ಬಂಟ್ವಾಳ: ಪ್ರತಿಷ್ಠಿತ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ. 2025–26ನೇ ಪ್ರಸಕ್ತ ಸಾಲಿನಲ್ಲಿ ₹24 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ ಹೇಳಿದರು.
ಅವರು ಜು. 21ರಂದು ಸೋಮವಾರ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 29 ಎ ತರಗತಿ ಹಾಗೂ 155 ಬಿ.ತರಗತಿ ಸದಸ್ಯರಿದ್ದು, ರೂ.1191 ಲಕ್ಷ ಷೇರು ಬಂಡವಾಳ, 1128 ದುಡಿಯುವ ಬಂಡವಾಳ, ರೂ.332 ಲಕ್ಷ ಸಂಘದ ವ್ಯವಹಾರ ಹಾಗೂ ರೂ.1696 ಲಕ್ಷ ಸಂಘದಲ್ಲಿ ಠೇವಣಿ ನಿಧಿಯನ್ನು ಹೊಂದಿದ್ದು, 643 ಲಕ್ಷ ಹೊರಬಾಕಿ ಸಾಲ ಇದೆ.ಸಹಕಾರ ಇಲಾಖೆಯ ಲೆಕ್ಕಪರಿಶೋಧನೆಯಲ್ಲಿ ಸಂಘವು 'ಎ' ವರ್ಗೀಕರಣ ಪಡೆದಿರುವುದು ಸಂಘದ ಸುಸಂಘಟಿತ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು
ಸಂಘವು ನಿರಂತರ ಪ್ರಗತಿ ಸಾಧಿಸಿ ರೈತರು ಹಾಗೂ ಬಡವರ ನೆರವಿಗೆ ಧಾವಿಸಿದೆ. ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಸದಸ್ಯರು, ನಿರ್ದೇಶಕರು
ಹಾಗೂ ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿದರು.
ಮಹಾಸಭೆಯನ್ನು ಹಿರಿಯ ಸಹಕಾರಿಗಳಾದ ಜಯರಾಮ ಶೆಟ್ಟಿ ಹಾಗೂ ಬಿ.ಟಿ. ನಾರಾಯಣ ಭಟ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಸಭೆಯಲ್ಲಿ 2025–26ನೇ ಸಾಲಿನ ಆಡಳಿತ ವರದಿ, ವಾರ್ಷಿಕ ಲೆಕ್ಕಪತ್ರ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಂಘದ ಉಪಾಧ್ಯಕ್ಷ ಮೋಹನ ಆಚಾರ್ಯ, ನಿರ್ದೇಶಕರುಗಳಾದ ಜ್ಞಾನೇಶ್ವರ ಪ್ರಭು, ವೆಂಕಟೇಶ್ ನಾವುಡ, ಜಯರಾಮ ಕೆ.,ಡಿ. ತನಿಯಪ್ಪ ಗೌಡ, ದಿನೇಶ್ ಪೂಜಾರಿ,ನಾರಾಯಣ ಪೂಜಾರಿ, ಉದಯಕುಮಾರ್ ಎ, ಸಂತೋಷ್ ಕುಮಾರ್ ಶೆಟ್ಟಿ, ಶೀಲಾ, ಸವಿತಾ ಎಫ್. ಡಿ. ಸೋಜ, ಕೃಷ್ಣಮೂರ್ತಿ ಬಿ. ಕೆ.,ರಾಮ ನಾಯ್ಕ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಯು. ಧರ್ಮಪಾಲ ಭಂಡಾರಿ ವಾರ್ಷಿಕ ವರದಿ ವಾಚಿಸಿದರು. ಅಧ್ಯಕ್ಷ ರವೀಂದ್ರ ಕಂಬಳಿ ಸ್ವಾಗತಿಸಿ, ನಿರ್ದೇಶಕ ಪ್ರಮೋದ್ ಕುಮಾರ್ ರೈ ವಂದಿಸಿದರು.















