ಎಸ್ ಎಸ್ ಎಲ್ ಸಿ ರಿಸಲ್ಟ್ : ಬಂಟ್ವಾಳ: ಖಾಸಗಿ ಶಾಲೆಗಳಿಗೆ ತೀವ್ರ ಪೈಪೋಟಿ, 16 ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Coastal Bulletin
ಎಸ್ ಎಸ್ ಎಲ್ ಸಿ ರಿಸಲ್ಟ್ : ಬಂಟ್ವಾಳ: ಖಾಸಗಿ ಶಾಲೆಗಳಿಗೆ ತೀವ್ರ ಪೈಪೋಟಿ, 16 ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಬಂಟ್ವಾಳ: ಈ ಬಾರಿಯ ಎಸ್ ಎಸ್ ಎಲ್  ಸಿ ವಾರ್ಷಿಕ ಪರೀಕ್ಷೆಗೆ ತಾಲೂಕಿನಲ್ಲಿ ಹಾಜರಾದ ಒಟ್ಟು 5,488 ವಿದ್ಯಾರ್ಥಿಗಳ ಪೈಕಿ 5,371 ಮಂದಿ ತೇರ್ಗಡೆಗೊಳ್ಳುವ ಮೂಲಕ ಶೇ. 97.87 ಫಲಿತಾಂಶ ದಾಖಲಿಸಿದೆ. ಅನುದಾನಿತ ಮತ್ತು ಅನುದಾನರಹಿತ ಹಾಗೂ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 96 ಪ್ರೌಢಶಾಲೆಗಳ ಪೈಕಿ 55 ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ. ಈ ನಡುವೆ ಒಟ್ಟು 16 ಸರ್ಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಿಸಿಕೊಂಡು ಗಮನ ಸೆಳೆದಿದೆ.

ಇಲ್ಲಿನ ಪಂಜಿಕಲ್ಲು, ಮಣಿನಾಲ್ಕೂರು, ಗೋಳ್ತಮಜಲು, ಬೆಂಜನಪದವು, ನೈನಾಡು, ಅಜ್ಜಿಬೆಟ್ಟು, ಕೊಡಂಗೆ, ಶಂಭೂರು, ಬಿಳಿಯೂರು, ಪೊಳಲಿ, ಕಾಡುಮಠ, ಸೂರ್ಯ, ಬೋಳಂತಿಮೊಗರು, ಸುರಿಬೈಲು ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಪುದು ಮೌಲಾನ ಆಜಾದ್ ಪ್ರೌಢಶಾಲೆ ಮತ್ತು ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100 ಫಲಿತಾಂಶ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಕೊಯಿಲ, ವಗ್ಗ ಕಾವಳಪಡೂರು, ಸಿದ್ಧಕಟ್ಟೆ, ವಾಮದಪದವು, ಕೊಡ್ಮಾಣ್ ಸರ್ಕಾರಿ ಪ್ರೌಢಶಾಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿ ಅನುತ್ತೀರ್ಣಗೊಳ್ಳುವ ಮೂಲಕ ಶೇ.100 ಫಲಿತಾಂಶದಿಂದ ವಂಚಿತಗೊಂಡಿದೆ.

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಪೂರ್ವಿ ಎ.ಭಾರಧ್ವಜ್ 620 ಅಂಗ ಗಳಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಸರ್ಕಾರಿ ಪ್ರೌಢಶಾಲೆಗಳ ಪೈಕಿ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಹರ್ಷಿತ್ ಪೂಜಾರಿ 619 ಅಂಕ ಮತ್ತು ಮೊಂಟೆಪದವು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ 618 ಅಂಕ ಗಳಿಸಿ ಗಮನ ಸೆಳೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಗಳು ತಿಳಿಸಿದೆ.

ಇಲ್ಲಿನ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 23 ಮಂದಿ ವಿದ್ಯಾರ್ಥಿಗಳ ಪೈಕಿ 23 ಮಂದಿ ತೇರ್ಗಡೆಗೊಂಡಿದ್ದು, 5 ಡಿಸ್ಟಿಂಕ್ಷನ್ ಮತ್ತು 9 ಮಂದಿ ಪ್ರಥಮ

ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಆ ಮೂಲಕ ಸತತ 4ನೇ ಬಾರಿ ಶೇ.100 ಫಲಿತಾಂಶ ದಾಖಲಿಸಿದೆ. ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 44 ಮಂದಿ ವಿದ್ಯಾರ್ಥಿಗಳ ಪೈಕಿ 44 ಮಂದಿ ತೇರ್ಗಡೆಗೊಂಡಿದ್ದು, 13 ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದು, ಸತತ 6ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ.

ಸಿದ್ಧಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 82 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 81 ಮಂದಿ ತೇರ್ಗಡೆಗೊಂಡಿದ್ದಾರೆ. 13 ಮಂದಿ ಡಿಸ್ಟಿಂಕ್ಷನ್, 54 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ 66 ಮಂದಿ ವಿದ್ಯಾರ್ಥಿಗಳ ಪೈಕಿ 65 ಮಂದಿ ತೇರ್ಗಡೆಗೊಂಡಿದ್ದು, 9 ಮಂದಿ ಡಿಸ್ಟಿಂಕ್ಷನ್ ಮತ್ತು 41 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಾಮದಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 74 ಮಂದಿ ವಿದ್ಯಾರ್ಥಿಗಳ ಪೈಕಿ 73 ಮಂದಿ ತೇರ್ಗಡೆಗೊಂಡಿದ್ದು, 15 ಮಂದಿ ಡಿಸ್ಟಿಂಕ್ಷನ್ ಮತ್ತು 39 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 36 ಮಂದಿ ವಿದ್ಯಾರ್ಥಿಗಳ ಪೈಕಿ 35 ಮಂದಿ ತೇರ್ಗಡೆಗೊಂಡಿದ್ದು, 4 ಮಂದಿ ಡಿಸ್ಟಿಂಕ್ಷನ್ ಮತ್ತು 22 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.


Leave a Comment