ಇಂದು ಹಿಂದೂಗಳಿಗೆ ಮತ್ತು ಶಿವಭಕ್ತರ ಪ್ರಿಯವಾದ ದಿನ. ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳು ಇವೆ. ಅದರಲ್ಲಿ ಮಹಾಶಿವರಾತ್ರಿ ಹಬ್ಬ ಕೂಡ ಒಂದು. ಈ ಹಬ್ಬಕ್ಕೆ ಅನೇಕ ಕಥೆಗಳಿವೆ.
ಈ ದಿನ ಶಿವ ಪಾರ್ವತಿಯನ್ನು ವರಿಸಿದ ಕಥೆ ಒಂದು ಕಡೆಯಾದರೆ, ಸಮುದ್ರ ಮಂಥನದ ಸಮಯದಲ್ಲಿ ವಿಷ ಬಂದಾಗ ಅದನ್ನು ಶಿವ ಕುಡಿದಾಗ ಪಾರ್ವತಿ ವಿಷ ಗಂಟಲೊಳಗೆ ಇಳಿಯದ ಹಾಗೆ ತಡೆದ ಕಥೆ ಕೂಡ ಇದೆ. ಅಲ್ಲದೇ ಭಗೀರಥನ ತಪ್ಪಸ್ಸಿಗೆ ಮೆಚ್ಚಿ ಶಿವ ತನ್ನ ಜಡೆಯಲ್ಲಿದ್ದ ಗಂಗೆಯನ್ನು ಇಳೆಗೆ ಕಳುಹಿಸಿದ್ದು ಕೂಡ ಇಂದೇ.
ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಮಿನುಗುವ ಶುಭ್ರ
ಚಂದ್ರ ಕಾಣಸಿಗುತ್ತಾನೆ. ಈ ಪರ್ವಕಾಲ ಶಿವನ ಆರಾಧನೆ ಸೂಕ್ತವಾದ ಕಾಲವಾಗಿದ್ದು, ಅಂದು ಈಶ್ವರನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.
ಇಂದು ಪ್ರಾತಃಕಾಲದಲ್ಲಿಯೇ ಎದ್ದು, ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಉಪವಾಸವಿದ್ದು, ಶಿವದೇವಾಲಯಗಳಿಗೆ ತೆರಳಿ, ಶಿವಾರ್ಚನೆ ಮಾಡಿದರೆ ಮತ್ತು ರಾತ್ರಿಯಿಡೀ ಜಾಗರಣೆ ಮಾಡಿ ಶಿವನ ಪೂಜೆ ಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗಿ ಸುಖ, ಶಾಂತಿ, ಸಂಪತ್ತು ಲಭಿಸುತ್ತದೆ, ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ.










