ರೂಪಶ್ರೀ ಕನ್ಯಾನ

ಲೇಖನ.

ಜೀವನದ ಪ್ರಮುಖ ಘಟ್ಟವೇ ವಿದ್ಯಾಭ್ಯಾಸ. ವಿದ್ಯಾಭ್ಯಾಸವೆಂಬುದೇ ಒಂದು ಪವಿತ್ರ ತಪಸ್ಸು.  ಮನಸ್ಸೆಂಬುದು ನಿಜಕ್ಕೂ ಬೆಣ್ಣೆಯಿದ್ದಂತೆಯೇ ಸೈ. ವಿದ್ಯಾರ್ಥಿಯು ತನ್ನ ಮೃದು ಮನಸ್ಸನ್ನು ಹೂವಿನಂತೆ ಸಂರಕ್ಷಿಸಬೇಕು. ಅದಿಲ್ಲ ಎಂದರೆ ಮನಸ್ಸೇ ಮರ್ಕಟನಾದಾಗ ವಿದ್ಯಾರ್ಥಿಯ ಬಾಳು ಗೋಳಾಗದಿರದು. ಸುಂದರವಾದ ಹೂವಿಗೆ ಸುವಾಸನೆಯಿದ್ದರೆ ಅದರ ಮೌಲ್ಯ ಇನ್ನೂ ಹೆಚ್ಚಾಗುತ್ತದೆ. ಅಂತೆಯೇ ಸುಂದರವಾದ ಕನಸುಗಳಿರುವ ನಮ್ಮ ಮನಸ್ಸನ್ನು ಸದಾ ವೈವಿಧ್ಯವಾದ ವಿಚಾರಗಳಿಂದ ತುಂಬಿ ಅದು ಸದಾ ಕಂಪನ್ನು ಬೀರುವಂತಿರಲಿ .

ಮಕ್ಕಳ ಮನಸ್ಸನ್ನು ಕುದುರೆಗೆ ಕಣ್ಣು ಪಟ್ಟಿ ಕಟ್ಟಿದಂತೆ ಕೇವಲ ಅಂಕಗಳಿಕೆಯಿಂದ ಮಾತ್ರವೇ ಜೀವನ ಎಂದುಕೊಂಡು ಉಳಿದ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದರೆ ಆ ವಿದ್ಯಾರ್ಥಿಯು ಉತ್ತಮನಾಗಿ ಸಮಾಜದಲ್ಲಿ ಬಾಳಲು ಸಾಧ್ಯವಿಲ್ಲ. ಆದುದರಿಂದ ವಿದ್ಯಾರ್ಥಿಗಳಲ್ಲಿ ಸದ್ವಿಚಾರಗಳನ್ನು ಮೌಲ್ಯಗಳನ್ನು ತುಂಬಬೇಕು.

ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ|

ಫಲಾನ್ಯಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾ ಇವ||

ಎಂಬಂತೆ ಸದ್ವಿಚಾರಗಳನ್ನು ತಿಳಿದು ಪಾಲಿಸುತ್ತಿರುವ ವಿದ್ಯಾರ್ಥಿಯು ಹೇಗೆ 'ವೃಕ್ಷಗಳು ತಾವು ಬಿಸಿಲಿನಲ್ಲಿ ನಿಂತು ಉಳಿದವರಿಗೆ ನೆರಳು ಹಾಗೂ ಹಣ್ಣನ್ನು ಕೊಡುವುದೋ ಹಾಗೆಯೇ ತಾನು ಕಷ್ಟದಲ್ಲಿದ್ದರೂ ಪರರಿಗೆ ಉಪಕಾರಿಯಾಗಿ

ಬೆಳೆಯಬಲ್ಲ. ಈ ರೀತಿಯ ಪರೋಪಕಾರಿ ಗುಣವೇ ವಿದ್ಯಾರ್ಥಿಯು ಮುಂದೆ ಸ್ವ-ಇಚ್ಛೆಯಿಂದ ಸಮಾಜಮುಖಿ ಕೆಲಸದಲ್ಲಿ ತೊಡಗುವಂತೆ ಪ್ರೇರೇಪಿಸುವುದು '.

ಸುಸಂಸ್ಕೃತ ಜನಾಂಗ ನಿರ್ಮಾಣ ಮಾಡುವುದಕ್ಕೆ ರಾಷ್ಟ್ರ ನಿರ್ಮಾಣ ಎಂದು ಹೇಳಬಹುದು. ಈ ರಾಷ್ಟ್ರ ನಿರ್ಮಾಣದ ಭಾಗವೇ ವಿದ್ಯಾರ್ಥಿಗಳು ನಡೆಸುವ ಸಮಾಜಮುಖಿ ಕೆಲಸಗಳು. ಮನೆಯ ಅಸ್ತಿತ್ವವು ಅದರ ಒಂದೊಂದು ಧೂಳನ್ನು ಅವಲಂಬಿಸಿಕೊಂಡಿರುವಂತೆ ರಾಷ್ಟ್ರದ ಅಸ್ತಿತ್ವವು ವಿದ್ಯಾರ್ಥಿಗಳನ್ನೊಳಗೊಂಡು ಪ್ರತಿಯೊಬ್ಬ ಪ್ರಜೆಯನ್ನು ಆಧರಿಸಿಕೂಂಡಿದೇ. ಆದುದರಿಂದ ವಿದ್ಯಾರ್ಥಿಗಳ ಹೊಣೆಗಾರಿಕೆಯು ರಾಷ್ಟ್ರದ ಪಾಲಿಗೆ ಅಗತ್ಯ. 

ವಿದ್ಯಾರ್ಥಿಗಳು ಸಮಾಜಮುಖಿ ಕೆಲಸಗಳನ್ನು ಮಾಡುವುದಕ್ಕಾಗಿ ಹಣ ವ್ಯಯಿಸಬೇಕಾಗಿಲ್ಲ. ಕೇವಲ ನಾವು ವಿದ್ಯಾಭ್ಯಾಸದಿಂದ ಗಳಿಸಿದ ಜ್ಞಾನವನ್ನು ಉಪಯೋಗಿಸಿಕೊಂಡರೆ ಸಾಕು. ದೇಶ ತನ್ನ ಸೇವೆಗಾಗಿ ಹಾತೊರೆಯುತ್ತಿದೆ ಎಂದು ತಿಳಿದು ತನ್ನ ಸುತ್ತಲಿನ ಸಮಾಜವನ್ನು ದೇಶದ ಅಭಿವೃದ್ಧಿಗೆ ನೆರವಾಗುವಂತೆ ಹೊಂದಿಸಬೇಕು.

ಅನಕ್ಷರಸ್ಥರಾದ ತನ್ನ ನೆರೆಹೊರೆಯವರಿಗೆ ವಿದ್ಯೆಯಿಂದಾಗುವ ಪ್ರಯೋಜನವನ್ನು ಹೇಳಿ ಅವರಿಗೆ ಓದಲು, ಬರೆಯಲು, ಸರಳ ಲೆಕ್ಕಗಳನ್ನು ಮಾಡಲು ಕಲಿಸಿಕೊಡಬೇಕು.'ಕಾರ್ಯ ನನ್ನದು , ಸಫಲತೆ ನಿನ್ನದು ' ಎಂಬ ಭಾವನೆಯಿಂದ ದುಡಿಯಬೇಕು. ಈ ರೀತಿಯಾಗಿ ಸಾಕ್ಷರತೆಗೆ ಕೊಡುಗೆ ನೀಡಬಹುದು. 

Leave a Comment