ನಿಹಾಲ್ ತಾವ್ರೋ ಈಗ ಕನ್ನಡಿಗರಿಗೆ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಸಂಗೀತ ಪ್ರೇಮಿಗಳ ಹೊಸ ಯುವ ತಾರೆ. ಸೋನಿ ಟೀವಿಯ ಮೂಲಕ ರಾಷ್ಟ್ರ ಮಟ್ಟದ ಇಂಡಿಯನ್ ಐಡಲ್ ಎನ್ನುವ ಸಂಗೀತದ ದೊಡ್ಡ ರಿಯಾಲಿಟಿ ಶೋಗೆ ಆಯ್ಕೆಯಾಗುವುದೇ ಕನಸು ಎಂಬಂತಿರುವಾಗ ಆಯ್ಕೆಯಾದ ಮೂರು ಲಕ್ಷ ಮಂದಿಯ ಮಧ್ಯೆ ಬರೇ ತನ್ನ ಪ್ರತಿಭೆಯ ಬಲದಲ್ಲೇ ನಿರಾಯಾಸವಾಗಿ ಟಾಪ್ 15ಗೆ ಸಾಗಿ ಬಂದು ಇದೀಗ ಸೆಮಿಫೈನಲ್ಗೆ ಏರಿ ನಿಂತ ನಿಹಾಲ್ ತಾವ್ರೋ ನಮ್ಮ ರಾಜ್ಯದ ಅದರಲ್ಲೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಪ್ರತಿಭೆ ಎನ್ನುವುದು ಕರಾವಳಿ ಕನ್ನಡಿಗರ ಹೆಮ್ಮೆ. ಅಷ್ಟಕ್ಕೂ ಈ ಸೀಸನ್ನಲ್ಲೇ ಅರ್ಹತೆಯ ಜತೆಗೆ ಟಾಪ್ 6 ಹಂತಕ್ಕೇರಿದ ಮೊದಲ, ಏಕೈಕ ಕನ್ನಡಿಗ ಎನ್ನುವ ಹೆಗ್ಗಳಿಕೆಯೂ ನಿಹಾಲ್ ಅವರದ್ದು.
ಮುಗ್ಧತೆಯ ನಗುಮುಖ, ಅಷ್ಟೇ ಮುಗ್ಧ ಮಗುವಿನ ಮನಸ್ಸು ಆದರೆ ಸಂಗೀತವನ್ನೇ ಉಸಿರಾಗಿರಿಸಿಕೊಂಡಿರುವುದು ನಿಹಾಲ್ ವ್ಯಕ್ತಿತ್ವ. ತನ್ನೊಳಗೊಬ್ಬ ಮಹಾನ್ ಗಾಯಕನಿದ್ದಾನೆ ಎನ್ನುವ ಪರಿವೆಯೇ ಇಲ್ಲದಂತೆ ಕೇಳುಗರನ್ನು
ಮಂತ್ರಮುಗ್ಧರನ್ನಾಗಿಸುವ ನಿಹಾಲ್ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಬೇಡಿಕೆಯ ಸಿಂಗರ್ ಆಗಿ ಹೊರಹೊಮ್ಮಿದ್ದರೂ ನಿಹಾಲ್ ಮಾತ್ರ ಎಂದಿನಂತೆ ಕೂಲ್ ಅಷ್ಟೇ ಅಲ್ಲ ಮತ್ತಷ್ಟು ಮೆಲೋಡಿಯಸ್ ಆಗಿ ಮೂಡಿಬರುತ್ತಿದ್ದಾರೆ.















