ಗಣೇಶ್ ಕಾಮತ್ ಮೂಡಬಿದಿರೆ

ಮೂಡುಬಿದಿರೆ: ಪ್ರಾಚೀನ ಕಾಲದ ಸಾಹಿತ್ಯ ಸಂರಕ್ಷಣೆಗೆ ತನ್ನ ಗರಿಗಳ ಮೂಲಕ ಆಸರೆಯಾದ ಸಸ್ಯ ಸಂಕುಲದಲ್ಲಿನ ಅಪರೂಪವೆನಿಸಿದ ಬಹುಪಯೋಗಿ ವೃಕ್ಷ ಇತ್ತೀಚಿನ ದಿನಗಳಲ್ಲಿ ಮೌಢ್ಯಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಉಳಿವಿಗೆ ಉಡುಪಿಯ ಜೈವಿಕ ಪರಿಸರಾಸಕ್ತ ಪ್ರೊ.ಎಸ್.ಎ.ಕೃಷ್ಣಯ್ಯ ಮೌನಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಅವರ ಈ ಭಗೀರಥ ಯತ್ನಕ್ಕೆ ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಬೀಜಾಕ್ಷತೆಯ ಹೊಸ ಪರಿಕಲ್ಪನೆಯ ಮೂಲಕ ಬೆಂಬಲಿಸಿ ಗಮನ ಸೆಳೆದಿದ್ದಾರೆ.

ಶ್ರೀತಾಳೆ ಮರ ಅನಿಷ್ಠ ಎನ್ನುವುದೇ ಮೌಢ್ಯ. ಅದೊಂದು ಔಷದೀಯ ಮೌಲ್ಯದ ಬಹುಪಯೋಗಿ ಅಪರೂಪದ ಸಸ್ಯ ಸಂತತಿ. ಮುಂದಿನ ಪೀಳಿಗೆಗೆ ಅವುಗಳ ಉಳಿಸುವಿಕೆ ಅತೀ ಅಗತ್ಯ ಎನ್ನುವುದು 'ಒಪ್ಪಿಕೋ ಪಚ್ಚೆವನ ಸಿರಿ ಅಭಿಯಾನದ ರೂವಾರಿ ಪರಿಸರ ಚಿಂತಕ ಪ್ರೊ.ಎಸ್.ಎ.ಕೃಷ್ಣಯ್ಯ ಬಳಗದ ಸ್ಪಷ್ಟ ನಿಲುವು. 2018ರಿಂದ ಶ್ರೀತಾಳೆಯ ಉಳಿವಿಗಾಗಿ ಕಾವೇರಿಯಿಂದ ಕಾಶೀವರೆಗೆ, ದೇಶದ ಹೆಸರಾಂತ ವಿಶ್ವವಿದ್ಯಾನಿಲಯಗಳ ಆವರಣಕ್ಕೆ, ಅರಣ್ಯ, ಬೆಟ್ಟ ಗುಡ್ಡ ಹೀಗೆ ಸರಿಕಂಡಲ್ಲೆಲ್ಲ ಕೃಷ್ಣಯ್ಯ 49 ಸಾವಿರಕ್ಕೂ ಅಧಿಕ ಶ್ರೀ ತಾಳೆ, ಸಸಿ ಬೀಜಗಳನ್ನು ತಲುಪಿಸಿ ಧನ್ಯತೆಯನ್ನು ಅನುಭವಿಸಿದ್ದಾರೆ.

ಜೈನಕಾಶಿಯಲ್ಲಿ ಬೀಜಾಕ್ಷತೆ!

ಸಾತ್ವಿಕ ಪ್ರಯತ್ನಗಳ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೂ ಬಿಟ್ಟು ಗಮನ ಸೆಳೆದ ಶ್ರೀ ತಾಳೆ ಮರವೊಂದನ್ನು ಉಳಿಸಿಕೊಳ್ಳಲಾಗದ ಕೃಷ್ಣಯ್ಯ ಆ ಭಾಗದ ಮೂಲಕ ಜನಜಾಗೃತಿಗೆಂದು ಪುತ್ತೂರು-ವಿಟ್ಲದ ಕಾನನದಿಂದ ಸಂಗ್ರಹಿಸಿದ್ದ ಶ್ರೀತಾಳೇಮರದ 10,000 ಸಾವಿರ ಬೀಜಗಳನ್ನು ಮತ್ತು 60 ಗಿಡಗಳನ್ನು ಮೂಡುಬಿದಿರೆಯ ಭಟ್ಟಾರಕ ಶ್ರೀಗಳವರಿಗೆ ಅಪರ್ಿಸಿದ್ದರು. ಕೊನೆಗೂ ಶ್ರೀತಾಳೆ ಮರವೊಂದು ಮೌಢ್ಯಕ್ಕೆ ಬಲಿಯಾದ ದಿನದಂದೇ ಭಟ್ಟಾರಕ ಶ್ರೀಗಳವರು ಬೆಳುವಾಯಿಯಲ್ಲಿರುವ ಶ್ರೀ ಮಠಕ್ಕೆ ಸೇರಿದ ನಿವೇಶನದಲ್ಲಿ ಶ್ರೀ ತಾಳೆಯ ಸಸಿಗಳನ್ನು ನೆಟ್ಟು ಈ ಅಪರೂಪದ ಸಸ್ಯ ಪ್ರಭೇದದ ಸಂರಕ್ಷಣೆಯ ಕೃಷ್ಣಯ್ಯರ ಅಭಿಯಾನವನ್ನು ಬೆಂಬಲಿಸಿದ್ದಾರೆ. ಗಮನಾರ್ಹವೆಂದರೆ ಶ್ರೀಮಠಕ್ಕೆ ಸ್ವೀಕರಿಸಿರುವ ಶ್ರೀತಾಳೆ ಮರದ 10ಸಾವಿರ ಬೀಜಗಳನ್ನೀಗ ಭಟ್ಟಾರಕ ಶ್ರೀಗಳವರು ಶಿಷ್ಯವರ್ಗಕ್ಕೆ ಫಲಮಂತ್ರಾಕ್ಷತೆಯೊಂದಿಗೆ ಪ್ರಸಾದ ರೂಪದಲ್ಲಿ ವಿತರಿಸಿ ವಿವರಿಸುತ್ತಿರುವುದು ಬೀಜಾಕ್ಷತೆಯ ಮೂಲಕ ಹಸಿರು ಅಭಿಯಾನ ಶ್ರೀತಾಳೆಯ ಸಂರಕ್ಷಣೆಗೆ ಮಾದರಿ ಹೆಜ್ಜೆಯಿರಿಸಿದಂತಾಗಿದೆ.

ರೋಗಿ ಯಾ ರೋಗಕ್ಕೆ ಜೀವ ಹತ್ಯೆಯೇ ಪರಿಹಾರವಲ್ಲ. ಶ್ರೀತಾಳೆ ಮರದ ಕುರಿತಂತೆ ಜನರಲ್ಲಿರುವ ಮೌಢ್ಯಕ್ಕೆ ಧಾಮರ್ಿಕ ನೆಲೆಯಲ್ಲೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಮರವನ್ನು ಕಡಿಯುವುದೇ ಪರಿಹಾರವಲ್ಲ ಎನ್ನುವ ಭಟ್ಟಾರಕ ಶ್ರೀಗಳವರು ಜೈನ ಧರ್ಮದ ಧವಲತ್ರಯ ಮೂಲ ಗ್ರಂಥಗಳೂ ಸೇರಿದಂತೆ ಪ್ರಾಚೀನ ಕಾಲದ ಸಮಗ್ರ ಜೈನ, ವೈದಿಕ ಸಾಹಿತ್ಯಗಳಿಗೆ ಆಸರೆಯಾದ ತಾಡಗರಿಯ ಶ್ರೀತಾಳೆ ಮರ ಉಳಿಸುವ ಅಗತ್ಯತೆಯನ್ನು ವಿವರಿಸುತ್ತಾರೆ. ಈ ಬಗ್ಗೆ ಜನರಲ್ಲಿ ಮೌಢ್ಯ ಕರಗಬೇಕು. ಯುವಜನತೆಗೂ ಈ ಸಸ್ಯ ಸಂಪತ್ತಿನ ಅರಿವು ಸಿಗುವಂತಾಗಬೇಕು. ನಾವೆಲ್ಲರೂ ಈ ಹಸಿರು ಅಭಿಯಾನಕ್ಕೆ ಕೈಜೋಡಿಸಬೇಕು ಎನ್ನುವುದು ಭಟ್ಟಾರಕ ಶ್ರೀಗಳವರ ಖಚಿತ ನಿಲುವು.

ಕ್ರಿ.ಶ.1190ರಲ್ಲಿವಿಜಾಪುರದ ಖೇಡ್-ಗ್ರಾಮದಲ್ಲಿ ಜೈನಾಡಳಿತ ನಡೆಸಿದ್ದ ಬೊಪ್ಪಣ್ಣ ನಾಯಕನ ಹೆಂಡತಿ ಸಿರಿದೇವಿ ಗಿಡ-ಮರ ಬೆಳೆಸುವ ಸಂಕಲ್ಪದ ವೃತ 'ಕ್ಷಿತಿರೂಹ ನೋಂಪಿ'ಯನ್ನು ತಾಡದೇವ-ಹೆಸರಿನಲ್ಲಿ ವೃಕ್ಷ ಪೂಜೆ ಮಾಡಿದ್ದೇ ಪ್ರೇರಣೆಯಾಗಿ ಆ ಸಿರಿಯ ಹೆಸರಲ್ಲೇ 'ಪಚ್ಚೆವನಸಿರಿ ಭಾರತ' (ಗ್ರೀನ್ ಇಂಡಿಯಾ ವಿಷನ್) ಪರಿಕಲ್ಪನೆಯಲ್ಲಿ ಇಂದು ಬಹುತೇಕ ವಿನಾಶದಂಚಿನಲ್ಲಿರುವ ಗಿಡಮರಗಳನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಭೂಬಾಗಿನ, ನಾಗಸಿರಿ ಬಾಗಿನ, ಹಸುರುಕಲ್ಯಾಣ ನಡೆ-ಈ ಹೆಸರುಗಳಿಂದ ಭೂತಾಯಿ ಸೇವೆ ಮಾಡುತ್ತಿದ್ದೇವೆ ಎನ್ನುವ ಕೃಷ್ಣಯ್ಯ ಅರಣ್ಯ ಇಲಾಖೆ, ಕೃಷಿ ಇಲಾಖೆ, ಪರಿಸರಾಸಕ್ತರು, ಶಿಕ್ಷಣ ಸಂಸ್ಥೆಗಳು ಹೀಗೆ ಎಲ್ಲೆಂದರಲ್ಲಿ ಶ್ರೀತಾಳೆಯ ಸಂರಕ್ಷಣೆಯ ಬೀಜಗಳ ಮೂಲಕ ಸಂದೇಶ ಬಿತ್ತಿದ್ದಾರೆ.

ಕಾರ್ಗಿಲ್ ಕಾಡಿನ ಕನಸು...!

ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ 527 ವೀರ ಯೋಧರ ನೆನಪಲ್ಲಿ 527 ಶ್ರೀತಾಳೆಯ ಬೀಜಗಳನ್ನು ಉಡುಪಿ ಜಿಲ್ಲಾಡಳೀತಕ್ಕೆ ಹಸ್ತಾಂತರಿಸಿದ್ದ ಕೃಷ್ಣಯ್ಯ ಕಾರ್ಗಿಲ್ ಹೆಸರಲ್ಲೇ ಶ್ರೀತಾಳೆ ಮರಗಳ ಕಾಡೊಂದನ್ನು ರಾಜ್ಯದಲ್ಲಿ ಬೆಳೆಸಬೇಕು ಎನ್ನುವು ಕನಸು ಹೊತ್ತಿದ್ದಾರೆ. ಕಾರಣ ಉತ್ತರ ಕನ್ನಡದ 10ಸಾವಿರದಷ್ಟು ಶ್ರೀತಾಳೆ ಮರಗಳನ್ನೂ ಸೇರಿಸಿ

ರಾಜ್ಯದಲ್ಲಿರುವುದು ಬರೇ 12 ಸಾವಿರ ಶ್ರೀತಾಳೆ ಮರಗಳು ಮಾತ್ರ ಎನ್ನುವುದು ಅವರ ಕೊರಗು. ಅಮೃತ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ 76 ರಂಗಕಲಾವಿದರಿಗೂ ಶ್ರೀತಾಳೆ ಬೀಜವನ್ನು ಒದಗಿಸಿರುವ ಕೃಷ್ಣಯ್ಯ ಅಯೊಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲೂ ಶ್ರೀತಾಳೆಯ ಬೀಜವನ್ನು ತಲುಪಿಸುವ ಇರಾದೆ ಹೊಂದಿದ್ದಾರೆ. ವನವಾಸದಲ್ಲಿದ್ದಾಗ ಪರ್ಣ ಕುಟೀರಕ್ಕಾಗಿ ಶ್ರೀ ರಾಮ ಬಳಸಿದ್ದು ಶ್ರೀತಾಳೆ ಮರದ ಗರಿಗಳನ್ನೇ ಎನ್ನುವ ಅವರ ಏಕಾಂಗಿ ಹೋರಾಟಕ್ಕೆ ಸ್ಥಳೀಯ ಸಮಾನ ಮನಸ್ಕರೇನೋ ಸಾಥ್ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆಯಾಗಲೀ, ಜಿಲ್ಲಾಡಳಿತ, ರಾಜ್ಯ ಸರಕಾರವಾಗಲೀ ಬಿಡಿಗಾಸು ಬಿಡಿ ಕನಿಷ್ಠ ಬೆಂಬಲವನ್ನೂ ನೀಡಿ ಗುರುತಿಸಿಲ್ಲ.

 ಅಲ್ಲಲ್ಲಿ ಬೀಜಗಳ ಕಣಜ ಸ್ಥಾಪಿಸುವ ಅವರ ಚಿಂತನೆ, ತಾಡ ಪ್ರತಿಗಳ ಸಂರಕ್ಷಣೆ, ತಾಡಪ್ರತಿಲಿಪಿ ಶಿಕ್ಷಣ, ತಾಡ ಪ್ರತಿ ಸಾಹಿತ್ಯಕ್ಕೆ ಪ್ರೋತ್ಸಾಹ, ಸಾಧಕರಿಗೆ ಗೌರವ ಹೀಗೆ ಉಡುಪಿ ಕಡಿಯಾಳಿಯ ಸುಮುಖಪ್ರಿಯ ನಿವಾಸದ ತುಂಡು ಭೂಮಿಯಲ್ಲಿ ಶ್ರೀತಾಳೆಯ ವಿಶ್ವವ್ಯಾಪಿ ಕನಸಿನೊಂದಿಗೆ ಕಾರ್ಯನಿರತ ಭಗೀರಥ ಕೃಷ್ಣಯ್ಯ ಅವರ ಅನನ್ಯ ಸೇವೆ ಅನುಕರಣೀಯ, ಸಾಧನೆ ಅಭಿನಂಧನೀಯ.

ಕೃಷ್ಣಯ್ಯ ವಿವರಿಸುವ ಬಹುಪಯೋಗಿ ಶ್ರೀತಾಳೆ !

ಔಷಧಿ ಗುಣಗಳುಳ್ಳ ಮರ -ಗುಪ್ತರೋಗಗಳಿಗೆ ರಾಮಬಾಣ

ಒಂದು ಮರದಲ್ಲಿ 250 ಕೆಜಿ ಸಬ್ಬಕ್ಕಿ ಲಭ್ಯ ಸಂಸ್ಕರಿಸಿದರೆ ಸುಮಾರು 700 ಕೆ.ಜಿ.ಯಷ್ಟು ಪೋಷಕಾಂಶ

ರಾಜ ಮಹಾರಾಜರಿಗೆಛತ್ರಿಯಾಗಿದ್ದ ಎಲೆಗಳ ಬಳಕೆ, ಮಳೆಗಾಲದ ಕೃಷಿ-ನಾಟಿ-ಬಿತ್ತನೆ ಸಂದರ್ಭದಲ್ಲಿ ಎಲೆಯಿಂದ ಗೊರಬು

ತಿರುಳಿನ ಹುಡಿ(ಪಣೋಲಿದ ಬಂದ) ಬರಗಾಲದ ಆಹಾರವಾಗಿ ಬಳಕೆ. ಒಣಗಿಸಿ ಭರಣಿಯಲ್ಲಿ ತುಂಬಿಟ್ಟರೆ ಸುಮಾರು 8ರಿಂದ 12 ವರ್ಷ ಸುರಕ್ಷಿತ

ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ಈ ಮರದ ಎಲ್ಲಾ ಭಾಗಗಳು ಉಪಯುಕ್ತ

ಗಂಜಿ ಸೇವನೆಯಿಂದ ನಿಮೋನಿಯಾ ಖಾಯಿಲೆ ವಾಸಿ

ಬ್ರಿಟೀಷ್ ಕಾಲದಲ್ಲಿ ಈ ಮರದ ಕಂಬಗಳನ್ನು ಬೀದಿ ದೀಪದ ಕಂಬವಾಗಿ, ಬರುವ ನಾವಿಕರಿಗೆ ದಿಕ್ಸೂಚಿ ದೀಪ ಸ್ತಂಭವಾಗಿ, ಅಂಗಿಗಳಿಗೆ , ಕೋಟುಗಳಿಗೆ ಈ ಮರದ ಬೀಜಗಳನ್ನು ಗುಂಡಿಯಾಗಿ ಬಳಕೆ.

ಆಹಾರ ಪದಾರ್ಥಗಳನ್ನು ದೊಡ್ಡ ಮಣ್ಣಿನ ಕಣಜ ಮಾಡಿದಾಗ ಮೇಲ್ಭಾಗದಲ್ಲಿ ಇದರ ಎಲೆಗಳನ್ನು /ಗರಿಗಳನ್ನು ಮುಚ್ಚಳಿಕೆಯಾಗಿ ಬಳಸುತ್ತಿದ್ದರು.

ಓಲೆ ಪಟಾಕಿ/ಗರ್ನಲ್ -ಸುಡುಮದ್ದು ಮಾಡಲು ಇದರ ಎಲೆಗಳ ಬಳಕೆ

ಯಕ್ಷಗಾನದ ಗುಂಡುಮಣಿ ಸರವನ್ನು ಈ ಮರದ ಬೀಜಗಳಿಂದ ತಯಾರಿ. ಹೆಣ್ಣು-ಬಣ್ಣದ ವೇಷಗಳಿಗೆ ಈ ಮರದ ಎಲೆಗಳನ್ನು ಹರಡಿ ನಡು ನಡುವೆ

ನವಿಲುಗರಿಗಳಿಂದ ಅಲಂಕಾರ

ಆಭರಣದವಾಗಿ ಈ ಮರದ ಕಾಯಿಗಳ ಸರಮಾಲೆ, ಈ ಮಣಿ ಕಾಯಿಗಳನ್ನು ವಿದೇಶಗಳಿಗೆ ರಪ್ತು

ಮಣ್ಣಿನ ಸವಕಳಿ, ಬೆಟ್ಟ ಗುಡ್ಡ ಜಾರದಂತೆ ತಡೆಯುವ ಶಕ್ತಿ

ಪ್ರಪಂಚಕ್ಕೆ ವಿಸ್ಮಯವೆನ್ನುವಂತೆ ಈ ಮರದ ಹೂವು , ಕಾಯಿ 8 ತಿಂಗಳು ಇದ್ದು ಆನಂತರ ಮರ ನಾಶ

ಈ ಮರದಲ್ಲಿ ಬಿಟ್ಟ ಪುಷ್ಪದ ಸುವಾಸನೆಗೆ ಅರಣ್ಯಕ್ಕೆ ಅಂಟುವ ನುಸಿರೋಗಗಳಿದ್ದರೆ ಈ ಹೂವಿನ ಪರಿಮಳಕ್ಕೆ ಸಿಕ್ಕಿ ಅಂತ್ಯಕಾಣುತ್ತದೆ.

ಬಾವಲಿ, ಅಳಿಲು, ಹಕ್ಕಿಗಳ ಮೂಲಕ ಈ ಮರದ ಬೀಜಗಳು ಪ್ರಸಾರಣವಾಗುತ್ತವೆ.

ಈ ನಾಡಿನ ಶ್ರೇಷ್ಠಗ್ರಂಥಗಳು ಈ ಮರದ ತಾಳೆಯೋಲೆಯಿಂದ ರಚಿತ. ಪೇಪರ್ ಬಂದನಂತರ ಇದರ ಬಳಕೆ ಕಡಿಮೆ.

ಭೂಮಿ ಲೆಕ್ಖಾಚಾರದ-ಪಹಣಿ ಪಟ್ಟಿಯನ್ನು ಬರೆಯುತ್ತಿದ್ದರು, ಇದನ್ನು ತಿಗುಳೈಪಟ್ಟಿ ಎಂದು ಕರೆಯಲಾಗಿದೆ.

ಶ್ರೀತಾಳೆ ಬೀಜ/ಕಾಯಿಗಳಿಂದ ಪಾಕರ್ಿನ್ಸನ್/ಕಂಪನ ಕಾಯಿಲೆಗಳಿಗೆ ಔಷಧಿಯನ್ನು ಕಂಡು ಹಿಡಿಯಲಾಗಿದೆ.

 ಮಾಳಿಗೆ ಮನೆ ಕಟ್ಟುವ ಸಂದರ್ಭದಲ್ಲಿ ಮರದ ಹಲಗೆಗಳಿಗೆ ಗೆದ್ದಲು/ಒರಲೆ ಹತ್ತದಂತೆ ಶ್ರೀತಾಳೆ ಮರದ ಎಲೆಗಳು ಮತ್ತು ಜಾರಿಗೆ ಮರದ ಎಲೆಗಳನ್ನು ಹಾಸಿ ಮಾಳಿಗೆಯ ಹಲಗೆಗಳನ್ನು ಜೋಡಿಸುತ್ತಿದ್ದರು.


ಬರಹ :ಗಣೇಶ್ ಕಾಮತ್

 




Leave a Comment