ಇದು ಅವಿಲ್ ಮಿಲ್ಕ್ ಅಂತ.ಕೇರಳದಲ್ಲಿಯೇ ಹೆಚ್ಚು ಫೇಮಸ್.ಈಗೀಗ ನಮ್ಮಲ್ಲಿಗೂ ಬಂದಿದೆ.ಅಲ್ಲಿ ಇದನ್ನು ಅವಲ್ ಮಿಲ್ಕ್ ಎಂದು ಹೇಳುತ್ತಾರೆ. ಮೂಡುಬಿದಿರೆಯಲ್ಲಿ ಎಲ್ಲಿ ಸ ಈ ಹಿಂದೆ ನಾನಂತು ಇದನ್ನು ನೋಡಿಲ್ಲ.ಹಾಗಾಗಿ ಇಲ್ಲಿಯವರೆಗೆ ಇದನ್ನು ನಾನು ಕುಡಿದಿರಲಿಲ್ಲ.ಇದನ್ನು ಕುಡಿಯುವುದು ಅಂತ ಹೇಳುವುದಕ್ಕಿಂತಲೂ ತಿನ್ನುವುದು ಅಂತ ಹೇಳಿದರೆನೇ ಹೆಚ್ಚು ಸರಿಯಾಗುತ್ತದೆ.ಈಗ ಮಂಗಳೂರಿನಲ್ಲಿ ಎಲ್ಲಿ ಬೇಕಾದರೂ ಇದು ಸಿಕ್ಕೇ ಸಿಗುತ್ತದೆ.
ಸಿಂಪುಳ್ ಆಗಿಯೇ ಮಾಡುವುದಾದರೆ ಅಂತಹ ದೊಡ್ಡ ಆನೆ ಕುದುರೆ ಏನು ಬೇಡ ಇದನ್ನು ಮಾಡ್ಲಿಕ್ಕೆ.ಅವಿಲ್ ಮಾಡ್ಲಿಕ್ಕೆ ಮುಖ್ಯವಾಗಿ ಬಜಿಲ್ ಬೇಕು. ಬಜಿಲ್ ಅಂದ್ರೆ ಅದೇ ಅವಲಕ್ಕಿ.ಮೊದಲಿಗೆ ಚೆನ್ನಾಗಿ ಹಣ್ಣಾದ ಈ ಬಾಳೆಹಣ್ಣನ್ನು ಪಲ್ಪು ಮಾಡಿಕೊಂಡು ಅದನ್ನು ದೊಡ್ಡ ಗ್ಲಾಸಿನ ಲೋಟಕ್ಕೆ ಹಾಕುತ್ತಾರೆ.ಆ ನಂತರ ಅದಕ್ಕೆ ತಣ್ಣನೆಯ ಹಾಲು ಸುರಿದು,ಅದರ ಜೊತೆಗೆಯೇ ಬಹಳಷ್ಟು ಸಿಪ್ಪೆ ಸುಲಿದ ನೆಲಗಡಲೆ,ಒಂದಿಷ್ಟು ಸಕ್ಕರೆ,ನಾಲ್ಕೈದು ಐಸ್ ಕ್ಯೂಬ್ ಕೂಡ ಹಾಕಿ,ಅದರ ಮೇಲೆ ಅರ್ಧ ಹಿಡಿಯಷ್ಟು ರೋಸ್ಟ್ ಮಾಡಿದ ಈ ಬಜಿಲ್ ಹಾಕಿದರೆ ಸಿಂಪುಳ್ ಆದ ಅವಿಲ್ ಮಿಲ್ಕ್ ಕುಡಿಯುವ ಜೊತೆಗೆ ಸವಿಯಲು ಕೂಡ ಸಿದ್ಧ.
ಇದನ್ನು ಇನ್ನೂ ಕೂಡ ತುಂಬಾ ರಿಚ್ ಆಗಿ ಮಾಡ್ತಾರೆ.ಬೇರೆ ಬೇರೆ ಪ್ಲೇವರ್ ಗಳ ಐಸ್‌ಕ್ರೀಂ,ಚಾಕೊಲೇಟ್ ಸಿರಪ್,ಪ್ರೂಟ್ಸ್, ಕಸ್ ಕಸ್,ಟೂಟಿ ಪ್ರೂಟಿ,ಗೋಡಂಬಿ ಸೇರಿದಂತೆ ಇತರೆ ತರಹೇವಾರಿ ಡ್ರೈ ಪ್ರೂಟ್ಸ್ ಗಳು,ಹೀಗೆ ಅದು ಇದು ಮಣ್ಣು ಮಸಿ ಸಂಕಪಸನ ಅಂತ ಎಲ್ಲವನ್ನೂ ಸಿಕ್ಕಾಪಟ್ಟೆ ಸುರಿದು ಒಂದು ರೀತಿಯಲ್ಲಿ ಗಡ್ ಬಡ್ ಐಸ್‌ಕ್ರೀಂ ತರಹವೇ ಮಾಡಿ ನಮ್ಮ ಮುಂದೆ ಇಡುತ್ತಾರೆ ಅಂಗಡಿಯವರು.ನಿಮಗೆ ಹೇಗೆ ಬೇಕೋ ಹಾಗೆ.ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡು ಅವಿಲ್ ಮಿಲ್ಕ್ ಸವಿಯಬಹುದು.ತುಂಬಾ ದಪ್ಪ ಇದ್ದು ಒಂದು ರೀತಿಯಲ್ಲಿ ಫಲೂಡ ತರಾನೇ ಕಂಡರೂ ಕೂಡ ಬಜಿಲ್ ಎಲ್ಲಾ ಹಾಕುವ ಕಾರಣದಿಂದ ಇದು ಫಲೂಡ ಅಲ್ಲ.ಹಿಂದೆ "ಇಲ್ಲಿ ತಂಪಾದ ಎಳ್ಳು ಸಿಗುತ್ತದೆ, ಪುನರ್ ಪುಳಿ ಸಿಗುತ್ತದೆ" ಎಂಬ ಬೋರ್ಡ್ ಇರುತ್ತಿದ್ದ ಜಾಗದಲ್ಲಿ ಈಗ "ಇಲ್ಲಿ ಅವಿಲ್ ಮಿಲ್ಕ್ ಸಿಗುತ್ತದೆ.." ಎಂಬ ದಪ್ಪ ಅಕ್ಷರಗಳಲ್ಲಿ
ಬರೆದ ಬೋರ್ಡ್ ಗಳು ಕಣ್ಣಿಗೆ ಬೀಳಲು ಶುರುವಾಗಿದೆ.
ಸಿಂಪಲ್ ಅವಿಲ್ ಮಿಲ್ಕ್ ಒಂಥರಾ ಚೆನ್ನಾಗಿಯೇ ಇರುತ್ತದೆ.ಕುಡಿದರೆ ತತ್ ಕ್ಷಣಕ್ಕೆ ಹೊಟ್ಟೆ ಕೂಡ ಗಟ್ಟಿಯಾಗಿ ಬಿಡುತ್ತದೆ.ಆದರೆ ಭಯಂಕರ ಟೇಸ್ಟ್ ಅಂತ ಏನಿಲ್ಲ.ಬಹುಶಃ ಮಾಡುವವರ ಮೇಲೆ ಕೂಡ ಇದು ಡಿಪೆಂಡ್ ಆಗುತ್ತದೆ ಎಂದು ಕಾಣುತ್ತದೆ.ಎಲ್ಲಾದರೂ ಚೆನ್ನಾಗಿ ಅವಿಲ್ ಮಿಲ್ಕ್ ಮಾಡುವವರಿದ್ದರೆ ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಬಹುದು.ಸಕ್ಕರೆ ಎಲ್ಲಾ ಹಾಕದಿದ್ದರೆ ಆರೋಗ್ಯಕ್ಕೂ ಒಂದು ರೀತಿಯಲ್ಲಿ ಒಳ್ಳೆಯದೇ.
ನನಗೆ ಇದಕ್ಕೆ ಬಜಿಲ್ ಹಾಕಿ ತಿನ್ನುವಾಗ ನಮ್ಮೂರಿನ ಈ ಹಿಬುಲ ಜ್ಯೂಸಿನದ್ದೇ ಅತಿಯಾದ ನೆನಪಾಯಿತು.ಹಣ್ಣಾದ ಹಿಬುಲದ ಪಲ್ಪುಗಳನ್ನು ತೆಂಗಿನ ದಪ್ಪ ಹಾಲಿನಲ್ಲಿ ಹಾಗೇ ಕಿವುಚಿಕೊಂಡು,ಸಿಹಿಗಾಗಿ ತುರಿದ ಬೆಲ್ಲವನ್ನು ಇಷ್ಟಿಷ್ಟೇ ಸೇರಿಸಿಕೊಂಡು,ಅದಕ್ಕೆ ಮೇಲಿಂದ ಒಂದಿಷ್ಟು ಬಜಿಲ್ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಒಟ್ಟಿಗೆ ಸುರ್ರು ಪುರ್ರು ಅಂತ ಹೀರುವುದರಲ್ಲಿಯೇ ಅದೆಂತಹದ್ದೋ ಸ್ವರ್ಗ ಸುಖ ಇದೆ ಎಂದು ಇಂದಿಗೂ ನಾನು ಗಟ್ಟಿಯಾಗಿ ನಂಬಿದ್ದೇನೆ.ನಿಜ ಹೇಳಬೇಕೆಂದರೆ ನನಗೆ ಅದೆಂದರೆನೇ ತುಂಬಾ ಇಷ್ಟ.ಅದರ ಮುಂದೆ ಈ ನವಿಲಿನಂತಹ ಅದೆಷ್ಟೇ ಆಕರ್ಷಕ ಅವಿಲು ಕೂಡ ಏನೂ ಅಲ್ಲ ಬಿಡಿ.ಆದರೆ ಈ ಹಿಬುಲ ವರ್ಷದಲ್ಲಿ ಎರಡು ಬಾರಿ ಅಷ್ಟೇ ಫಸಲು ಬರುವ ಬೆಳೆ.ಬಾಕಿ ದಿನಗಳಲ್ಲಿ ಅದರದ್ದೊಂದು ನೆನಪುಗಳಲ್ಲಿ ಅಷ್ಟೇ ಅದರ ರುಚಿಯನ್ನು,ಪರಿಮಳನ್ನು ನಾವು ಮೆಲುಕು ಹಾಕಿ ಕೊಳ್ಳಬೇಕಾಗುತ್ತದೆ.ಇದು ಆದರೆ ವರ್ಷ ಪೂರ್ತಿ ಸಿಗುತ್ತದೆ ನೋಡಿ.
ಅವಿಲ್ ಮಿಲ್ಕ್ ಕೆಲವರಿಗೆ ಇಷ್ಟವಾಗಬಹುದು,ಇನ್ನು ಕೆಲವರಿಗೆ ಇಲ್ಲ,ಯಾವುದಕ್ಕೂ ಒಮ್ಮೆ ನೀವೇ ಟ್ರೈ ಮಾಡಿ ನೋಡಿ.ಇಷ್ಟ ಆದರೂ ಆಗಬಹುದು,ಚೆನ್ನಾಗಿ ಮಾಡುವವರಿದ್ದರೆ ಖಂಡಿತವಾಗಿಯೂ ನಿಮಗೆ ಇದು ಇಷ್ಟನೇ ಆಗಬಹುದು..










