ಬಿ.ಸಿ.ರೋಡ್‌: ಅ. 23, 24ರಂದು ಕಲಾನಿಕೇತನದ ‘ರಜತ ಕಲಾಯಾನ’ ಸಮಾರೋಪ ಎರಡು ದಿನಗಳ ನೃತ್ಯೋತ್ಸವ ಕಾರ್ಯಕ್ರಮ

Coastal Bulletin
ಬಿ.ಸಿ.ರೋಡ್‌: ಅ. 23, 24ರಂದು ಕಲಾನಿಕೇತನದ ‘ರಜತ ಕಲಾಯಾನ’ ಸಮಾರೋಪ ಎರಡು ದಿನಗಳ ನೃತ್ಯೋತ್ಸವ ಕಾರ್ಯಕ್ರಮ

ಬಂಟ್ವಾಳ: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ.) ಕಲ್ಲಡ್ಕ ಸಂಸ್ಥೆಯ 25 ವರ್ಷಗಳ ಕಲಾಸೇವೆಯ ರಜತ ಸಂಭ್ರಮದ ಅಂಗವಾಗಿ ಆಯೋಜಿಸಲಾದ ‘ರಜತ ಕಲಾಯಾನ’ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅ. 23 ಮತ್ತು 24ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ವಿದ್ಯಾ ಮನೋಜ್ ಹೇಳಿದರು.

ಅವರು ಸೋಮವಾರ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅ. 23ರಂದು ಸಂಜೆ 4 ಗಂಟೆಗೆ ಪುತ್ತೂರಿನ ವಿಶ್ವಕಲಾನಿಕೇತನ ಸಂಸ್ಥೆಯ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಗಣ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು.

ಅ. 24ರಂದು ಸಂಜೆ 5.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಗೋವಾದ ಗೋಮಂತಕ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನೀಲೇಶ್ ಪಿ. ಕೊರ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಮುಂಬೈನ ಭರತನಾಟ್ಯ ಕಲಾವಿದ,

ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತ ಪವಿತ್ರಕೃಷ್ಣ ಭಟ್ ಅವರಿಂದ ‘ನೃತ್ಯಾವಳಿ’ ಭರತನಾಟ್ಯ ಪ್ರದರ್ಶನ ನಡೆಯಲಿದೆ. ನಂತರ ಶಿಜಿತ್ ನಂಬಿಯಾರ್ ಅವರ ಪರಿಕಲ್ಪನೆ ಮತ್ತು ನೃತ್ಯಸಂಯೋಜನೆಯಲ್ಲಿ ಮೂಡಿಬಂದ ‘ಕಾವ್ಯಂ ಅಂತರಾಳದ ಕವಿತೆ’ ಕಾರ್ಯಕ್ರಮವನ್ನು ಚೆನ್ನೈನ ಪಾರ್ವತಿ ಮೆನನ್ ಮತ್ತು ತಂಡ ಪ್ರಸ್ತುತಪಡಿಸಲಿದೆ ಎಂದರು.

ಕಲಾನಿಕೇತನ ಸಂಸ್ಥೆಯು ಕಳೆದ 25 ವರ್ಷಗಳಿಂದ ಕಲ್ಲಡ್ಕ, ಬಿ.ಸಿ.ರೋಡ್ ಮತ್ತು ಬೆಳ್ತಂಗಡಿಯಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದೆ. ಸಂಸ್ಥೆಯ ಹಲವು ವಿದ್ಯಾರ್ಥಿಗಳು ದೂರದರ್ಶನದ ಶ್ರೇಣೀಕೃತ ಕಲಾವಿದರಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನ ಪಡೆದಿದ್ದಾರೆ. ಅನೇಕರು ಭರತನಾಟ್ಯದಲ್ಲಿ ವಿದ್ವತ್ ಪದವಿ ಗಳಿಸಿ, ರಂಗಪ್ರವೇಶವನ್ನೂ ನೀಡಿದ್ದಾರೆ.

ರಜತ ಸಂಭ್ರಮದ ಅಂಗವಾಗಿ ನಡೆಯುವ ಎರಡು ದಿನಗಳ ನೃತ್ಯೋತ್ಸವದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿದ್ಯಾ ಮನೋಜ್ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ ಮನೋಜ್, ಆಶಾಲತಾ, ಲಕ್ಷ್ಮಣ್ ಅಗ್ರಬೈಲ್, ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು.

Leave a Comment