ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಎರಡು ದಿನಗಳ ಕಾಲ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀ ಶಾರದೋತ್ಸವದ ದಶಮಾನೋತ್ಸವ "ದಶಾರದ ಸಂಭ್ರಮ-2026" ಸೋಮವಾರ ಅರ್ಥಪೂರ್ಣವಾಗಿ, ವೈಭವಯುತವಾಗಿ ಸಮಾಪನಗೊಂಡಿತು.
ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ತಾಲೂಕು ಮಟ್ಟದ ಆಯ್ದ ತಂಡಗಳಿಂದ ಮಕ್ಕಳ ಕುಣಿತ ಭಜನಾ ಸ್ಪರ್ಧೆ, ನೃತ್ಯ ವೈಭವ, ಮಹಾಪೂಜೆ ನಡೆಯಿತು.
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಕೃಷ್ಣ ಕುಮಾರ ಪೂಂಜ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ತು ಅಧ್ಯಕ್ಷ ರವಿಶಂಕರ ಶೆಟ್ಟಿ ಬಡಾಜೆ ಧಾರ್ಮಿಕ ಮಾತುಗಳನ್ನಾಡಿದರು. ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಪಾದ ಪಾಂಗಣ್ಣಾಯ, ದ.ಕ.ಜಿಲ್ಲಾ ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಸೇವ್ ಲೈಫ್ ಚಾರೀಟೇಬಲ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಉದ್ಯಮಿ ಗಣೇಶ ಪೂಜಾರಿ ಸಿದ್ಧಕಟ್ಟೆ, ಮಂಗಳೂರು ಮಯೂರ ಪ್ರತಿಷ್ಠಾನದ ಅಧ್ಯಕ್ಷ ಸದಾಶಿವ ಐತಾಳ್ ಕೃಷ್ಣಾಪುರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಉದ್ಯಮಿಗಳಾದ ಧೀರಜ್ ನಾಯ್ಕ್ ಉಳಿಪ್ಪಾಡಿ
ಗುತ್ತು, ವಿನಾಯಕ ಪ್ರಭು ಆಲದಪದವು, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಸತೀಶ ಶೆಟ್ಟಿ ಪಟ್ಲ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಸ್ವಾಗತಿಸಿದರು. ದಶಮಾನೋತ್ಸವ ಸಾಂಸ್ಕ್ರತಿಕ ಸಮಿತಿ ಸಂಚಾಲಕ ಗೋಪಾಲ ಅಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಮಟ್ಟದ ಭಜನಾ ಸ್ಪರ್ಧೆಯ ಫಲಿತಾಂಶವನ್ನು ಶಿಕ್ಷಕ ಹರೀಪ್ರಸಾದ್ ಆರ್ ಮತ್ತು ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ಚಿತ್ರಕಲಾ ಶಿಕ್ಷಕ ಮುರಲೀಕೃಷ್ಣ ರಾವ್ ವಾಚಿಸಿದರು.
ಟ್ರಸ್ಟ್ ಸದಸ್ಯ ಸತೀಶ್ ಕರ್ಕೆರಾ ಕಯ್ಯಾಬೆ ವಂದಿಸಿದರು. ಟ್ರಸ್ಟ್ ಕಾರ್ಯಾಧ್ಯಕ್ಷ ಟಿ.ಹರೀಂದ್ರ ಪೈ, ಉಪಾಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುದೀಂದ್ರ ಶೆಟ್ಟಿ ಎರ್ಮೆನಾಡು, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ನಾಯ್ಕ ಎರ್ಮೆನಾಡು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ, ಸಂಚಾಲಕ ಶಂಕರ ಶೆಟ್ಟಿ ಬೆದ್ರಮಾರು, ಟ್ರಸ್ಟ್ ಮಂಡಳಿಯ ಸದಸ್ಯರಾಗಿರುವ ಸುಪ್ರೀತ್ ಜೈನ್ ಎಡ್ತೂರುಗುತ್ತು, ಪ್ರಶಾಂತ್ ಕೋಟ್ಯಾನ್ ಮೇಗಿನಮನೆ, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ನಂತರ ಯಕ್ಷಗಾನ ತಾಳಮದ್ದಳೆ, ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಿತು.













