ದುಡಿಮೆಯೇ ದೇವರೆಂದವರಿಗೆ ಕಲಾವಿದನ ವಿ "ಚಿತ್ರ" ಗಿಫ್ಟ್!!!ಕಲಾವಿದ ಸಮಾಜಕ್ಕೆ ಸ್ಪೂರ್ತಿಯಾಗಬೇಕು:ತಿಲಕ್

ಗಣೇಶ್ ಕಾಮತ್ ಮೂಡಬಿದಿರೆ
ದುಡಿಮೆಯೇ ದೇವರೆಂದವರಿಗೆ ಕಲಾವಿದನ ವಿ "ಚಿತ್ರ" ಗಿಫ್ಟ್!!!ಕಲಾವಿದ ಸಮಾಜಕ್ಕೆ ಸ್ಪೂರ್ತಿಯಾಗಬೇಕು:ತಿಲಕ್

ಪ್ರತಿಭೆ ಎನ್ನುವುದು ಸಾಧಕರಲ್ಲಿ ಮಾತ್ರವಲ್ಲ ಸೇವಕರಲ್ಲೂ ಇದೆ. ಅದ್ಯಾವ ಪ್ರಚಾರದ ಹಂಗಿಲ್ಲದೇ ತಮ್ಮ ಪಾಡಿಗೆ ತಾವು ಕರ್ಮಣ್ಯೇ ವಾಧಿಕಾರಸ್ತೇ ಎಂದು ದುಡಿಯುವ ವರ್ಗದ ಜನತೆಗೆ ಅವರದ್ದೇ ಚಿತ್ರವೊಂದನ್ನು ಅವರಿಗರಿವಿಲ್ಲದೇ ಸ್ಥಳದಲ್ಲೇ ರಚಿಸಿ ಫ್ರೇಂ ಜೋಡಿಸಿ ನೀಡಿದರೆ ಹೇಗಿರಬೇಡ? ಹೀಗೊಂದು ಸದ್ದಿಲ್ಲದ ಸಾಧಕರನ್ನು ಗುರುತಿಸುವ , ಗೌರವಿಸುವ ಆ ಮೂಲಕ ಅವರನ್ನು ಪ್ರೊತ್ಸಾಹಿಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿರುವುದು ಯುವ ಕಲಾವಿದ ಮೂಡುಬಿದಿರೆಯ ತಿಲಕ್ ಕುಲಾಲ್.

ಆಳ್ವಾಸ್ ಕಾಲೇಜಿನಲ್ಲಿ ವಿಶುವಲ್ ಆರ್ಟ್ ವಿದ್ಯಾರ್ಥಿಯಾಗಿದ್ದಾಗಲೇ ತನ್ನ ಪ್ರತಿಭೆ ಹೊರ ಸೂಸಿದ್ದ ತಿಲಕ್ ಬಳಿಕ ಸಾವಿರಾರು ಮೊಳೆಗಳಲ್ಲಿ ಗಣಪತಿ, ಎಲೆ, ದೀಪಗಳಲ್ಲಿ ಕಲಾಕೃತಿ, ಇದ್ದಿಲು, ಹೊಯ್ಗೆ, ಬಣ್ಣದಲ್ಲಿ ಸ್ಥಳದಲ್ಲೀ ಗ್ಲೂ ಆರ್ಟ್ , ಲೈವ್ ಆರ್ಟ್ ಹೀಗೆ ಕಲಾ ವೈವಿಧ್ಯತೆಗಳಿಂದ ವಿಶ್ವ ದಾಖಲೆ ಬರೆದವರು.


ಸದಾ ಹೊಸತನಕ್ಕೆ ತುಡಿಯುವ ತಿಲಕ್ ನಮ್ಮ ನಡುವಿನ ಮೌನ ಸಾಧಕರ ಮುಖದಲ್ಲೂ ಧನ್ಯತೆಯ ನಗು ಮೂಡಿಸ ಬೇಕು ಎನ್ನುವುದಕ್ಕೆ ಕಂಡು ಕೊಂಡ ಹೊಸ ವಿಧಾನವೇ ಈ ವಿ"ಚಿತ್ರ " ಗಿಫ್ಟ್ !

ತಾವೇ ಗುರುತಿಸುವ ಮೌನ ಸಾಧಕರು, ಶ್ರಮ ಜೀವಿಗಳನ್ನು ಅವರಿಗರಿವಿಲ್ಲದೇ ಬೆನ್ನಟ್ಟುವ

ತಿಲಕ್ ಸ್ಥಳದಲ್ಲೇ ಪೆನ್ಸಿಲ್ ಚಿತ್ರ ಬರೆದು ಸಿದ್ಧವಿರುವ ಫ್ರೇಂಗೆ ಜೋಡಿಸಿ ಕೊಟ್ಟಾಗ ಅಚ್ಚರಿ, ಧನ್ಯತೆ , ಸಾರ್ಥಕತೆಯ ಭಾವ ವ್ಯಕ್ತ ಪಡಿಸಿದವರೇ ಅಧಿಕ.

ಜಾಡಮಾಲಿ, ವಿಕಲ ಚೇತನ, ಲೈನ್ ಮ್ಯಾನ್, ಫ್ಯೂಯಲ್ ಬಾಯ್ , ಮೀನು ಮಾರುವಾಕೆ, ಕ್ಯಾಂಟೀನ್ ನಡೆಸುವಾಕೆ, ಮಹಿಳಾ ಪೋಲೀಸ್ ಹೀಗೆ ಅದಾಗಲೇ ಹಲವರಿಗೆ ವಿಚಿತ್ರ ಗೌರವ ದ ಅಚ್ಚರಿಯ ಅನುಭವವಾಗಿದೆ.

ಅಂದ ಹಾಗೆ ಈ ಪ್ರಕಿಯೆಯನ್ನು ರೀಲ್ಸ್ ಮಾಡಿ ಸಾಮಾಜಿಕ ಜಾಲ ತಾಣದಲ್ಲೂ ಶೇರ್ ಮಾಡಿದ ಕಾರಣ ಈ ವಾರಿಯರ್ಸ್ ಗಳೂ ಗುರುತಿಸಿಕೊಳ್ಳುವಂತಾಗಿದೆ.

ಕಲಾವಿದ ಸಮಾಜಕ್ಕೆ ಸ್ಪೂರ್ತಿಯಾಗಬೇಕು. ಶ್ರಮಿಕರ ಸ್ಫೂರ್ತಿ ಸಮಾಜದಲ್ಲಿ ಅವರ ಸೇವೆ ಸಾಧನೆಯನ್ನು ಇನ್ನಷ್ಟು ಬಲಗೊಳಿಸುವಂತಾಗಬೇಕು ಎನ್ನುತ್ತಾರೆ ತಿಲಕ್

Leave a Comment