ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶದಲ್ಲಿ ಮತ್ತೆ ಜನಾಕ್ರೋಶ ಜನಾಕ್ರೋಶ ಹೆಚ್ಚಾಗಿದೆ. ಶಿಕ್ಷಣ ತಜ್ಞ ಹಾಗೂ ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್ಚುಕ್ ಜಂತರ್ ಮಂತರ್‌ನಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ. 2 ದಿನಗಳ ಹಿಂದೆ ವಾಂಗ್ಚುಕ್‌ರನ್ನು ಪೊಲೀಸರು ಹೊತ್ತೊಯ್ದು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರತಿಭಟನಾಕಾರರ ಕಿಚ್ಚು ಕಮ್ಮಿ ಆಗಿಲ್ಲ. ಇವತ್ತು ಸಂಸತ್‌ನ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಪ್ರತಿಭಟನಾಕಾರರು ಕರೆ ನೀಡಿದ್ದ `ಸಂಸತ್ ಚಲೋ’ ಮೆರವಣಿಗೆ ಹಿಂಸಾರೂಪ ಪಡೆದುಕೊಂಡಿದೆ.
ಪೊಲೀಸರು ಹಾಗೂ ʻಕಾಕ್ರೋಚ್ʼಗಳ ನಡುವಿನ ಘರ್ಷಣೆಯಲ್ಲಿ ದೆಹಲಿ ಪೊಲೀಸರು ಹಾಗೂ ಅರೆಸೈನಿಕ ಪಡೆಗಳ ಒಟ್ಟು 118ಕ್ಕೂ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 5 ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವಾರು ಮಂದಿಗೂ ಗಾಯಗಳಾಗಿವೆ.
ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಸಂಸತ್ತಿನ ಮುಂದೆ ಮಂಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಗುಂಪನ್ನು ಚದುರಿಸಲು
ಪೊಲೀಸರು ಅಶ್ರುವಾಯು (ಟಿಯರ್ ಗ್ಯಾಸ್) ಸಿಡಿಸಿದರು ಹಾಗೂ ಲಾಠಿಚಾರ್ಜ್ ನಡೆಸಿದರು.
ಹಿಂಸಾಚಾರದ ವೇಳೆ ಹಲವು ಪೊಲೀಸ್ ಬಸ್‌ಗಳ ಮುಂಭಾಗದ ಗಾಜುಗಳು ಪುಡಿಪುಡಿಯಾಗಿವೆ. ಕೆಲ ಅಂಗಡಿಗಳ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಳಿಕ ದೆಹಲಿ ಪೊಲೀಸರು ಬಹು ಎಫ್‌ಐಆರ್‌ಗಳನ್ನು ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ಫೋನ್ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದಾರೆ.















