ಬೆಳಗಾವಿ: ಅಯೋಧ್ಯೆಯಲ್ಲಿ ರಾಮ ಮಂದಿರ ಹುಂಡಿ ಕಳವು ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲಿ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಅಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ‘ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ ಸಿಎಂ, ‘ಮುಜರಾಯಿ ದೇಗುಲಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಠಾಣೆಗಳಿಗೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ’ ಎಂದರು.
‘ಹುಂಡಿ ಇರುವ ಸ್ಥಳ, ಹಣ ಎಣಿಕೆ ಸ್ಥಳ ಸೇರಿದಂತೆ ದೇವಸ್ಥಾನದ ಎಲ್ಲ ಭಾಗಗಳಲ್ಲಿ ಸಿಸಿಟೀವಿ ಹಾಕಲಾಗುತ್ತದೆ. ದೇಗುಲದ ಚಟುವಟಿಕೆಗಳ ಮೇಲೆ ದಿನದ 24 ಗಂಟೆ ನಿಗಾ ಇಡಲಾಗುತ್ತದೆ’ ಎಂದರು.
ಭಕ್ತರ ಭಾವನೆಗೆ ಘಾಸಿ:
‘ಇತ್ತೀಚೆಗೆ ದೇವಾಲಯದಲ್ಲಿ ನಡೆದ ದೇಣಿಗೆ ಕಳವು ಪ್ರಕರಣ ಸರ್ಕಾರಕ್ಕೆ ಹಾಗೂ ಭಕ್ತರಿಗೆ ಮಾನಸಿಕ ಆಘಾತ ಉಂಟುಮಾಡಿದೆ. ಭಕ್ತರು ಭಕ್ತಿಭಾವದಿಂದ ಕಾಣಿಕೆ, ಹಣ ಹಾಗೂ ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಸಮರ್ಪಿಸುತ್ತಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
24 ಗಂಟೆಯೂ ನಿಗಾ
‘ರಾಜ್ಯದ ಎಲ್ಲ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಗರ್ಭಗುಡಿ ಸಮೀಪ, ಕಾಣಿಕೆ ಪೆಟ್ಟಿಗೆಗಳ ಬಳಿ, ಕಾಣಿಕೆ ತೆರೆಯುವ ಸ್ಥಳ, ಹಣ ಎಣಿಕೆ ಕೊಠಡಿ ಹಾಗೂ ಹಣ ಸಂಗ್ರಹಿಸುವ ಎಲ್ಲ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಗಿದೆ. ಈ ಕ್ಯಾಮೆರಾಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಸಂಬಂಧಪಟ್ಟ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ವ್ಯವಸ್ಥೆಗೆ ನೇರವಾಗಿ ಸಂಪರ್ಕಿಸಲಾಗುವುದು. ಟ್ರಾಫಿಕ್ ನಿಯಂತ್ರಣ ಕೊಠಡಿಯ ಮಾದರಿಯಲ್ಲೇ ದೇವಾಲಯಗಳ ಮೇಲ್ವಿಚಾರಣೆಗೆ ಡ್ಯಾಶ್‌ಬೋರ್ಡ್ ವ್ಯವಸ್ಥೆ ರೂಪಿಸಲಾಗುವುದು. ಕಾಣಿಕೆ ಪೆಟ್ಟಿಗೆ ತೆರೆಯುವಾಗ, ಹಣ ಎಣಿಸುವಾಗ, ಹಣ ಸಂಗ್ರಹಿಸುವಾಗ ಹಾಗೂ ಮುಚ್ಚುವ ಪ್ರಕ್ರಿಯೆ ಸೇರಿದಂತೆ ಎಲ್ಲ ಹಂತಗಳ ಮೇಲೆ 24 ಗಂಟೆಯೂ ನಿಗಾ ಇರಲಿದೆ’ ಎಂದು ತಿಳಿಸಿದರು.
ರಾಮಮಂದಿರದ ದೇಣಿಗೆ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ವಿಷಯದ ಬಗ್ಗೆ ವಿವಿಧ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಕರ್ನಾಟಕದಲ್ಲಿಯೂ ಸಂಗ್ರಹಿಸಿದ ಕಾಣಿಕೆ ಹಣದ ಬಗ್ಗೆ ಕೆಲವು ಆರೋಪಗಳು ಕೇಳಿಬಂದಿದ್ದು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ’ ಎಂದರು.
ಬೇಲೂರಿನ ಚನ್ನಕೇಶವನ ಹುಂಡಿ ಎಣಿಕೆ ವೇಳೆ ಕಳವು
14px;">ಬೇಲೂರು: ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಗರ್ಭಗುಡಿಯ ಹುಂಡಿ ತೆಗೆದು ಹಣವನ್ನು ಎಣಿಸಲು ದೇಗುಲದ ಹಿಂಭಾಗದ ಕಲ್ಯಾಣ ಮಂಟಪಕ್ಕೆ ತಂದು ಸುರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ನಿಯೋಜಿಸಿದ್ದ ನೀಲಕಂಠ ಎಂಬಾತ ಹಣ ಕಳವು ಮಾಡಿದ್ದು, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಳ್ಳತನದ ಯತ್ನ ವಿಫಲವಾಗಿದೆ. ಆರೋಪಿ ಹುಂಡಿಯಿಂದ ತೆಗೆದ ಕಳವು ಮಾಡಲು ಯತ್ನಿಸಿದ್ದ ವೇಳೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯ ವೇಳೆ ಒಟ್ಟು 1,98,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕಳ್ಳತನದ ಯತ್ನದ ಹಿಂದಿನ ಉದ್ದೇಶ ಹಾಗೂ ಇತರರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದರೂ, ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅಲ್ಲೇ ಇದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿ ಬಾರಿಯಂತೆ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಪ್ರತಿ ಬಾರಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಅದರಂತೆ ಈ ವರ್ಷವು ಕೂಡ ವಿಡಿಯೋ ಚಿತ್ರೀಕರಣ ಜೊತೆಗೆ ಸರ್ವೋದಯ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿಗಳು ದೇಗುಲದ ನೌಕರರು ಒಗ್ಗೂಡಿ ಎಣಿಕೆ ಕಾರ್ಯ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನೀಲಕಂಠ ಎಂಬ ವ್ಯಕ್ತಿಯೊಬ್ಬ ಸುರಿಯುತ್ತಿದ್ದ ಹಣವನ್ನು ಅಲ್ಲಿ ವಿದ್ಯಾರ್ಥಿಗಳು ಎಣಿಕೆ ಕಾರ್ಯ ಸಂದರ್ಭ ಯಾರಿಗೂ ತಿಳಿಯದ ಹಾಗೆ ಸುಮಾರು ೧ ಲಕ್ಷದ ೯೮ ಸಾವಿರ ಹಣವನ್ನು ಜರ್ಕಿನ್ ಒಳಗಡೆ ಹಾಕಿದ್ದನ್ನು ಗಮನಿಸಿದ ಹೊಯ್ಸಳ ಪೊಲೀಸರಾದ ಮೋಹನ್, ಮಂಜುನಾಥ್ , ಹಾಸನದ ಪೊಲೀಸ್ ಮನು ಆತನನ್ನು ಹಿಡಿದು ತಪಾಸಣೆ ನಡೆಸಿದಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಇದರ ಹಿಂದಿನ ಸತ್ಯಾಸತ್ಯತೆಯನ್ನು ಪೊಲೀಸರು ಕಂಡುಹಿಡಿಯಬೇಕಾಗಿದೆ ಎಂದರು.















