ಇಸ್ರೋ ರಾಕೆಟ್ ಲಾಂಚ್‌ಗಿಂತ ರಾಹುಲ್ ರೀ-ಲಾಂಚ್ ಹೆಚ್ಚಾಗಿದೆ: ಪ್ರಧಾನಿ ಮೋದಿ ವ್ಯಂಗ್ಯ, ಕಾಂಗ್ರೆಸ್ ವಿರುದ್ಧ ಕಿಡಿ

Coastal Bulletin
ಇಸ್ರೋ ರಾಕೆಟ್ ಲಾಂಚ್‌ಗಿಂತ ರಾಹುಲ್ ರೀ-ಲಾಂಚ್ ಹೆಚ್ಚಾಗಿದೆ: ಪ್ರಧಾನಿ ಮೋದಿ ವ್ಯಂಗ್ಯ, ಕಾಂಗ್ರೆಸ್ ವಿರುದ್ಧ ಕಿಡಿ

ನವದೆಹಲಿ:ಜಗತ್ತು ಇಂದು ಸ್ಥಿರತೆ ಮತ್ತು ನವ ವ್ಯವಸ್ಥೆಗಾಗಿ ಎದುರುನೋಡುತ್ತಿರುವಾಗ, ಭಾರತದಲ್ಲಿ ಕೆಲವರು ಕೇವಲ ಅರಾಜಕತೆ ಹಾಗೂ ಅವ್ಯವಸ್ಥೆಯ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶೃಂಗಸಭೆಯೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಅತ್ಯಂತ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷವು ಒಂದು ಕುಟುಂಬವನ್ನು ವೈಫಲ್ಯದ ಕಲೆಯಿ೦ದ ರಕ್ಷಿಸಲು ಇಡೀ ದೇಶದ ಪ್ರಗತಿ ಮತ್ತು ಘನತೆಯನ್ನೇ ಪಣಕ್ಕಿಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿಫಲ ಉತ್ಪನ್ನದ ಮರು-ಉಡಾವಣೆ’ ವ್ಯಂಗ್ಯ:

ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತೀವ್ರ ವ್ಯಂಗ್ಯವಾಡಿದ ಪ್ರಧಾನಿ, “ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲೂ ವರ್ಷಕ್ಕೆ ಇಷ್ಟೊಂದು ರಾಕೆಟ್‌ಗಳು ಲಾಂಚ್ ಆಗುವುದಿಲ್ಲ, ಆದರೆ ಕಾಂಗ್ರೆಸ್ ಮಾತ್ರ ತನ್ನ ‘ವಿಫಲ ಉತ್ಪನ್ನ’ವನ್ನು ಪದೇ ಪದೇ ಲಾಂಚ್ ಮಾಡಲು ಶತಪ್ರಯತ್ನ ನಡೆಸುತ್ತಿದೆ. ತನ್ನ ಪಕ್ಷವನ್ನು ತಾನೇ ನಾಶ ಮಾಡಿಕೊಳ್ಳುವುದರ ಬಗ್ಗೆ ನಮಗೆ ತಕರಾರಿಲ್ಲ, ಆದರೆ ಒಂದು ಕುಟುಂಬದ ವೈಫಲ್ಯವನ್ನು ಮುಚ್ಚಿಹಾಕಲು ಭಾರತದ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಅವಹೇಳನ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

ವಿದೇಶಗಳಲ್ಲಿ ದೇಶದ ಮಾನ ಹರಾಜು:

“ಈ ಜನರು ವಿದೇಶಗಳಿಗೆ ಹೋಗಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳನ್ನು ಕೀಳಾಗಿ ಬಿಂಬಿಸುತ್ತಾರೆ. ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವಂತೆ ವಿದೇಶಿ ಶಕ್ತಿಗಳನ್ನು ಬಹಿರಂಗವಾಗಿ ಬೇಡಿಕೊಳ್ಳುತ್ತಾರೆ. ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ, ದ್ರಾಕ್ಷಿ ಹುಳಿ

ಎಂಬ ಕಾರಣಕ್ಕೆ ಇಡೀ ದ್ರಾಕ್ಷಿ ಬಳ್ಳಿಯನ್ನೇ ನಾಶ ಮಾಡಲು ಹೊರಟಿದ್ದಾರೆ” ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದೊಳಗೆ ನೆಹರೂ-ಗಾಂಧಿ ಕುಟುಂಬವು ಹೊರೆಯಾಗಿ ಪರಿಣಮಿಸಿದೆ ಎಂದ ಪ್ರಧಾನಿ, “ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು ಈ ಸತ್ಯವನ್ನು ಖಾಸಗಿ ಮಾತುಕತೆಗಳಲ್ಲಿ ಒಪ್ಪಿಕೊಳ್ಳುತ್ತಾರೆ. ಸಂಸತ್ತಿನಲ್ಲಿ ಸರ್ಕಾರದ ನೀತಿಗಳನ್ನು ಪ್ರಜಾಸತ್ತಾತ್ಮಕವಾಗಿ ವಿರೋಧಿಸಲು ಬಯಸುವ ಹಲವು ಪ್ರತಿಭಾನ್ವಿತ ಯುವ ಸಂಸದರಿದ್ದಾರೆ. ಆದರೆ, ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಮುಂಚೂಣಿಯಲ್ಲಿಡಲು ಕಾಂಗ್ರೆಸ್ ಇಡೀ ಸದನದ ಕಲಾಪವನ್ನೇ ನಡೆಯಲು ಬಿಡದೆ ಇತರರ ಅವಕಾಶವನ್ನು ಕಸಿದುಕೊಳ್ಳುತ್ತಿದೆ” ಎಂದು ಆರೋಪಿಸಿದರು.

ಕಾಂಗ್ರೆಸ್ ತನ್ನ ಸ್ವಂತ ಅಸ್ತಿತ್ವ ಕಳೆದುಕೊಂಡು ಮಿತ್ರಪಕ್ಷಗಳ ಮತಗಳ ಮೇಲೆ ಅವಲಂಬಿತವಾಗಿರುವ ‘ಪರಾವಲಂಬಿ’  ಪಕ್ಷವಾಗಿದೆ ಎಂದು ಕರೆದ ಅವರು, “ಕಾಂಗ್ರೆಸ್‌ನ ಆಲೋಚನಾ ಶಕ್ತಿಯನ್ನು ಅರ್ಬನ್ ನಕ್ಸಲರು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಹಳ್ಳಿ-ಕಾಡುಗಳಲ್ಲಿ ವಿನಾಶ ಸೃಷ್ಟಿಸುತ್ತಿದ್ದ ಮನಸ್ಥಿತಿಯ ಜನರು ಈಗ ಪಕ್ಷವನ್ನು ಆವರಿಸಿಕೊಂಡು ಇಡೀ ದೇಶವನ್ನು ಅಸ್ಥಿರಗೊಳಿಸಲು ಹವಣಿಸುತ್ತಿದ್ದಾರೆ” ಎಂದು ಕಟುವಾಗಿ ಎಚ್ಚರಿಸಿದರು.

Leave a Comment