ಬಂಟ್ವಾಳ : ಮಕ್ಕಳಿಗೆ ಚಿಕ್ಕವರಿರುವಾಗಲೇ ಉತ್ತಮ ಸಂಸ್ಕಾರಯುತ ಶಿಕ್ಷಣ ಸಿಕ್ಕರೆ ಮುಂದೆ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಸಾಧ್ಯ, ದೇವಾಲಯ ಹಾಗೂ ವಿದ್ಯಾಲಯಗಳು ಸಂಸ್ಕಾರ ಕಲಿಸುವ ಕೇಂದ್ರಗಳು, ಧಾರ್ಮಿಕ ಆಚರಣೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಲಕುಮಿ ತಂಡ ಕುಡ್ಲ ಇದರ ನಿರ್ದೇಶಕರಾದ ಲಯನ್ ಕಿಶೋರ್ ಡಿ ಶೆಟ್ಟಿ ಹೇಳಿದರು.
ಇಲ್ಲಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆಯ ಕಾರಣಿಕ ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವದಿ ಉತ್ಸವದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಪ್ರಾಸ್ತವಿಕವಾಗಿ ಮಾತಾಡಿದ ಕ್ಷೇತ್ರದ ಟ್ರಸ್ಟಿ ಟಿ ತಾರಾನಾಥ ಕೊಟ್ಟಾರಿ, ಇಲ್ಲಿಯ ಜನರ ಹೃದಯ ಶ್ರೀಮಂತಿಕೆ ಹಾಗೂ ಸಮರ್ಪಣಾ ಮನೋಭಾವದಿಂದ ಕ್ಷೇತ್ರದಲ್ಲಿ ನಿರಂತರ ಧರ್ಮ ಜಾಗೃತಿಯ ಕಾರ್ಯ ನಡೆಯುತ್ತಿದೆ. ಭರತನಾಟ್ಯ, ಯಕ್ಷಗಾನ, ಸಂಗೀತ, ಭಜನೆ ಮುಂತಾದ ಕಲಾ ಪ್ರಕಾರಗಳು ದೇವಸ್ಥಾನದ ಮೂಲಕ ಸಮಾಜಕ್ಕೆ ಸಮರ್ಪಣೆಯಾಗುತ್ತಿದೆ, ಮುಂದಿನ ವರ್ಷದಲ್ಲಿ ಸಮುದಾಯ ಭವನ ಹಾಗೂ ಅನ್ನಛತ್ರದ ದ ಕಟ್ಟಡವು ಲೋಕಾರ್ಪಣೆಗೊಳ್ಳಲಿದ್ದು ಭಕ್ತರ ತನು ಮನ ಧನದ ಸಹಕಾರ ಅಗತ್ಯ ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಪ್ರವೀಣ್ ಬೊಳ್ಳಾರಿ ಮಾತನಾಡಿ ಧರ್ಮ ಮತ್ತು ದೇವರು ನಮ್ಮ ಜೀವನದ ಅವಿಭಾಜ್ಯ ಅಂಗ,ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಸಕಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ,ಕ್ಷೇತ್ರದಲ್ಲಿ ನಿರಂತರ ಸಂಸ್ಕಾರಯುತ ಕಾರ್ಯಕ್ರಮಗಳು ನಡೆಯುದು ಶ್ಲಾಘನೀಯ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಸಂಚಾಲಕರಾದ ನಾರಾಯಣ ನಾಯ್ಕ್ ಮಾತನಾಡಿ
ದೇವಾಲಯಗಳು ಪವಿತ್ರ ಜಾಗ ಎಲ್ಲಾ ಜಾತಿಯ ಜನರಿಗೂ ಆಸ್ತಿಕ ಕೇಂದ್ರ. ಧಾರ್ಮಿಕ ಕಾರ್ಯಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ದೇವಾಲಯಗಳಲ್ಲಿ ರಾಜಕೀಯ ಇರಬಾರದು ಎಂದು ಹೇಳಿದರು.
ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ ದಯಾನಂದ, ಪಿಲಿ ಚಾಮುಂಡಿ ದೇವಸ್ಥಾನದ ದೈವ ಪಾತ್ರಿ ತಂಕು ಮೂಲ್ಯ,ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ನಿರ್ದೇಶಕಿ ಶುಭ ಆನಂದ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ದೇವಸ್ಥಾನಕ್ಕೆ ಸ್ಥಳವನ್ನು ಧಾನವಾಗಿ ಕೊಟ್ಟ ವಾರಿಜ ಸಪಲ್ದಿಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸದಾಶಿವ ಡಿ ತುಂಬೆ, ಉಮೇಶ್ ಸುವರ್ಣ, ಆನಂದ ಬಂಜನ್, ವೇಣುಗೋಪಾಲ್, ಕೇಶವ ಪೆರಿಯೋಡಿ, ಅಶೋಕ್ ಸಾಲ್ಯಾನ್, ಮಾಲತಿ ಬಿ, ಮಲ್ಲಿಕಾ, ಶ್ರೀನಾಥ್ ಗುಂಡಿಬೆಟ್ಟು ಪ್ರವೀಣ್ ಜ್ಯೋತಿಗುಡ್ಡೆ, ಪುಷ್ಪರಾಜ್, ದಿನೇಶ್ ಜ್ಯೋತಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ದೇವಸ್ಥಾನದ ಟ್ರಸ್ಟಿ ಉಮೇಶ್ ಕುಮಾರ್ ರೆಂಜೋಡಿ ಸ್ವಾಗತಿಸಿ, ಟ್ರಸ್ಟಿ ಕೇಶವ ನಾಯ್ಕ್ ಧನ್ಯವಾದವಿತ್ತರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿಠ್ಠಲ್ ನಾಯಕ್ ಕಲ್ಲಡ್ಕ ಬಳಗದಿಂದ "ಗೀತ ಸಾಹಿತ್ಯ ಸಂಭ್ರಮ" ಕಾರ್ಯಕ್ರಮ ನಡೆಯಿತು.













