ಜುಲೈ 17 ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಂಚಾರಿ ವಿಜಯ್ ಜೀವನ ಕಥನ "ಅನಂತವಾಗಿರು" ಪುಸ್ತಕ ಬಿಡುಗಡೆಯಾಗಲಿದೆ.
ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ಮತ್ತು ಪತ್ರಕರ್ತ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಸಿದ್ಧವಾಗಿರುವ ಕೃತಿಯಲ್ಲಿ ಅನೇಕ ವಿಚಾರಗಳನ್ನ ಉಲ್ಲೇಖಿಸಲಾಗಿದೆ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದರೆ, ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ.
ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ
ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ. ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ನಿರ್ದೇಶಕ ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿರಲಿವೆ.
















