ಮೂಡಬಿದ್ರಿಯ ಯಕ್ಷಗಾನದ ಇತಿಹಾಸದಲ್ಲಿ ಅಸಾಧಾರಣ ಮತ್ತು ಅಸಾಮಾನ್ಯ ರೀತಿಯಲ್ಲಿ ಯಕ್ಷಗಾನ ಕೃಷಿಯಲ್ಲಿ ಸಾಧನೆ ಮಾಡಿರುವ ಎಂ. ಶಾಂತಾರಾಮ ಕುಡ್ವ ರವರಿಗೆ ಈಗ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಇದೇ ಡಿಸೆಂಬರ್ 18 ರಂದು ಶ್ರವಣಬೆಳಗೊಳದ ಶ್ರೀ ಜೈನ ಮಠದ ಆಶ್ರಯದಲ್ಲಿ ನಡೆಯುವ ವೇದಿಕೆಯಲ್ಲಿ ಕರ್ನಾಟಕ ಯಕ್ಷ ಸೇವಾ ರತ್ನ ಬಿರುದು ನೀಡಿ ಗೌರವಿಸಲಿರುವುದು ಸಮಸ್ತ ಮೂಡಬಿದ್ರಿಯ ಯಕ್ಷಗಾನ ಪ್ರಿಯರಿಗೆ ಹೆಮ್ಮೆಯ ವಿಚಾರವಾಗಿದೆ.
ಶ್ರವಣಬೆಳಗೊಳದ ಶ್ರೀ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಮಾಹಾಸ್ವಾಮಿಯವರ ಸಾನ್ನಿಧ್ಯದಲ್ಲಿ ಮಾಜಿ ಪ್ರಧಾನಿ ಶ್ರೀ ದೇವೇಗೌಡ ,ಮಾಜಿ ಸಚಿವ ಯು.ಟಿ ಖಾದರ್ ರವರಿಗೂ ಗೌರವ ಸನ್ಮಾನಗಳು ನಡೆಯಲಿರುವ ಇದೇ ವೇದಿಕೆಯಲ್ಲಿ ಶಾಂತಾರಾಮ ಕುಡ್ವ ರವರಿಗೂ ಈ ಗೌರವ ದೊರೆಯುತ್ತಿರುವುದು ಸದ್ದಿಲ್ಲದೆ ನಡೆಸುತ್ತಿರುವ ಅವರ ಕಾರ್ಯ ಚಟುವಟಿಕೆಗಳಿಗೆ ಸಾಕ್ಷಿ ಎಂದರೆ ಉತ್ಪ್ರೇಕ್ಷೆಯೇನಲ್ಲ.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಮಾತಂತೆ ಕುಡ್ವ ರವರು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವುದು ಕೂಡ ಉತ್ಪ್ರೇಕ್ಷೆಯ ಮಾತಲ್ಲ . ಹುಟ್ಟೂರು ಬಜ್ಪೆಯಿಂದ ಇದೀಗ ಮೂಡಬಿದ್ರೆಯಲ್ಲಿ ನೆಲೆಯಾಗಿರುವ ಕುಡ್ವರವರು ವೃತ್ತಿಯಲ್ಲಿ ದಿನಸಿ ವ್ಯಾಪಾರದ ಜೊತೆಗೆ ಪ್ರವೃತ್ತಿಯಲ್ಲಿ ಯಕ್ಷಗಾನ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಾಗಿ ಇಟ್ಟು ನಿಸ್ವಾರ್ಥ ರೀತಿಯಲ್ಲಿ ತಮ್ಮನ್ನು ತಾವು ಯಕ್ಷಗಾನಕ್ಕೆ ತೊಡಗಿಸಿಕೊಂಡವರು .59 ರ ಹರೆಯದ ಕುಡ್ವರವರು ಮೂಡಬಿದ್ರಿಯ ಶ್ರೀ ಧವಳಾ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದು ಯಕ್ಷಗಾನ ಸಾಹಿತ್ಯದಲ್ಲಿ , ಭಜನಾ ,ನಾಟಕಗಳಿಗೆ ಸಂಭಾಷಣೆ ಬರೆಯುವುದರಲ್ಲಿ ಹವ್ಯಾಸ ಬೆಳೆಸಿಕೊಂಡು ಮುಂದೆ ಅವರು ಯಕ್ಷಗಾನ ವಿಮರ್ಶಕರಾಗಿ ಪತ್ರಿಕೆಗಳಿಗೆ ನೂರಾರು ವಿಮರ್ಶಾ ಲೇಖನಗಳನ್ನು ಬರೆದು , ಜನ ಮನ ಸೂರೆಗೊಂಡವರು ,ಅಭಿಮಾನಿ ವರ್ಗವನ್ನು ಗಳಿಸಿಕೊಂಡವರು.
ಕುಡ್ವರು ರಚಿಸಿದ ಕೊಂಕಣಿ ಯಕ್ಷಗಾನ ಗಳು: ದಾಕ್ಷಾಧ್ವರ ,ಸೀತಾ ಕಲ್ಯಾಣ ,ಶರಸೇತು ಬಂಧನ , ಮಹಿಷಾ ಮರ್ಧಿನಿ ,ಕೃಷ್ಣ ಲೀಲೆ, ಶ್ರೀನಿವಾಸ ಕಲ್ಯಾಣ ,ಕರ್ಣಾರ್ಜುನ , ಚೂಡಾಮಣಿ ,ಪಟ್ಟಾಭಿಷೇಕ , ಶ್ರೀ ಕೃಷ್ಣ ಪರಂಧಾಮ , ಭಾರ್ಗವ ವಿಜಯ ಮುಂತಾದ ಕೊಂಕಣಿ ಯಕ್ಷಗಾನಗಳ ಸಂಭಾಷಣೆ ರಚನೆ , ನಿರ್ದೇಶನ ಹಾಗೂ ಪಾತ್ರ ನಿರ್ವಹಣೆಯನ್ನೂ ಕೂಡ ಅದ್ಭುತ ರೀತಿಯಲ್ಲಿ ಶಾಂತಾರಾಮ ಕುಡ್ವರವರು ನಿರ್ವಹಿಸಿದ್ದಾರೆ .ಕೌರವ ,ಕಾರ್ತವೀರ್ಯ,ರಾವಣ ,ಭೀಷ್ಮ ,ವಿಶ್ವಾಮಿತ್ರ ,ದಕ್ಷ ,ಈಶ್ವರ , ಅರ್ಜುನ ,ದೇವೇಂದ್ರ ,ಹನೂಮಂತ ,ಕರ್ಣ, ಶ್ರೀರಾಮ ,ಶಿಶುಪಾಲ ,ವಾಲಿ ,ಮಾಲಿನಿ ದೂತ, ರಾವಣ ದೂತ ,ಮುಂತಾದ ಯಕ್ಷಗಾನ ಪಾತ್ರಗಳ ನಿರ್ವಹಣೆ . ಹವ್ಯಾಸಿ ತಾಳಮದ್ದಳೆ ಅರ್ಥದಾರಿಯಾಗಿ ನೂರಾರು ಕೂಟಗಳಲ್ಲಿ ಭಾಗವಹಿಸಿ ,ಪ್ರಮುಖ ನಾಯಕ- ಖಳ ನಾಯಕ ಪಾತ್ರಗಳು ,ಹಾಸ್ಯ ,ಸ್ತ್ರೀ ಹೀಗೆ ಎಲ್ಲಾ ಪಾತ್ರಗಳಲ್ಲೂ ಸೈ ಎನಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇತ್ತೀಚೆಗೆ ಅವರ ಮಂಥರೆಯ ಪಾತ್ರ ಅವರಿಗೆ ತುಂಬಾ ಜನಪ್ರಿಯತೆಯನ್ನು ಕೊಟ್ಟಿದ್ದು , ಅವರ ಎದುರಾಳಿ ಕಲಾವಿದರುಗಳು ಕೂಡ ಅವರನ್ನು ಮುಕ್ತ ಕಂಠದಿಂದ ಹೊಗಳಿರುವುದು ಅವರ ಉತ್ತಮ ಪಾತ್ರ ನಿರ್ವಹಣೆಗೆ ಸಂದ ಗೌರವವಾಗಿದೆ .
ಯಕ್ಷಗಾನ ಸಂಘಟಕ : ಯಕ್ಷ ಸಂಗಮ ಮೂಡಬಿದ್ರಿ ಯ ಸಂಚಾಲಕರಾಗಿ ಕಳೆದ 2 ದಶಕಗಳಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ಸಂಮಾನ ಹಾಗೂ ಇದೀಗ ಮರೆಯಾಗುತ್ತಿರುವ ರಾತ್ರಿ ತಾಳಮದ್ದಳೆ ಕೂಟದ ಆಯೋಜನೆ ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಇಡೀ ರಾತ್ರಿ ಜರಗುವ ಏಕೈಕ ತಾಳಮದ್ದಳೆ ಕೂಟ ಮೂಡಬಿದ್ರಿಯಲ್ಲಿ ಕುಡ್ವರ ಸಂಘಟನೆಯಿಂದ ಜರುಗುತ್ತಿದೆ ಎಂಬ ಹೆಗ್ಗಳಿಕೆ ಅವರದ್ದಾಗಿದೆ .
ಯಕ್ಷೋಪಾಸನಮ್ ನ ಸ್ಥಾಪಕರಾಗಿ ,ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಗಳಿಂದ ಪ್ರತೀ ಮಂಗಳವಾರ ಮೂಡಬಿದ್ರಿಯ ಹೊಸ ಮಾರಿಗೂಡಿಯಲ್ಲಿ ವಾರದ ಕೂಟದ ಸಂಯೋಜನೆಯನ್ನೂ ಮಾಡಿದ್ದಾರೆ .ಈ ಸಂಘದ ಮೂಲಕ ಹಲವಾರು ಊರುಗಳಲ್ಲಿ 500 ಕ್ಕೂ ಮಿಕ್ಕಿ ಕೂಟಗಳ ಪ್ರದರ್ಶನ , ಈ ಸಂಘದ ಮೂಲಕ ಹತ್ತಾರು ಕಲಾವಿದರು ಇಂದು ವಿವಿಧ ಕಡೆಗಳಲ್ಲಿ ಸುಪ್ರಸಿದ್ಧ ಕೂಟಗಳಲ್ಲಿ ಅರ್ಥದಾರಿಗಳಾಗುಯೂ ಕುಡ್ವ ರವರು ಭಾಗವಹಿಸಿದ್ದಾರೆ . ಇತ್ತೀಚೆಗೆ ಯಕ್ಷೋಪಾಸನಮ್ ನ ಮಹಿಳಾ ತಂಡವೂ ರೂಪುಗೊಂಡಿದ್ದು ಅದರ ಮೂಲಕ ಇಂದು ಹಲವಾರು ಮಹಿಳಾ ಪ್ರತಿಭೆಗಳು ಅರ್ಥದಾರಿಗಳಾಗಿ ಕಾಣಿಸಿಕೊಂಡಿದ್ದಾರೆ.
ಶ್ರೀ ಕುಡ್ವ ರವರು "ಯಕ್ಷ ಸಾರಸ್ವತ " , ಕೊಂಕಣಿ ಸಾಂಸ್ಕ್ರತಿಕ ಸಂಘದ ಸ್ಥಾಪಕರೂ ಹೌದು ಹಾಗೂ ಪ್ರಸಕ್ತ ಅಧ್ಯಕ್ಷರೂ ಆಗಿ ಸಕ್ರೀಯರಾಗಿದ್ದಾರೆ.10ಕ್ಕೂ ಮಿಕ್ಕಿ ಕೊಂಕಣಿ ನಾಟಕಗಳ ರಚಿದಿದ್ದಾರೆ . ಇವೆಲ್ಲವೂ ಮುಂಬೈ, ಬೆಂಗಳೂರು , ಕಾಂಇಗಾಡು ಮುಂತಾದ ಕಡೆಗಳಲ್ಲಿ ಪ್ರದರ್ಶನಗೊಂಡಿವೆ . ಕುಡ್ವರು ರಚಿಸಿದ *ಭಗವಾನ್ ವೇದವ್ಯಾಸ* ಎಂಬ ಪೌರಾಣಿಕ ನಾಟಕವನ್ನು ಮಂಗಳೂರಿನ *ಕೊಂಕಣಿ ಸಾಂಸ್ಕೃತಿಕ ಸಂಘ* ದವರು ಹಲವಾರು ಕಡೆಗಳಲ್ಲಿ ಪ್ರದರ್ಶಿಸಿ , ಕುಡ್ವರೂ ಕಲಾವಿದರಾಗಿ ಭಾಗವಹಿಸಿ , ಈ ನಾಟಕವು ಇಪ್ಪತ್ತಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿವೆ . ಭರತ ನಾಟ್ಯ ಮತ್ತು ಟ್ಯಾಬ್ಲೋ ಗಳಿಗೂ ಪದ್ಯ ರಚನೆ ಮಾಡಿದ ಹಿರಿಮೆ ಕುಡ್ವರವರದ್ದು .
ಮೂಡಬಿದ್ರಿಯ ಪ್ರಸಿದ್ಧ ಶ್ರೀ ವೆಂಕಟರಮಣ ಮತ್ತು ಶ್ರೀ ಹನೂಮಂತ ದೇವಸ್ಥಾನದ ಚುನಾಯಿತ ಮೊಕ್ತೇಸರರೂ ಆಗಿರುವ ಕುಡ್ವರವರು ದೇವಸ್ಥಾನದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧುರಿಣರಾಗಿದ್ದಾರೆ.ಸಾರ್ವಜನಿಕ ಸೇವಾ ಕ್ಷೇತ್ರದಲ್ಲೂ ಕುಡ್ವರದ್ದು ಎತ್ತಿದ ಕೈ . ಮೂಡಬಿದ್ರಿಯ ವಂದೇ ಮಾತರಂ ಸೌಹಾರ್ದ ಬ್ಯಾಂಕಿನ ಯಶಸ್ವೀ ನಿರ್ದೇಶಕರೂ ಅವರಾಗಿದ್ದಾರೆ . ಮೂಡಬಿದ್ರಿಯ ಪ್ರೇರಣಾ ಟ್ರಸ್ಟ್ ನ ಸದಸ್ಯ ಹಾಗೂ ಸೇವಾಂಜಲಿ ಟ್ರಸ್ಟ್ ನ ಕಾರ್ಯದರ್ಶಿಯಾಗಿ ಕನ್ನಡ ಶಾಲೆಯ ಕಾರ್ಯನಿರ್ವಹಣೆಯಲ್ಲೂ ಗುರುತಿಸಿಕೊಂಡಿದ್ದಾರೆ .
ಬಾಲ್ಯದಿಂದಲೇ ಆರ್ ಎಸ್ ಎಸ್ ನ ಸ್ವಯಂಸೇವಕರಾಗಿದ್ದು , ವಿಶ್ವ ಹಿಂದೂ ಪರಿಷತ್ ಮೂಡಬಿದ್ರಿ ಪ್ರಖಂಡದ ಕಾರ್ಯದರ್ಶಿಯಾಗಿ ,10 ವರ್ಷಗಳ ಸೇವೆ ಸಲ್ಲಿಸಿ ಪ್ರಸ್ತುತ ಮೂಡಬಿದ್ರಿ ವಲಯದ ವಿಶ್ವ ಹಿಂದೂ ಪರಿಷತ್ ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ,ಶಾರದೋತ್ಸವ
ಸಮಿತಿ ,ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ , ಶನೀಶ್ವರ ಪೂಜಾ ಸಮಿತಿ , ಸಾಂಸ್ಕ್ರತಿಕ ಚಟುವಟಿಕೆ ಗಳಲ್ಲಿ ಅಲ್ಲದೆ ಆಟೋಟ ಕ್ಷೇತ್ರವಾದ ಕ್ರಿಕೇಟ್ ನಲ್ಲೂ ಸಕ್ರೀಯವಾಗಿ ಕುಡ್ವರವರು ಭಾಗವಹಿಸುತ್ತಿದ್ದಾರೆ .
ಕುಡ್ವರವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ . ಪ್ರಶಸ್ತಿಗಳು ಅವರನ್ನು ಅರಸಿ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ . ಬೆಳೆದ ಊರು ಮೂಡಬಿದ್ರಿಯಲ್ಲಿ ಇಪ್ಪತ್ತಕ್ಕೂ ಕ್ಕೂ ಹೆಚ್ಚು ಬಾರಿ ಅವರಿಗೆ ಬಿರುದು ಸಹಿತ ಪ್ರಶಸ್ತಿ ಪ್ರಾಪ್ತವಾಗಿದೆ . ಮಂಗಳೂರು , ಕಾಂಇಗಾಡು ,ಕುಂದಾಪುರ , ಬಜ್ಪೆ ,ಮಿತ್ತಬೈಲು ,ಕಾರ್ಕಳ ,ಕಟಪಾಡಿ , ಉಡುಪಿ ,ವಿಟ್ಲ ,ಪಾವಂಜೆ ,ಬೆಂಗಳೂರು,ಮುಂಬೈ,ದೂರದ ಬಹರೈನ್ ,ದುಬೈ , ಮುಂತಾದ ಕಡೆಗಳಲ್ಲಿ ನೂರಕ್ಕೂ ಮಿಕ್ಕಿ ಸನ್ಮಾನಗಳಾಗಿವೆ.
ಕಿನ್ನಿಗೋಳಿಯ ಯಕ್ಷ ಲಹರಿ ಯಿಂದ 2016ನೇ ಸಾಲಿನ ಶ್ರೇಷ್ಠ ಸಂಘಟಕ ಪ್ರಶಸ್ತಿ,2014 ಮತ್ತು 2016 ರಲ್ಲಿ ಮಂಗಳೂರಿನ ಕೊಂಕಣಿ ಸಾಂಸ್ಕ್ರತಿಕ ಕೇಂದ್ರ ದಿಂದ *ಕೊಂಕಣಿ ರಾಯಭಾರಿ* ಬಿರುದಿನೊಂದಿಗೆ ಗೌರವ ಸನ್ಮಾನ, ಶೇಣಿ ಶತಮಾನೋತ್ಸವ ಸನ್ಮಾನ , ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲೆ(ರಿ) ನ ಪ್ರಶಸ್ತಿ , ಕುರಿಯ ವಿಠ್ಠಲ ಶಾಸ್ತ್ರಿ ಪ್ರತಿಷ್ಠಾನದ ಸನ್ಮಾನ ,ಮೂಡಬಿದ್ರಿಯ ಪ್ರತಿಷ್ಠಿತ ಎಂ.ಸಿ.ಎಸ್ ಬ್ಯಾಂಕಿನಿಂದ ಸನ್ಮಾನ ,ಮೂಡಬಿದ್ರಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ವತಿಯಿಂದ ಸನ್ಮಾನ ಕುಡ್ವರವರ ಮುಡಿಗೇರಿವೆ .
ಉದಯವಾಣಿ , ಹೊಸದಿಗಂತ ,ವಿಜಯ ಕರ್ನಾಟಕ ,ಪ್ರಜಾವಾಣಿ ,ವಿಜಯವಾಣಿ , ಕನ್ನಡಪ್ರಭ , ಹರ್ಷವಾಣಿ ,ಜೈ ಕನ್ನಡಮ್ಮ , ಡಂಗುರ ವಾರಪತ್ರಿಕೆ , ಸುಧಾ ವಾರಪತ್ರಿಕೆ , ಬಲ್ಲಿರೇನಯ್ಯ , ಕಣಿಪುರ ಪತ್ರಿಕೆ , ಯಕ್ಷದೀಪ , ಯಕ್ಷಪ್ರಭಾ ,ನಗಾರಿಧ್ವನಿ ,ತುಳುನಾಡು ವಾರ್ತೆ ಮುಂತಾದ ಪತ್ರಿಕೆಗಳಲ್ಲಿ ಯಕ್ಷಗಾನ ಸಂಬಂಧಿ ಬರಹಗಾರರಾಗಿ , ವಿಮರ್ಶಾ ಬರಹಗಾರರಾಗಿ 500ಕ್ಕೂ ಮಿಕ್ಕಿ ಲೇಖನ ಬರೆದು ಯಕ್ಷಗಾನ ಪ್ರೇಮಿಗಳ ನೆಚ್ಚಿನ ಲೇಖಕರಾಗಿದ್ದರೆ .ಮೂಡಬಿದ್ರಿ ಯ ಶ್ರೀ ವೆಂಕಟರಮಣ ದೇವಸ್ಥಾನದ "ಲಕ್ಷ್ಮೀ ರಮಣ " ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕನಾಗಿ ಕುಡ್ವ ರವರು ಕಾರ್ಯ ನಿರ್ವಹಿಸಿದ್ದಾರೆ .
ಮಂಗಳೂರಿನ ಹೆಸರುವಾಸಿಯಾದ ನಮ್ಮ ಟಿ.ವಿ.ಚ್ಯಾನೆಲ್ ನಲ್ಲಿ 25 ವಾರಗಳ ಕಾಲ ಪ್ರತೀ ಭಾನುವಾರದಲ್ಲಿ ಒಂದು ಗಂಟೆಗಳ ಕಾಲ ಯಕ್ಷಗಾನದಲ್ಲಿ ಸುಪ್ರಸಿದ್ಧರಾಗಿ ಮಿಂಚಿ ಮರೆಯಾದ ಕಲಾವಿದರನ್ನು ಪರಿಚಯಿಸುವ *ನಮ್ಮ ಯಕ್ಷ ದಿಗ್ಗಜರು* ಎಂಬ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸಿದ ಅನುಭವದ ಹೆಗ್ಗಳಿಕೆ ನಮ್ಮ ಕುಡ್ವರಿಗೆ ಸಲ್ಲುತ್ತದೆ . ಇದೊಂದು ಯಕ್ಷಗಾನ ಕಲಾವಿದರ ದಾಖಲೀಕರಣಕ್ಕೆ ಕೂಡ ಅತ್ಯಂತ ಸಹಕಾರಿಯಾಗಿದೆ .ಇದು ಯಕ್ಷಗಾನ ಆಸಕ್ತರಿಗೆ ಯು ಟ್ಯೂಬ್ ನಲ್ಲೂ ಕೂಡ ಲಭ್ಯವಿದೆ ಎಂದು ತಿಳಿಸಲು ಹರ್ಷಿಸುತ್ತೇನೆ .
ಶಾಂತಾರಾಮ ಕುಡ್ವ ರವರು ಹಲವಾರು ಯಕ್ಷಗಾನ ಸಮ್ಮೇಳನಗಳಲ್ಲಿ ವಿಮರ್ಶಕನೆಂಬ ನೆಲೆಯಲ್ಲಿ ಉಪನ್ಯಾಸಕರಾಗಿ ,ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅಪಾರ ಅನುಭವವನ್ನು ಧಾರೆಯೆರೆದಿದ್ದಾರೆ. ಶ್ರೀ ಕುಡ್ವ ರವರು ಸಾಮಾಜಿಕ ,ಧಾರ್ಮಿಕ ,ಶೈಕ್ಷಣಿಕ ,ಸಾಂಸ್ಕ್ರತಿಕ , ಬ್ಯಾಂಕಿಂಗ್ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಜನಪ್ರಿಯರಾಗಿದ್ದಾರೆ .
ತಮ್ಮ ಪ್ರತಿಯೊಂದೂ ಚಟುವಟಿಕೆಗಳಿಗೂ ಬೆಂಬಲ , ಸಹಕಾರ ನೀಡುವ ಅರ್ಧಾಂಗಿ ಶ್ರೀಮತಿ ಎಂ ಸೌಮ್ಯ ಎಸ್ ಕುಡ್ವ , ಮಗ ಬಿ.ಇ . ಪದವೀಧರ ಎಂ . ಶ್ರೇಯಸ್ ಕುಡ್ವ ,ಮಗಳು ಇಂಜಿನೀರಿಂಗ್ ವಿದ್ಯಾರ್ಥಿನಿ ಎಂ.ಸಾತ್ವಿ ಕುಡ್ವ ರವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುವ ಹೆಗ್ಗಳಿಕೆಯೂ ಕುಡ್ವ ರದ್ದಾಗಿದೆ
ಮೂಡಬಿದ್ರಿಯ ಸುತ್ತ ಮುತ್ತಲಿನ ಎಲ್ಲಾ ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರ ಜೊತೆಗೆ ತೆಂಕು ಬಡಗಿನ ಎಲ್ಲಾ ಕಲಾವಿದರೊಂದಿಗೂ ಸಂಪರ್ಕ ಮತ್ತು ಸ್ನೇಹಮಯದೊಂದಿಗಿದ್ದು ತೆಂಕು ಬಡಗು ಎನ್ನುವ ಬೇಧ ಭಾವವಿಲ್ಲದೆ ಎರಡೂ ಕಡೆಯ ಕಲಾವಿದರನ್ನು ಕರೆಯಿಸಿ ಆಟ-ಕೂಟ ಏರ್ಪಡಿಸಿ ಕಲಾವಿದರ ಮತ್ತು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ . ಅಶಕ್ತ ನೊಂದ ಕಲಾವಿದರನ್ನು ಶೀಘ್ರ ಸ್ಪಂದಿಸಿ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ ಸಜ್ಜನ ಹಾಗೂ ನೈಜ ದಾನಿಯೂ ಹೌದು ಕುಡ್ವ ರವರು .
ದಣಿವರಿಯದ , ತಮಗೆ ಕೆಲಸವಿಲ್ಲ , ಪುರುಸೊತ್ತಿಲ್ಲ ಎನ್ನುವವರಿಗೆ ಮಾದರಿಯಾಗಿರುವ ಶಾಂತಾರಾಮ ಕುಡ್ವ ರವರಿಗೆ ಯಕ್ಷಗಾನ ರಂಗದಲ್ಲಿ ಇನ್ನಷ್ಟು ,ಮತ್ತಷ್ಟು ಸಾಧಿಸಬೇಕೆಂಬ ಛಲ, ಗುರಿ ಇರುವುದು ಖಂಡಿತವಾಗಿಯೂ ಅವರು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಲು ಸೂಕ್ತ ವ್ಯಕ್ತಿ ಎಂಬುದು ಈ ಲೇಖಕ ಹಾಗೂ ಹೆಚ್ಚಿನ ಯಕ್ಷಗಾನ ಅಭಿಮಾನಿಗಳ ಆಸೆಯಾಗಿದೆ .ಶ್ರವಣಬೆಳಗೊಳದ ಜೈನ ಮಠದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಮ್ಮ ಮೂಡಬಿದ್ರಿಯ ಹೆಮ್ಮೆಯ ಪುತ್ರ , ಸಾಂಸ್ಕ್ರತಿಕ ರಾಯಭಾರಿಯಾಗಿರುವ ಶ್ರೀ ಶಾಂತಾರಾಮ ಕುಡ್ವ ರವರಿಗೆ *"ಕರ್ನಾಟಕ ಯಕ್ಷ ಸೇವಾ ರತ್ನ"* ಬಿರುದು ಸಹಿತ ಗೌರವ ಸನ್ಮಾನ ನೆರವೇರಲಿದ್ದು ,ಈ ಅಪೂರ್ವ ಘಳಿಗೆಗೆ ನಾವೆಲ್ಲ ಕಾತರರಾಗಿದ್ದು , ಮುಂದಿನ ದಿನಗಳಲ್ಲಿ ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಅವರ ಮುಡಿಗೇರಲಿ , ಇನ್ನಷ್ಟು ಸಾಹಿತ್ಯಗಳು ,ವಿಮರ್ಶಾ ಲೇಖನಗಳು ಅವರಿಂದ ರಚನೆಯಾಗಲಿ ,ಸಂಘಟನಾ ಕೂಟಗಳು ಪ್ರದರ್ಶನಗೊಳ್ಳಲಿ ,ಯಕ್ಷಗಾನದಲ್ಲಿ ಸುಧಾರಣೆಗಳಾಗಲಿ . ಭಗವಂತನು ಅವರಿಗೆ ಉತ್ತಮೋತ್ತಮ ಆಯುರಾರೋಗ್ಯವನ್ನಿತ್ತು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ನಾಳಿನ ಪ್ರಶಸ್ತಿ ಸಮಾರಂಭ ಕಾರ್ಯಕ್ರಮಕ್ಕೆ ಮೂಡಬಿದ್ರಿಯ ಯಕ್ಷಗಾನ ಪ್ರಿಯರ ಪರವಾಗಿ ಶ್ರೀ ಶಾಂತಾರಾಮ ಕುಡ್ವರಿಗೆ ಶುಭ ಹಾರೈಕೆ.
ರಾಘವೇಂದ್ರ ಭಂಡಾರ್ಕರ್ ಮೂಡಬಿದ್ರಿ














