ಹೇರಳವಾದ ,ಕಂಗೊಳಿಸುವ ಮನಸ್ಸಿಗೆ ಮುದ ನೀಡುವ ಹಸಿರು ಸಸ್ಯ ಸಂಪತ್ತಿನ ಸ್ಥಳದಲ್ಲಿರುವ ಬೆಳ್ತಂಗಡಿ ತಾಲೂಕಿನ ಪುಟ್ಟ ಗ್ರಾಮವಾದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ನಾಳದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ನಾಳ ಶ್ರೀ ದುರ್ಗಾಪರಮೇಶ್ವರಿ ಕ್ರಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯು ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದು ಈ ಐತಿಹಾಸಿಕ ಕ್ಷಣಕ್ಕೆ ಡಿಸೆಂಬರ್18 ರ ಮಾರ್ಗಶಿರ ಶುದ್ಧ ಚತುರ್ದಶಿಯ ಶನಿವಾರ ಸಾಯಂಕಾಲ 6 ಗಂಟೆಯ ನಂತರದ ಗೋಧೂಳಿ ಮೂಹೂರ್ತ ಸಮಯದ ಕ್ಷಣಗಣನೆ ಇದೀಗ ಪ್ರಾರಂಭವಾಗಿದೆ.
ಅಂದು ಮೇಳ ಸ್ಥಾಪನೆಗೆ ಸಂಕಲ್ಪಿಸಿದ ಮನಸ್ಸುಗಳು ಕೂಡ ಕ್ಷೇತ್ರ ದೇವತೆಯೂ ಗ್ರಾಮದೇವತೆಯೂ ಆದ ಶ್ರೀ ದುರ್ಗಾಪರಮೇಶ್ವರಿ ದೇವಿಯು ಇಷ್ಟು ಬೇಗ ತಮ್ಮ ಇಷ್ಟಾರ್ಥ ಈಡೇರಿಸುತ್ತಾಳೆಂಬುದನ್ನು ಅವರುಗಳು ಕೂಡ ಎಣಿಸಿರಲಾರರೆಂಬುದು ಎಲ್ಲರ ಸತ್ಯವಾದ ಮಾತಾಗಿದೆ.ಎಲ್ಲವೂ ದೈವ ಕೃಪೆ ಎಂಬುದು ಇಲ್ಲಿನ ಎಲ್ಲರ ಅಭಿಮತವಾಗಿದೆ.
ಶ್ರೀ ದೇವಸ್ಥಾನದ ಪೂರ್ವಾಪರ ಅವಲೋಕನ ಮಾಡಿದಾಗ ,ನಮಗೆ ಈ ಕ್ಷೇತ್ರದಿಂದ ಯಕ್ಷಗಾನ ಮೇಳ ಹೊರಟ ಬಗ್ಗೆ ಉಲ್ಲೇಖ ಸಿಗದಿದ್ದರೂ ವರ್ಷಕ್ಕೊಮ್ಮೆ ಶ್ರೀ ದೇವಿಯ ಸನ್ನಿಧಾನದಲ್ಲಿ ಗೆಜ್ಜೆ ಕಟ್ಟುವ ಸಂಪ್ರದಾಯ ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ ಎಂದು ಈ ಕ್ಷೇತ್ರದ ಪ್ರಧಾನ ಅರ್ಚಕರೂ,ಈ ನೂತನ ಮೇಳದ ಪ್ರಧಾನ ವ್ಯವಸ್ಥಾಪಕರೂ ಆದ ವೇದಮೂರ್ತಿ ಶ್ರೀ ರಾಘವೇಂದ್ರ ಆಸ್ರಣ್ಣರವರು ತಿಳಿಸುತ್ತಾರೆ. ಅಲ್ಲದೆ ಪೂರ್ವದಲ್ಲಿ ಕೆಲವಾರು ಯಕ್ಷಗಾನ ಸಂಘಟನೆಗಳು ನಾಳ ಗ್ರಾಮದಲ್ಲಿ ಹಾಗೂ ಸುತ್ತ ಮುತ್ತ ವರ್ಷಕ್ಕೆ 10ರಿಂದ--15ರಷ್ಟು ಯಕ್ಷಗಾನ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದ್ದುದ್ದನ್ನು ಅವರು ಸ್ಮರಿಸುತ್ತಾರೆ. ಹಾಗೂ ಕಳೆದ 5 ವರ್ಷಗಳಿಂದ ಮನೆ ಮನೆಗೆ ಭೇಟಿ ನೀಡಿ ಲಘು ಯಕ್ಶಗಾನ ಪ್ರದರ್ಶನ ನೀಡುವ ಚಿಕ್ಕ ಮೇಳ ಮಳೆಗಾಲದ ಸಂದರ್ಭದಲ್ಲಿ ಪ್ರದರ್ಶನ ನೀಡುತ್ತಿದ್ದು, ಈ ನಿಟ್ಟಿನಲ್ಲಿ ನೋಡುವಾಗ ಶ್ರೀ ಕ್ಷೇತ್ರದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಯಕ್ಷಗಾನ ಪ್ರಿಯೆ,ನಾದ ಪ್ರಿಯೆ ಎಂಬುದಕ್ಕೆ ಇವುಗಳಿಂದ ಪುಷ್ಟಿ ಸಿಗುತ್ತವೆ.ಹಾಗೂ ನಾಳ ಕ್ಷೇತ್ರಕ್ಕೂ ಯಕ್ಷಗಾನ ಸೇವೆಗೂ ನಂಟಿದೆ ಎಂಬುದು ಸಾಬೀತಾಗುತ್ತಿದೆ.
ಸ್ವತಃ ಯಕ್ಷಗಾನ ಕಲಾವಿದರೂ, ಸಂಘಟಕರೂ ಆಗಿರುವ ಶ್ರೀ ಕ್ಷೇತ್ರದ ಪ್ರಧಾನ ಆರ್ಚಕ ವೇ.ಮೂ.ಶ್ರೀ ರಾಘವೇಂದ್ರ ಆಸ್ರಣ್ಣರವರ ಸಂಕಲ್ಪದ ಹಾಗೂ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಭುವನೇಶ್ವರ ಜಿ ಹಾಗೂ ಸಮಿತಿಯ ಸರ್ವ ಸದಸ್ಯರ,ಹಾಗೂ ಗ್ರಾಮಸ್ಥರ ಸಹಕಾರ,ಪ್ರೋತ್ಸಾಹದಿಂದ ಎಲ್ಲಕ್ಕಿಂತಲೂ ಹೆಚ್ಚಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದಿಂದ ಒಂದು ಹಂತಕ್ಕೆ ಬಂದಿರುವ ಈ ನೂತನ ಮೇಳದ ಪ್ರಥಮ ಸೇವೆಯಾಟ ಪಾಂಡವಶ್ವಾಮೇಧ ಪೌರಾಣಿಕ ಪ್ರಸಂಗವು ಡಿಸೆಂಬರ್18 ರ ಶನಿವಾರದಂದು ಸಂಜೆ 6 ರ ನಂತರ ನೆರವೇರಲಿದ್ದು ಶ್ರೀ ಕ್ಷೇತ್ರ ಈ ನಿಟ್ಟಿನಲ್ಲಿ ಸಜ್ಜಾಗಿದ್ದು ಬೆಳ್ತಂಗಡಿ ತಾಲೂಕಿನಾದ್ಯಂತ ಯಕ್ಷಗಾನ ಪ್ರಿಯ ಜನತೆ ಈ ಐತಿಹಾಸಿಕ ಕ್ಷಣಕ್ಕೆ ಕಾತರರಾಗಿದ್ದಾರೆ..ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯೂ ನೆರವೇರಲಿದೆ ಎಂದೂ ಶ್ರೀ ಆಸ್ರಣ್ಣರವರು ತಿಳಿಸಿದ್ದಾರೆ.
ಹೆಸರಾಂತ ಉದ್ಯಮಿ ಶಶಿಧರ ಶೆಟ್ಟಿಯವರು ಮೇಳಕ್ಕೆ ಬೆಳ್ಳಿಯ ಕಿರೀಟ ಮತ್ತು ಬೆಳ್ಳಿಯ ಚಕ್ರವನ್ನು ಉದಾರವಾಗಿ
ನೀಡಿದ್ದು ,ಯಕ್ಷದ್ರುವ ಪಟ್ಲ ಶ್ರೀ ಸತೀಶ್ ಶೆಟ್ಟಿಯವರು ತ್ರಿಕರಣ ಪೂರ್ವಕವಾಗಿ ನೂತನ ಮೇಳಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದನ್ನು ಶ್ರೀ ರಾಘವೇಂದ್ರ ಆಸ್ರಣ್ಣರವರು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಾರೆ.ಬೆಳ್ತಂಗಡಿಯ ಜನಪ್ರಿಯ ಶಾಶಕರಾದ ಶ್ರೀ ಹರೀಶ್ ಪೂಂಜಾರವರ ಪ್ರೋತ್ಸಾಹವನ್ನು ಕೂಡ ಶ್ರೀ ಆಸ್ರಣ್ಣರವರು ಕೊಂಡಾಡಿದ್ದಾರೆ.
ಈ ನೂತನ ಮೇಳ ಉದ್ಘಾಟನೆಯಾಗುವ ಡಿಸೆಂಬರ್18 ರ ಶನಿವಾರ ದಂದು ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಗಣಹೋಮ ನೆರವೇರಿಸಿ,ನಂತರ ಕ್ಷೇತ್ರದ ತಂತ್ರಿಗಳಾದ ಶ್ರೀ ಬಾಲಕೃಷ್ಣ ಪಾಂಗಣ್ಣಾಯರವರು ಬೆಳ್ಳಿಯ ಕಿರೀಟಕ್ಕೆ ಕ್ಷೇತ್ರ ದೇವತೆಯನ್ನು ಆಹ್ವಾನ ಮಾಡಿಕೊಂಡು ಮೇಳಾರ್ಪಣೆ ಮಾಡಲಿದ್ದಾರೆಂದು ಶ್ರೀ ಆಸ್ರಣ್ಣರವರು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಈ ಮೇಳದಾಶ್ರಯದಲ್ಲಿ ಶ್ರೀ ಕ್ಷೇತ್ರದ ಪುಣ್ಯ ಕಥಾನಕ ನಾಳ ಕ್ಷೇತ್ರ ಮಹಾತ್ಮೆ, ಮಾಯಕೊದ ಸತ್ಯ ಕಲ್ಲುರ್ಟಿ,ಹಾಗೂ ತಿರುಮಲೆತ ತೀರ್ಥ ಹಾಗೂ ಸಂಸಾರಿಕ ಕಥಾನಕ ದೈವ ಸಂಕಲ್ಪ ಅಲ್ಲದೆ ಕಲಾ ಪ್ರೇಮಿಗಳು ಇಷ್ಟ ಪಡುವ ಎಲ್ಲಾ ರೀತಿಯ ಪುರಾಣ ಐತಿಹಾಸಿಕ ಪ್ರಸಂಗಗಳನ್ನು ಆಡಿಸಿ ತೋರಿಸುವ ಬಗ್ಗೆ ಶ್ರೀಆಸ್ರಣ್ಣರವರು ಭರವಸೆ ನೀಡಿದ್ದಾರೆ.
ರಂಗವನ್ನು ಸಾಕ್ಷಾತ್ಕರಿಸುವ ಈ ನೂತನ ಮೇಳದ ಹೆಮ್ಮೆಯ ಕಲಾವಿದರಾಗಿ ,ಭಾಗವತರಾಗಿ ಮೋಹನ ಕಲಂಬಾಡಿ, ಶ್ರೀಮತಿ ಅಮೃತಾ ಅಡಿಗ, ಶ್ರೀ ನಿರಂಜನ ಬೆಳ್ಳೂರು ಹಾಗೂ ಅತಿಥಿ ಭಾಗವತರಾಗಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಚಂಡೆ ಮದ್ದಳೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ ,ಚಂದ್ರಶೇಖರ ಭಟ್ ಕೊಂಕಣಾಜೆ ,ನವೀನ್ ಚಂದ್ರ ಮೊಗರ್ನಾಡು ,ಸಂಗೀತದಲ್ಲಿ ಮುರಾರಿ ಪಂಜಿಗದ್ದೆ, ಸ್ತ್ರೀ ಪಾತ್ರದಲ್ಲಿ ಸೀತಾರಾಮ ಕಡೆಕೋಡಿ,ರವಿಚಂದ್ರ ಚೆಂಬು ,ಸೂರ್ಯ ಶೆಟ್ಟಿ ಮಲ್ನಾಡ್ ಹಾಗೂ ಹಾಸ್ಯಗಾರರಾಗಿ ರಘುನಾಥ ರೈ ಅಂಕತ್ತಡ್ಕ ,ರವಿ ಭಂಡಾರಿ ಪೆರ್ಲ ರಂಜಿಸಲಿದ್ದಾರೆ. ಪ್ರಮುಖ ವೇಷಧಾರಿ ಕಲಾವಿದರಾಗಿ ಪುಷ್ಪರಾಜ್ ಜೋಗಿ,ರಾಘವ ಹೆಚ್ ಗೇರುಕಟ್ಟೆ,ರಾಘವೇಂದ್ರ ಕಾರ್ಕಳ,ದಿನೇಶ್ ಬಂಟ್ವಾಳ,ರಾಘವೇಂದ್ರ ಆಸ್ರಣ್ಣ, ಶೇಖರ ಮಣಿಯಾಣಿ ಸುಳ್ಯ, ಮೋಹನ್ ಕವತ್ತಾರು,ಪ್ರದೀಪ್ ಬೆಳ್ಳಾರೆ, ಗೋಪಾಲ್ ರೈ ಬೆಳ್ಳಾರೆ,ಉಮೇಶ್ ವಳಕಡಮ,ಜಗದೀಶ್ ಸರಪಾಡಿ ರಂಗವನ್ನು ನಡುಗಿಸಲಿದ್ದಾರೆ.
ಸುವ್ಯವಸ್ಥಿತ ವ್ಯವಸ್ಥೆಯೊಂದಿಗೆ ,ಅನುಭವೀ ವೃತ್ತಿಪರ ಕಲಾವಿದರ ಸಂಯೋಜನೆಯೊಂದಿಗೆ, ಹಿತಮತ ವೀಳ್ಯದ ಜೊತೆಗೆ,ಸ್ನೇಹಪರ ಸೇವೆಯೊಂದಿಗೆ ಯಕ್ಷಗಾನ ಪ್ರಿಯರ ಹೃದಯ-ಮನಸ್ಸನ್ನು ಗೆಲ್ಲಲಿದ್ದೇವೆ ಎಂಬುದು ಈ ನೂತನ ಮೇಳದ ವ್ಯವಸ್ಥಾಪಕರಾಗಿರುವ ವೇ.ಮೂ.ರಾಘವೇಂದ್ರ ಆಸ್ರಣ್ಣರವರ ಮನದಾಳದ ಮಾತುಗಳಾಗಿವೆ. ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿಯು ಅದರ ತಿರುಗಾಟದ ಮುಂದಿನ ದಿನಗಳಲ್ಲಿ ವಿಜೃಂಭಿಸಲಿ,ಶುಭವಾಗಲಿ ಎಂಬುದೇ ನಮ್ಮೆಲ್ಲರ ಶುಭ ಹಾರೈಕೆಯಾಗಿದೆ.
ರಾಘವೇಂದ್ರ ಭಂಡಾರ್ಕರ್ ಮೂಡಬಿದ್ರೆ.














