ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಎಂಬ ಹಾಡಿನಂತೆ ಯುಗಾದಿ ಹಬ್ಬವೆಂದರೆ ಸಾಕು ಎಲ್ಲೆಡೆ ಸಂತಸ, ಸಂಭ್ರಮ ಮನೆಮಾಡಿರುತ್ತದೆ. ಚೈತ್ರಮಾಸದ ವಸಂತ ಋತು ಶುರುವಾಗುವ ದಿನವಿದು. ಈ ಸಮಯದಲ್ಲಿ ಮರಗಿಡಬಳ್ಳಿಗಳು ಚಿಗುರಿ ಹೂ ಬಿಟ್ಟು ಹಸಿರಿನಿಂದ ಕೂಡಿರುತ್ತದೆ.
ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಇದು ಜೀವನದ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುತ್ತಾರೆ.
ಯುಗಾದಿಯೆಂದರೆ ಹೊಸ ವರ್ಷ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಪುರಾಣದಲ್ಲಿ ಉಲ್ಲೇಖವಿದೆ.
ಶ್ರೀರಾಮನು ರಾವಣನನ್ನು ಸಂಹರಿಸಿ ,ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನವೂ ಕೂಡ ಇದಾಗಿದೆ. ಕೆಲವರು ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಕರೆದರೆ, ಇನ್ನೂ ಕೆಲವರು ಸೂರ್ಯ ಮೇಷರಾಶಿಗೆ ಬಂದಾಗ
ಸೌರಮಾನ ಯುಗಾದಿ ಎಂದು ಕರೆಯುತ್ತಾರೆ. ಒಟ್ಟಾರೆಯಾಗಿ ಈ ಯುಗಾದಿ ಹಬ್ಬ ಹಲವು ಮಹತ್ವ ತುಂಬಿದ ಹಬ್ಬವಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು. ಕರ್ನಾಟಕದಲ್ಲಿ 'ಯುಗಾದಿ', ಮಹಾರಾಷ್ಟ್ರದಲ್ಲಿ 'ಗುಢಿಪಾಡವಾ', ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 'ಹೊಸ ವರ್ಷದ ಹಬ್ಬ'ವೆಂದು, ಉತ್ತರ ಭಾರತದಲ್ಲಿ 'ಬೈಸಾಖಿ' ಎಂದು ಇದು ಆಚರಿಸಲ್ಪಡುತ್ತದೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು














