Coastal Bulletin

ರವಿ ಕಟಪಾಡಿಯವರು ಸುಮಾರು 7 ವರ್ಷಗಳಿಂದ ಈ ವಿಶೇಷವಾದ ವೇಷವನ್ನು ಧರಿಸಿ, ಅದರಲ್ಲಿ ಸಂಗ್ರಹವಾದ ಹಣವನ್ನು ದೇಣಿಗೆ ರೂಪದಲ್ಲಿ ಬಡ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುತ್ತಾರೆ. ಪ್ರತಿ ವರ್ಷವೂ ಅವರು ಹಾಕುವ ವೇಷ ಭೂಷಣವು ವಿಶೇಷವಾಗಿರುತ್ತದೆ ಅಂತೆ ಈ ವರ್ಷ ಕೂಡ ಅಷ್ಟಮಿಗೆ ವೇಷ ಹಾಕಿದ್ದು, ಬಲು ವಿಶೇಷವಾಗಿದೆ. ಈ ಬಾರಿಯ ವೇಷಭೂಷಣದಿಂದ ಬಂದಂತ ಹಣವನ್ನು ದೇಣಿಗೆ ರೂಪದಲ್ಲಿ 6 ಬಡ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ರವಿ ಕಟಪಾಡಿಯವರು ಮಾತನಾಡಿದ್ದಾರೆ.

7 ವರ್ಷಗಳಲ್ಲಿ ವೇಷ ಹಾಕಿ ₹90 ಲಕ್ಷದಷ್ಟು ಹಣ ಸಂಗ್ರಹಿಸಿ 66 ಬಡ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದೇನೆ. ಈ ವರ್ಷ ₹10 ಲಕ್ಷ ಸಂಗ್ರಹಿಸುವ ಮೂಲಕ ₹1 ಕೋಟಿಯ ಗುರಿ ಮುಟ್ಟುವ ವಿಶ್ವಾಸವಿದೆ. ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಶಕ್ತಿಮೀರಿ ಆರ್ಥಿಕ ನೆರವು ನೀಡಬೇಕು. ಈ 19 ಹಾಗೂ 20ರಂದು ವೇಷ ಧರಿಸಿ ಉಡುಪಿ, ಮಲ್ಪೆ, ಕಟಪಾಡಿ, ಉದ್ಯಾವರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಲಿದ್ದೇನೆ. ಹೈದರಾಬಾದ್, ಮಂಗಳೂರು, ಮಡಿಕೇರಿಯ

ಕಲಾವಿದರು ವೇಷ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದಿದ್ದಾರೆ.

ಇದಲ್ಲದೆ ರವಿ ಕಟಪಾಡಿ ಅವರ ಮಾನವೀಯ ಕಾಳಜಿ ಗಮನಿಸಿ, ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ನಡೆಸಿ ಕೊಡುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ ರವಿ ಕಟಪಾಡಿಯವರಿಗೆ ಅವಕಾಶ ನೀಡಿದ್ದರು. ಅದರಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟು ರವಿ ಉದಾರತೆ ಮರೆದಿದ್ದರು. ರವಿಯವರು ಈ ವೇಷ ಧರಿಸಲು ಹಲವು ದಿನಗಳ ತಯಾರಿ ಮಾಡುತ್ತಾರೆ. ಊರೂರು ತಿರುಗಿ ರವಿ, ಹಣ ಸಂಗ್ರಹ ಮಾಡಿ ಬಡವರಿಗೆ ನೆರವಾಗುತ್ತಾರೆ. 

Leave a Comment