ಬದಿಗಿಟ್ಟು ಜ್ಞಾನಕ್ಕೆ ಶರಣಾಗುವುದು ಇದರ ನಿಜವಾದ ಅರ್ಥ.
ಒಳ್ಳೆಯ ಶಿಕ್ಷಕ ಪಾಠಪುಸ್ತಕದ ಜ್ಞಾನವನ್ನಷ್ಟೇ ನೀಡುವುದಿಲ್ಲ. ಶಿಸ್ತು, ಸಂಸ್ಕಾರ, ಮಾನವೀಯತೆ, ಪ್ರಾಮಾಣಿಕತೆ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯವನ್ನೂ ಕಲಿಸುತ್ತಾನೆ. ವಿದ್ಯಾರ್ಥಿಯ ಸೋಲಿನಲ್ಲಿ ಧೈರ್ಯ ತುಂಬಿ, ಗೆಲುವಿನಲ್ಲಿ ವಿನಯದಿಂದ ಇರಲು ಕಲಿಸುವವನೇ ನಿಜವಾದ ಗುರು.
ನಾವು ಎಷ್ಟೇ ವಿದ್ಯಾವಂತರಾದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮ ಬದುಕಿನಲ್ಲಿ ಒಬ್ಬ ಶಿಕ್ಷಕರ ಛಾಪು ಇದ್ದೇ ಇರುತ್ತದೆ. ನಾವು ಮೊದಲ ಅಕ್ಷರ ಕಲಿತ ಕ್ಷಣದಿಂದ ಜೀವನದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳು ವವರೆಗೂ ಯಾವುದೋ ಒಂದು ಹಂತದಲ್ಲಿ ಶಿಕ್ಷಕರ ಮಾರ್ಗದರ್ಶನ ನಮಗೆ ದಿಕ್ಕು ತೋರಿಸಿರುತ್ತದೆ.ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನ.
ಇಂದು ತಂತ್ರಜ್ಞಾನದ ಯುಗ ಗುರುವಿನ ಜವಾಬ್ದಾರಿ
ನಿರಂತರ ಬದಲಾವಣೆಗೆ ಹಾದಿಯಲ್ಲಿದೆ. ಮೊಬೈಲ್ ಮತ್ತು ಇಂಟರ್ನೆಟ್ ಮೂಲಕ ಕ್ಷಣಾರ್ಧದಲ್ಲಿ ಅಪಾರ ಮಾಹಿತಿ ದೊರೆಯುತ್ತದೆ. ಆದರೆ ಯಾವುದು ಸತ್ಯ, ಯಾವುದು ತಪ್ಪು ಎಂಬುದನ್ನು ಗುರುತಿಸುವ ವಿವೇಕವನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವದ್ದಾಗಿದೆ.
ಒಬ್ಬ ವೈದ್ಯ, ಇಂಜಿನಿಯರ್, ವಿಜ್ಞಾನಿ, ಅಧಿಕಾರಿ ಅಥವಾ ಸಾಧಕನ ಹಿಂದೆ ಯಾವುದೋ ಒಂದು ಹಂತದಲ್ಲಿ ಶಿಕ್ಷಕರ ಮಾರ್ಗದರ್ಶನ ಇದ್ದೇ ಇರುತ್ತದೆ. ಹೀಗಾಗಿ ಶಿಕ್ಷಕರು ಕೇವಲ ವಿದ್ಯಾರ್ಥಿಗಳನ್ನು ರೂಪಿಸುವವರಲ್ಲಎ, ಭವಿಷ್ಯದ ಸಮಾಜವನ್ನು ರೂಪಿಸುವ ಶಿಲ್ಪಿಗಳು.
ಸೆಪ್ಟೆಂಬರ್ 5 ಡಾ. ರಾಧಾ ಕೃಷ್ಣನ್ ಅವರ ವಿಶಾಲ ಚಿಂತನೆಯ ಶಿಕ್ಷಕರ ದಿನಾಚರಣೆಯನ್ನು ಆಚರಿಸುವಾಗ ಕೇವಲ ಹೂವು, ಶುಭಾಶಯಗಳಿಗೆ ಸೀಮಿತವಾಗದೆ, ಶಿಕ್ಷಕರು ಕಲಿಸಿದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಗುರು ದಾರಿ ತೋರಿಸುತ್ತಾನೆ ನಡೆಯ ಬೇಕಾದದ್ದು ನಾವು.ಗುರು ಜ್ಞಾನ ನೀಡುತ್ತಾನೆ; ಅದನ್ನು ಬದುಕಿನಲ್ಲಿ ಅಳವಡಿಸಬೇಕಾದದ್ದು ನಮ್ಮ ಕರ್ತವ್ಯ . ನಾವು ಸಮಾಜಮುಖಿಯಾಗಿ ಒಳ್ಳೆಯ ಮನುಷ್ಯರಾಗಿ ಬದುಕುವುದೇ, ಶಿಕ್ಷಕರಿಗೆ ಸಲ್ಲಿಸುವ ಅತ್ಯುತ್ತಮ ಗೌರವ.
ಜ್ಞಾನದ ದೀಪವನ್ನು ಬೆಳಗಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುತ್ತಿರುವ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹೃದಯಪೂರ್ವಕ ಪ್ರಣಾಮಗಳು.
-ಸಂತೋಷ್ ಕುಲಾಲ್ ನೆತ್ತರಕೆರೆ..















