ಬೆಳಗಾವಿ: ಕೊಡಗಿನಲ್ಲಿ ಬಾಂಗ್ಲಾದೇಶದವರಿಂದ ಹಲವಾರು ಕ್ರಿಮಿನಲ್ ಕೃತ್ಯಗಳು ನಡೆಯುತ್ತಿವೆ. ಇವರ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂಥರ್ ಗೌಡ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಮಾತನಾಡಿದ ಅವರು, ಅಸ್ಸೋಂ ಮೂಲದವರು ಅಂತ ಹೇಳಿ ಕೊಡಗು ಜಿಲ್ಲೆಯಲ್ಲಿ ಕೆಲಸಕ್ಕೆ ಬರ್ತಿದ್ದಾರೆ. ಆದ್ರೆ ಅವರೆಲ್ಲಾ ಬಾಂಗ್ಲಾದೇಶದವರಾಗಿದ್ದಾರೆ. ಅವರ ಬಳಿ ಆಧಾರ್ ಕಾರ್ಡ್ಗಳು ಕೂಡ ಇವೆ. ಇದಕ್ಕೆ ಸಂಬಂಧಿಸಿದಂತೆ 2024ರಲ್ಲಿ 17 ಪ್ರಕರಣಗಳು ದಾಖಲಾಗಿದ್ದವು. ಪ್ರಸಕ್ತ ವರ್ಷದಲ್ಲಿ (2025) 62 ಕೇಸ್ಗಳು ದಾಖಲಾಗಿವೆ. ಅವರಿಂದ ಹಲವಾರು ಕ್ರಿಮಿನಲ್ ಆಕ್ಟಿವಿಟಿಗಳು ನಡೆಯುತ್ತಿವೆ. ರೇಪ್, ಡ್ರಗ್ಸ್, ಕಳ್ಳತನ ಎಲ್ಲವೂ ನಡೆಯುತ್ತಿವೆ. ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವಂತೆ ಹೇಳಿದರೆ ಅವರಿಗೆ ಹಾಡಲು ಬರಲ್ಲ. ದೇಶದ್ರೋಹ ಮಾಡೋರನ್ನು ಸಹಿಸಲು ಸಾಧ್ಯವಿಲ್ಲ. ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್, ಈಗಾಗಲೇ ಕೊಡಗು, ಚಿಕ್ಕಮಗಳೂರು, ಹಲವೆಡೆ ಈ ಪ್ರಶ್ನೆ ಬಂದಿದೆ. ಅಸ್ಸೋಂ ಅಂತ ಹೇಳಿದ್ರೂ ಅವರು ಬಾಂಗ್ಲಾದೇಶದಿಂದ ಬಂದವರಾಗಿದ್ದಾರೆ. ಹೋಮ್ ಸ್ಟೇಗಳಲ್ಲಿ ಕೆಲಸ ಮಾಡ್ತಾರೆ. ಹೋಮ್ ಸ್ಟೇ ಮಾಲೀಕರಿಗೆ ದಾಖಲೆಗಳನ್ನು ನಿರ್ವಹಿಸಲು ಸೂಚಿಸಿದ್ದೇವೆ. ದಾಖಲೆ ಇಲ್ಲದಿದ್ರೆ ಅವರನ್ನು
ಪತ್ತೆ ಹಚ್ಚೋದು ಕಷ್ಟ. ಪೊಲೀಸರಿಗೆ ಇವರನ್ನು ಮಾನಿಟರಿಂಗ್ ಮತ್ತು ಕಂಟ್ರೋಲ್ ಮಾಡಲು ಕ್ರಮ ಆಗ್ತಿದೆ. ವಿಶೇಷವಾಗಿ ಬಾಂಗ್ಲಾದೇಶದಿಂದ ಬಂದವರನ್ನು ಗುರುತಿಸಿ ವಾಪಸ್ ಕಳಿಸೋ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು.
ಅರ್ಹ ಬಡವರು ಬಿಟ್ಟು ಹೋಗಿದ್ದಾರೆ: ಅನರ್ಹ ಹೆಸರಿನಲ್ಲಿ ಬಡವರಿಗೆ ಬಿಪಿಎಲ್ ಕಾರ್ಡ್ ಸ್ಥಗಿತ ವಿಚಾರವಾಗಿ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಲ್ಲಿ 31,96,709 ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕರ್ನಾಟಕದಲ್ಲೇ ಅತಿಹೆಚ್ಚು ಬಿಪಿಎಲ್ ಕಾರ್ಡ್ ದಾರರು ಇಲ್ಲಿ ಇದ್ದಾರೆ. ವಿಪರ್ಯಾಸವೆಂದರೆ ತಲಾ ಆದಾಯದಲ್ಲೂ ಕರ್ನಾಟಕ ನಂಬರ್ ಒನ್ ಇದೆ. 7,76,000 ಅನರ್ಹರ ಬಗ್ಗೆ ಕೇಂದ್ರವೇ ಪಟ್ಟಿ ಕೊಟ್ಟಿದೆ. ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆಯಲ್ಲಿ ಅರ್ಹ ಬಡವರು ಬಿಟ್ಟು ಹೋಗಿದ್ದಾರೆ ನಿಜ. ನಾವು ಇವಾಗ ಅನರ್ಹರನ್ನು ತೆರವುಗೊಳಿಸಿ, ಅರ್ಹರಿಗೆ ಕೊಡುವ ಕೆಲಸ ಮಾಡ್ತಿದ್ದೇವೆ. ಈಗಾಗಲೇ ವ್ಯವಸ್ಥಿತ ರೂಪದಲ್ಲಿ ಇದನ್ನು ಸರಿಪಡಿಸುವ ಕೆಲಸ ಮಾಡ್ತಿದ್ದೇವೆ ಎಂದು ಸದನಕ್ಕೆ ಹೇಳಿದರು.














