ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ನೀಡಿರುವ ತನಿಖಾ ವರದಿ ಸುಳ್ಳು ಅಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದೇನೆ. ಕೋರ್ಟ್ ನನಗೆ ಮಾರ್ಚ್ 18 ರಂದು ವಾದ ಮಂಡಿಸಲು ಸಮಯವಕಾಶ ನೀಡಿದೆ. ನಾನೇ ವಾದ ಮಂಡಿಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.
ಇಂದು ಮಾಧ್ಯಮಾಗಳ ಜತೆ ಮಾತನಾಡಿದ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿ ಸುಳ್ಳು. ಅವರು ತನಿಖೆ ನಡೆಸಿ ಸಂಗ್ರಹಿಸಿರುವ ಸಾಕ್ಷಿಗಳ ಮೇಲೆ, ನಾನು ಆರೋಪವನ್ನು ಸಾಬೀತುಪಡಿಸುವುದಾಗಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದೇನೆ. ಅದಕ್ಕೆ ಪೂರಕವಾಗಿ ಕೆಲವೇ ಕೆಲವು ದಾಖಲೆಗಳನ್ನು ಮಾತ್ರ ಸಲ್ಲಿಸಿ, ವಾದ ಮಂಡನೆ ಮಾಡಲು ಸಮಯಾವಕಾಶ ಕೇಳಿದ್ದೇನೆ. ಕೋರ್ಟ್ ಮಾರ್ಚ್ 18 ರಂದು ಸಮಯಾವಕಾಶ ಮಾಡಿಕೊಟ್ಟಿದೆ. ಮಾರ್ಚ್ 18 ರಂದು ವಿವರವಾದ ವಾದ ಮಂಡನೆ ಮಾಡುತ್ತೇನೆ. ಆರೋಪಿಗಳಿಗೆ ವಿಚಾರಣೆಗೆ ಒಳಪಡಿಸಿ, ಶಿಕ್ಷೆಗೆ ಒಳಪಡಿಸುವುದಕ್ಕೆ ಕಾನೂನು ಪ್ರಕ್ರಿಯೆ ನಡೆಸಲು ಅನುಮತಿ ಕೊಡುವಂತೆ ಮನವಿಯನ್ನು ನಿನ್ನೆ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ಕೇಳಿಕೊಂಡಿದ್ದೇನೆ ಎಂದರು.
ಇ.ಡಿ ಮೇಲ್ಮನವಿ ಸಲ್ಲಿಸುವ ವಿಶ್ವಾಸವಿದೆ: ಸಿಎಂ ಪತ್ನಿ ಪಾರ್ವತಿಯವರಿಗೆ ಇ.ಡಿ ನೀಡಿದ ಸಮನ್ಸ್ ರದ್ದಾಗಿದೆ. ನನಗೆ ಬಹಳ ನೋವಿನ ಸಂಗತಿ ಎಂದರೆ, ಇ.ಡಿ ಆರೋಪ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿ, ಬಂಧನ ಮಾಡಬಾರದೆಂದು ಹೇಳಿದ್ದರೇ ನನಗೆ ಸಂತೋಷವಾಗುತ್ತಿತ್ತು. ಆದರೆ, ವಿಚಾರಣೆಯನ್ನೇ ನಡೆಸಬಾರದೆಂದು ಸಮನ್ಸ್ ರದ್ದುಪಡಿಸಿದೆ. ಇದಲ್ಲದೇ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಂಭವಿರುತ್ತದೆ. ಆಗ ತನಿಖೆ ಸಂಸ್ಥೆ ಏನು ಮಾಡಬೇಕು?. ಸಾಕ್ಷ್ಯಿಗಳನ್ನು ಹೇಗೆ ಸಂಗ್ರಹ ಮಾಡಬೇಕು? ಎನ್ನುವ ಬಗ್ಗೆ ಚಿಂತನೆ ನಡೆಯಬೇಕು. ಈ ತೀರ್ಪು ವಿರುದ್ದ ಇ.ಡಿ ಮೇಲ್ಮನವಿ ಸಲ್ಲಿಸುವ ವಿಶ್ವಾಸವಿದೆ ಎಂದರು.
ಇ.ಡಿ ತನ್ನ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಿದೆ. ನನ್ನ ಅರ್ಜಿಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ. ಸತ್ಯವನ್ನು ಎತ್ತಿಹಿಡಿಯುವ ಕೆಲಸ ಇ.ಡಿ ಹಾಗೂ ನಾನು ನಿರಂತರವಾಗಿ ಮಾಡುತ್ತೇವೆ. ಇ.ಡಿಗೆ ಲೋಕಾಯುಕ್ತ ಅಂತಿಮ ವರದಿ ನೀಡಿದ್ದೇನೆ. ಅವರು
ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ. ಸತ್ಯವನ್ನು ರಾಜ್ಯ ಮಾತ್ರವಲ್ಲ, ದೇಶದ ಜನತೆಯ ಮುಂದೆ ಇಡುತ್ತೇವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.
ನಾನೇ ವಾದ ಮಂಡನೆ ಮಾಡುವೆ: ನಾನೇ ವಾದ ಮಂಡನೆ ಮಾಡಿ, ನನ್ನ ಆರೋಪವನ್ನು ಸಾಬೀತುಪಡಿಸುತ್ತೇನೆ. ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ನಮ್ಮ ಸಂವಿಧಾನ ನೀಡಿರುವ ಶಕ್ತಿಯನ್ನು ಬಳಸಿಕೊಳ್ಳುತ್ತೇನೆ. ಮುಖ್ಯಮಂತ್ರಿಗಳಿಗೆ ಮಾತ್ರವಲ್ಲ, ಎಂತಹ ಪ್ರಭಾವಿಗೂ ಶಿಕ್ಷೆ ಕೊಡುಸಬಹುದಾದ ಹಕ್ಕನ್ನು ನಮ್ಮ ಸಂವಿಧಾನ ನಮಗೆ ಕೊಟ್ಟಿದೆ. ನಾನು ಆ ದಾರಿಯಲ್ಲಿ ನಡೆಯಲು ನಿರ್ಧಾರ ಮಾಡಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ಮುಡಾ ಪ್ರಕರಣ ಸಿಬಿಐಗೆ ಹೋಗುತ್ತದೆ. ಲೋಕಾಯುಕ್ತ ಪೊಲೀಸರ ಕಣ್ಣ ಮುಂದೆಯೇ ಸಾಕ್ಷ್ಯವಿದ್ದರೂ, ಸುಳ್ಳು ಎಂದು ಹೇಳಿದೆ. ಅಧಿಕಾರಿಗಳು ತಪ್ಪು ಮಾಡಿದ್ದಾರೆ, ಜನಪ್ರತಿನಿಧಿಗಳು ತಪ್ಪು ಮಾಡಿಲ್ಲ ಎಂದು ಹೇಳಿದೆ. ಈ ಸುಳ್ಳನ್ನು ಒಡೆದು, ಸತ್ಯ ಸಾಬೀತು ಮಾಡಿ, ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತೇನೆ ಎಂದು ಶಪಥ ಮಾಡಿದರು.
ನಾನು ದೂರು ಕೊಡುವ ಮುಂಚೆ ಸಿಎಂ ಸಿದ್ದರಾಮಯ್ಯ ನಮ್ಮ ನಿವೇಶನಗಳು 60 ಕೋಟಿಗೂ ಹೆಚ್ಚು ಬೆಲೆ ಬಾಳುವ ಸೈಟ್ ಎಂದು ಹೇಳಿ ಅದಕ್ಕೆ ಪರಿಹಾರವನ್ನು ಕೇಳಿದ್ದರು. ಈ ಹೇಳಿಕೆಯನ್ನು ವಿಧಾನಸೌಧದಲ್ಲಿ ಹೇಳಿದರು. ಲೋಕಾಯುಕ್ತ ಪೊಲೀಸರಲ್ಲಿ ದೂರು ದಾಖಲಾಗಿ, ಎಫ್ಐಆರ್ ದಾಖಲಾದ ಮೂರು ದಿನಗಳಲ್ಲಿ ಎಲ್ಲ ಸೈಟ್ ವಾಪಸ್ ನೀಡಿದ್ದರು. ಅಪಪ್ರಚಾರ ಬಂತು, ಅದಕ್ಕೆ ನಿವೇಶನ ವಾಪಾಸ್ ನೀಡಿರುವುದಾಗಿ ಹೇಳಿದರು. ಆರೋಪ ಬಂದ ದಿನವೇ ವಾಪಸ್ ಕೊಡಬೇಕಾಗಿತ್ತು. ಇದ್ದರಿಂದನೇ ಗೊತ್ತಾಗುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದಾರೆ ಅಂತ. ಇದು ತನಿಖೆ ಮಾಡಿದ ಅಧಿಕಾರಿಗಳಿಗೆ ಗೊತ್ತಾಗಲಿಲ್ಲ, ಇಷ್ಟೇ ವ್ಯತ್ಯಾಸ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.














