ತುಳುನಾಡಿನ ಸಾಂಸ್ಕೃತಿಕ ಹೆಗ್ಗುರುತಾಗಿರುವ ದೈವಾರಾಧನೆ ಎಂಬುದು ಊಹೆಗೆಟುಕದಷ್ಟು ಹಂತದ ತಲೆತಲೆಮಾರುಗಳಿಂದ ಸಾಗಿ ಬಂದ ಪದ್ಧತಿ. ಅದು ಈ ಕಾಲದಲ್ಲಿ ನಿಷ್ಪನ್ನಗೊಂಡ ಸೃಷ್ಟಿ ಅಲ್ಲ. ಗತವೊಂದರ ಆರ್ಷೇಯ ಕೊಡುಗೆ. ಒಂದು ಕಾಲದ ಸತ್ಯವು ಇನ್ನೊಂದು ಕಾಲಕ್ಕೆ ಯಾವುದೇ ಒತ್ತಡ ಬಯಸದೆ ತಂತಾನೇ ಸಾಂಗವಾಗಿ ದಾಟಿಬರುತ್ತಿದೆ ಎಂದರೆ ಅದು ಬರಿಯ ಕಾಲಬದ್ಧ ಆಚರಣೆಯಷ್ಟೆ ಎನ್ನಲಾಗದು. ತುಳುವರ ದೈನಂದಿನ ದಿನಗಳಲ್ಲಿ ಹಾಸುಹೊಕ್ಕಾಗಿರುವ ಜೀವನ ಮೌಲ್ಯವೆಂದೇ ಹೇಳಬೇಕಾಗುತ್ತದೆ. ಕಾಲೋಚಿತ ಬದಲಾವಣೆಗಳಾಗಿರಬಹುದು. ಬದಲಾವಣೆಯು ಕ್ರಿಯಾಶೀಲ ಪದ್ಧತಿಯೊಂದರ ಸಾಮಾನ್ಯ ಲಕ್ಷಣ, ಅದು ಜೀವಂತಿಕೆಯ ಸಂಕೇತ.
ದೈವಾರಾಧನೆಯಂತಹ ಪೂರ್ವಿಕರ ಸಾಂಸ್ಕೃತಿಕ ಮೌಲ್ಯವು ವರ್ತಮಾನಕ್ಕೆ ಹಾದುಬರುವ ವೇಳೆಗೆ ಅದನ್ನು ಇದಿರುಗೊಳ್ಳುವ ಮನೋಧರ್ಮವೂ ಇಲ್ಲಿ ಬೇಕಾಗುತ್ತದೆ. ಯುವಜನತೆ ಒಪ್ಪಿಕೊಂಡು ಮುಕ್ತವಾಗಿ ಬರಮಾಡಿಕೊಂಡರೆ ಮಾತ್ರ ಅದು ಈ ಕಾಲದಲ್ಲೂ ಬೇರೂರಿ ರೂಢಿಯೆಂದೆನಿಸಬಲ್ಲದು. ತುಳುನಾಡಿನಾದ್ಯಂತ ಈಗಾಗಲೇ ವ್ಯಾಪಕವಾಗಿ ಆಚರಣೆಯಲ್ಲಿರುವಾಗ ದೈವಾರಾಧನೆಯ ಕುರಿತು ಈ ಬಗೆಯ ಸಂದೇಹವೇಕೆ ? ಎಂಬ ಪ್ರಶ್ನೆ ಸಹಜ. ಆದರೆ ಕಾಲ ನಿಂತ ನೀರಲ್ಲ. ಮುಂದಿನ ಹರಿವಿನಲ್ಲೂ ಇದೊಂದು ಸವಾಲಾಗಿಯೇ ಇರುತ್ತದೆ ಎಂಬುದನ್ನು ಮರೆಯಬಾರದು.
ದೈವಾರಾಧನೆಯ 'ಕಳ'ದಲ್ಲಿ ನಂಬಲಾಗುವಂತೆ ಇದೊಂದು 'ಅನಾದಿಕಾಲದ ಕಟ್ಟ್'. ಶಾಸ್ತ್ರಕೃತಿಗಳ ಲಿಖಿತ ಆಧಾರಗಳಿಲ್ಲದೆ ಅನುಷ್ಠಾನಬದ್ಧ ಮೌಖಿಕ ಪರಂಪರೆಯಲ್ಲೇ ಈ ವರೆಗೂ ಅದು ಮುಂದುವರಿದುಕೊಂಡು ಬಂದಿದೆ ಎಂಬುದೇ ಮಹದಾಶ್ಚರ್ಯ. ಕಣ್ಣೆದುರಿಲ್ಲದ ಅಲೌಕಿಕ ಶಕ್ತಿಯನ್ನು ಆವಾಹಿಸಿಕೊಂಡು ನಡೆಸುವ ಸಂಪ್ರದಾಯ ಇದಾಗಿರುವುದರಿಂದ ಆಧುನಿಕ ಶಿಕ್ಷಣ ಪಡೆದುಕೊಂಡವರ ನಡುವೆ ಹಲವು ಪ್ರಶ್ನೆಗಳೇಳಬಹುದು. ಇವೆಲ್ಲದಕ್ಕೂ ಆರಾಧನಾ ರಂಗವೇ ಉತ್ತರವನ್ನೂ ನೀಡಬೇಕಾಗುತ್ತದೆ. ಇಂದಿನ ಯುವಪೀಳಿಗೆಗೆ ಆಧುನಿಕ ವಿಜ್ಞಾನದ ಗಾಢ ಪರಿಚಯವಿದೆ. ತಂತ್ರಜ್ಞಾನದ ಬಹುಬಗೆಯ ಸಾಧ್ಯತೆಗಳ ಅರಿವಿದೆ. ಆಂಗ್ಲಭಾಷೆಯ ಓದು ಇರುವುದರಿಂದ ಜಾಗತಿಕ ಜ್ಞಾನದ ಪ್ರವೇಶವಿದೆ. ಸತ್ಯ ಯಾವುದೆಂಬುದನ್ನು ಸ್ವನಿರ್ಣಯ ಮಾಡಬಲ್ಲಷ್ಟು ವಿವೇಚನೆಯೂ ಇದೆ. ಹೀಗಾಗಿ ಸವಾಲಿನ ಸಂದರ್ಭಕ್ಕೆ ದೈವಾರಾಧನೆಯ ರಂಗ ಉತ್ತರಿಸಿಕೊಂಡೇ ಬರಬೇಕಾಗಿದೆ.
ಯುವಜನತೆಯ ಸಂಸ್ಕೃತಿ ಪ್ರಿಯತೆಯೇ ದೈವಾರಾಧನೆಯ ಭವಿಷ್ಯಕ್ಕೊಂದು ಭರವಸೆ. ಈ ಕಾಲದ ಆರಾಧನಾ ರಂಗದಲ್ಲಿ ಪಾಲ್ಗೊಳ್ಳುವ ಯುವಜನತೆಯ ಆಸಕ್ತಿಯ ಆಧಾರದಲ್ಲಿ ಮೂರು ವಿಭಾಗಗಳನ್ನು ಗುರುತಿಸಬಹುದು :
೧. ಪ್ರತ್ಯಕ್ಷ ಭಾಗಿಗಳು
೨. ಪರೋಕ್ಷ ಭಾಗಿಗಳು
೩. ಸಂಸ್ಕೃತಿ ವಿಮುಖರು
ಈ ವಿಭಜನೆಯ ಪೈಕಿ ಮೊದಲ ವರ್ಗದಲ್ಲಿ ದೈವಾರಾಧನೆಯ ವಿವಿಧ ಕರ್ತವ್ಯಗಳನ್ನು ನಿಭಾಯಿಸುವವರು ಸೇರುತ್ತಾರೆ. ವಂಶಪಾರಂಪರ್ಯವಾಗಿ ಬಂದ ಹೊಣೆಯನ್ನು ನಿರ್ವಹಿಸುವವರೇ ಇಲ್ಲಿ ಹೆಚ್ಚು. ದೈವದ ಪೂಜಾರಿ, ನೇಮ - ಕೋಲ ಕಟ್ಟುವವರು, ಜೀಟಿಗೆ, ಬೆಳ್ಗೊಡೆ, ಮೊಗ, ಕಡ್ಸಲೆ ಇತ್ಯಾದಿ ಪರಿಕರಗಳನ್ನು ಹಿಡಿಯುವ ಅಧಿಕಾರದವರು, ಆರಾಧನೆಯ ನಾನಾ ಹಂತಗಳ ಕೆಲಸಗಳಿಗೆ ನಿಗದಿಯಾದವರು, ಗಡಿಕಾರರು, ಯಜಮಾನಿಕೆಯವರು ಇತ್ಯಾದಿ. ತಮ್ಮ ಸೋದರ ಮಾವನಿಂದ, ಕೆಲವೊಮ್ಮೆ ತಂದೆಯಿಂದ, ಕುಟುಂಬ ಕರ್ತವ್ಯ ರೂಪದಲ್ಲಿ ಬಂದಿರುವ ಜವಾಬ್ದಾರಿಗಳನ್ನು ನಿರ್ವಹಿಸುವವರು ಇವರು. ನಿರ್ದಿಷ್ಟ ಸಮುದಾಯದ, ಕುಟುಂಬದ ನಿಯೋಜಿತ ಅವಕಾಶ ಎಂಬ ನಂಬಿಕೆಯಿರುವುದರಿಂದಲೂ ಈ ಕೆಲಸಗಳಿಗೆ ಆಸಕ್ತಿಯಿದ್ದರೂ ಇತರರಿಗೆ ಆಸ್ಪದವಿರುವುದಿಲ್ಲ. ತಮಗಿಂತ ಹಿಂದಿನ ದೈವಕರ್ಮಿಗಳು ಈ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿಯೇ ರಂಗದಲ್ಲಿ ಸಕ್ರಿಯರಾಗಿರುವವರಿಗೆ ಇದು ಅಪೇಕ್ಷಿತ ಅವಕಾಶವೇ ಆಗಿರುತ್ತದೆ. ಆದರೆ, ಅಷ್ಟರವರೆಗೆ ರಂಗದಿಂದಲೇ ಹೊರಗಿದ್ದು, ಪೂರ್ವ ಚಾಕಿರಿಗಳ ಬಗ್ಗೆ ಕೇಳಿಯೂ ಗೊತ್ತಿಲ್ಲದ ಯುವಕನನ್ನು ಕುಟುಂಬದ ಹಕ್ಕು ಎಂಬ ಕಾರಣದಿಂದ ನಿಗದಿಗೊಳಿಸುವುದು ನಿರಾಸಕ್ತಿಗೆ, ಶ್ರದ್ಧಾಲೋಪಕ್ಕೆ ದಾರಿಯಾಗುತ್ತದೆ. ಕೆಲವೊಮ್ಮೆ ಕಾರ್ಯ ವಹಿಸಿಕೊಂಡ ನಂತರ ಭಕ್ತಿಯೋ, ಭಯವೋ, ಆಕರ್ಷಣೆಯೋ ಯಾವುದಾದರೊಂದು ಕಾರಣದಿಂದ ಆ ವರೆಗಿನ ನಿರಾಸಕ್ತಿ ಬದಲಾಗಲೂಬಹುದು. ಹೀಗಾಗಬೇಕಾದರೆ ಆ ವ್ಯಕ್ತಿಗೆ ಆರಾಧನಾ ವಲಯದ ಜೊತೆಗೊಂದು ಅನುಸಂಧಾನ ಬೇಕಾಗುತ್ತದೆ.
ಪ್ರತ್ಯಕ್ಷವಾಗಿ ತೊಡಗಿಸಿಕೊಂಡವರಲ್ಲೇ ಇನ್ನೊಂದು ವರ್ಗವು ವಂಶವಾಹಿ ಹಿನ್ನೆಲೆಯಿಲ್ಲದಿದ್ದರೂ ಸ್ವಾಭಿಲಾಷೆಯಿಂದ ರಂಗದಲ್ಲಿ ಸೇರಿಕೊಂಡವರು. ಇವರಲ್ಲಿ ದೈವಕ್ಕೆ ಮಾನಿಚ್ಚಿಲ್ ಪಾತ್ರಿಯಾಗುವ ಮುಕ್ಕಾಲ್ದಿ, ಒತ್ತು ಪೂಜಾರಿ, ಪಾರಿ ಹೇಳುವ ಮಧ್ಯಸ್ಥ, ಹಿಮ್ಮೇಳದ ಸೇರಿಗಾರ, ಆಡಳಿತ ಮಂಡಳಿಯ ಸದಸ್ಯ ಮೊದಲಾದವರೆಲ್ಲಾ ಸೇರುತ್ತಾರೆ. ಈ ಕೆಲಸಗಳಲ್ಲೂ ವಿರಳವಾಗಿ ಪರಂಪರೆಯ ನಿಗದೀಕರಣ ಇವೆಯಾದರೂ ಸ್ವತಂತ್ರವಾಗಿ ಸೇರಿಕೊಳ್ಳಬಹುದಾದ ಅವಕಾಶಗಳೇ ಹೆಚ್ಚು. ಕೆಲವೊಮ್ಮೆ ಮುಕ್ಕಾಲ್ದಿ, ಪೂಜಾರಿಯಂತಹ ಕಾರ್ಯ ನಿರ್ವಹಿಸುವವರು ಆಧುನಿಕ ಆಕರ್ಷಣೆ ಹಾಗೂ ಸೌಲಭ್ಯಗಳನ್ನು ತ್ಯಾಗ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಮಧ್ಯಸ್ಥನಂತಹ ಮುಖ್ಯವ್ಯಕ್ತಿಗೆ ಅನುಭವಜನ್ಯ ವಿಚಾರ ಪಾಂಡಿತ್ಯ, ಭಾಷಾ ನಿರರ್ಗಳತೆ, ಕಾರ್ಯನೈಪುಣ್ಯತೆ, ನ್ಯಾಯ ತೀರ್ಮಾನದಂತಹ ಸಂದರ್ಭಕ್ಕೆ ಅವಶ್ಯವಾದ ತಕ್ಷಣದ ಸಮಯೋಚಿತತೆ ಎಲ್ಲವೂ ಬೇಕೇ ಬೇಕಾಗುತ್ತದೆ. ಇಂತಹ ಪರಿಶ್ರಮ ಅಪೇಕ್ಷಿಸುವ ಸೇವೆಗಳಲ್ಲೂ ಇಂದಿನ ನಾಗಾಲೋಟದ ಯುಗದ ಆಕರ್ಷಣೆ ಹಾಗೂ ಸೌಲಭ್ಯಗಳ ನಡುವೆಯೂ ತರುಣರು ತೊಡಗಿಸಿಕೊಂಡಿದ್ದಾರೆ ಎಂಬುದು ಹರ್ಷದ ಸಂಗತಿ.
ಎರಡನೆಯ ವಿಭಾಗ ದೈವಾರಾಧನಾ ರಂಗದ ಕುರಿತು ಬಹಳಷ್ಟು ಉಮೇದಿದ್ದರೂ ನೇರವಾಗಿ ಅದರಲ್ಲಿ ತೊಡಗಿಸಿಕೊಳ್ಳದವರು. ಇದಕ್ಕೆ ಆಸಕ್ತಿಯಿದ್ದೂ ಅವಕಾಶಗಳಿಲ್ಲದಿರುವುದೂ ಕಾರಣವಾಗಿರಬಹುದು ಅಥವಾ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ತಾವಾಗಿಯೇ ಅಷ್ಟಕ್ಕೇ ಸೀಮಿತಗೊಳಿಸಿರುವುದೂ ಕಾರಣವಾಗಿರಬಹುದು. ಇವರಲ್ಲಿ ಕುತೂಹಲದ ಬಿಡುಗಣ್ಣುಗಳುಳ್ಳ ವೀಕ್ಷಕನೂ ಇರಬಹುದು, ಆರಾಧನೆಯ ಕುರಿತು ವಕ್ತೃಗಳಿಂದ ಪುಸ್ತಕಗಳಿಂದ ತಿಳಿದುಕೊಂಡಿರುವವರು, ಇದೇ ವಿಷಯದ ಕುರಿತು ಅಧ್ಯಯನ ನಡೆಸಿ ಸಂಶೋಧನೆ ನಡೆಸಿದವರು, ವಿವಿಧೆಡೆ ಉಪನ್ಯಾಸಗಳನ್ನು ನೀಡುವುದರ ಮೂಲಕ ಆಧುನಿಕರಲ್ಲಿ ಜಾಗೃತಿ ಮೂಡಿಸುವವರು, ದೈವಕಥಾ ಪ್ರಸರಣಕ್ಕೆ ಪೂರಕವಾಗಿ ಪುಸ್ತಕ, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ದಾಖಲೀಕರಣ, ಪರಿಚಯ ಪ್ರಾತ್ಯಕ್ಷಿಕೆ ಮುಂತಾದುವುಗಳನ್ನು ರಚಿಸುವವರೂ ಇರಬಹುದು. ಪ್ರತ್ಯಕ್ಷಭಾಗಿಗಳಷ್ಟೆ ಅಥವಾ ಕೆಲವೊಮ್ಮೆ
ಅವರಿಗಿಂತಲೂ ಮಿಗಿಲಾದ ಅಭಿರುಚಿ - ಪ್ರಾಜ್ಞತೆ ಇವರಿಗಿರುವುದೂ ಇದೆ. ದೈವಾರಾಧನೆಯ ಕುರಿತು ವಿವಿಧ ಮಾಧ್ಯಮಗಳಲ್ಲಿ ನಡೆಯುವ ಸಂವಾದ, ಸಮಾರಂಭಗಳಲ್ಲಿ ಇಂತಹ ಯುವಬಳಗವೇ ಹೆಚ್ಚಿರುತ್ತದೆ. ದೈವಮಹಿಮೆಗಳ ಅಧ್ಯಯನ ಮತ್ತು ಪ್ರಸಾರ, ಸಂಸ್ಕೃತಿ ವಿಚಾರಗಳನ್ನು ಜತನದಿಂದ ಕಾಪಿಡುವ ನೆಲೆಗಳಲ್ಲಿ ಇಂತವರ ಆಸಕ್ತಿ ಮುಖ್ಯವಾಗುತ್ತದೆ. ಪ್ರತ್ಯಕ್ಷ ಭಾಗಿಗಳಿಗೆ ಹೆಚ್ಚಿನ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಯ ಭಾವುಕ ಮನೋಧರ್ಮ ಮಾತ್ರವಿರುತ್ತದೆ. ಆದರೆ ಪರೋಕ್ಷಭಾಗಿಗಳಿಗೆ ಪ್ರಸ್ತುತ - ಅಪ್ರಸ್ತುತಗಳೆರಡರ ಕುರಿತು ವಿಶ್ಲೇಷಣೆಯ ಮನವಿರುತ್ತದೆ. ವಿಮರ್ಶೆಯ ಕಣ್ಣಿರುತ್ತದೆ. ತರುಣರಷ್ಟೇ ಅಲ್ಲ. ಈ ಬಳಗಕ್ಕೆ ಸೇರುವ ಯುವತಿಯರೂ ಸಾಕಷ್ಟಿದ್ದಾರೆ.
ಮೂರನೆಯ ಗುಂಪು ಈ ಎರಡೂ ವರ್ಗಗಳಿಂದ ಬಹಳ ದೂರ. ಜಗತ್ತಿನ ಎಲ್ಲಾ ವಿಷಯಗಳಲ್ಲೂ ಇಂತಹದೊಂದು ವೃಂದ ಇದ್ದೇ ಇರುತ್ತದೆ. ಇವರಲ್ಲೂ ಎರಡು ಬಗೆಗಳೆನ್ನಬಹುದು. ಒಂದು - ಆರಾಧನಾ ರಂಗಕ್ಕೆ ತೀರಾ ವಿಮುಖರಾಗಿರುವವರು. ಕೆಲವು ವಿಚಾರವಾದಿಗಳು, ನಿರೀಶ್ವರವಾದಿಗಳು, ಸಂಪ್ರದಾಯ ವಿರೋಧಿಗಳು, ಪ್ರಗತಿಪರರೆನಿಸಿಕೊಂಡವರು ಇತ್ಯಾದಿ. ಇವರಿಗೆ ದೈವಾರಾಧನೆಯಂತಹ ಯಾವುದೇ ಸಂಸ್ಕೃತಿ ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿರುತ್ತವೆ. ಭಾವನಾತ್ಮಕತೆಗಿಂತಲೂ ಮುಖ್ಯವಾಗಿ ವಾಸ್ತವತೆಯತ್ತ ನೋಟವಿರುತ್ತದೆ. ಶ್ರೇಣೀಕೃತ ಸಮಾಜದ ಹಿನ್ನೆಲೆಯಲ್ಲೇ ಪ್ರತಿ ಆಚರಣೆಯನ್ನು ಅಳೆಯುತ್ತಾರೆ. ಸತ್ಯಾಸತ್ಯತೆಗಳ ಬಗೆಗೆ ಬಹುಸಿದ್ಧಾಂತಗಳ ಆಧಾರದಲ್ಲಿ ವಿಡಂಬನೆ ಇದ್ದೇ ಇರುತ್ತದೆ. ಇವರಲ್ಲೇ ಕೆಲವರು ಸಾಮಾಜಿಕವಾಗಿ ಹೀಗೆ ಕಂಡರೂ ವೈಯಕ್ತಿಕ ಬದುಕಿನಲ್ಲಿ ದೈವವಿಶ್ವಾಸ, ಹರಕೆ, ಪೂಜೆ ಎಂದೆಲ್ಲಾ ತೀರಾ ಖಾಸಗಿಯಾಗಿ ಸಲ್ಲಿಸುವವರಿದ್ದಾರೆ.
ಇನ್ನೊಂದು ಗುಂಪು ಹಾಗಲ್ಲ. ಇವರು ದೈವವಿರೋಧಿಗಳೋ, ವಿಡಂಬನಕಾರರೋ ಅಲ್ಲ. ಬದಲಾಗಿ ಬರಿಯ ಆಧುನಿಕತೆಯಲ್ಲೇ ತಲ್ಲೀನರಾಗಿದ್ದು , ಸಂಪ್ರದಾಯದತ್ತ ಕಿಂಚಿತ್ ಆಸಕ್ತಿ - ಗಮನವಿಲ್ಲದವರು. ಆದರೆ ಇವರು ಆ ಬಗ್ಗೆ ಯಾವ ವಿರೋಧವನ್ನೂ ತೋರದೆ, ತಮ್ಮ ಪಾಡಿಗೆ ತಾವಿರುವವರು. ಈ ಬಗೆಯ ಯುವಕರಲ್ಲಿ ಬಾಹ್ಯ ಪ್ರಪಂಚದ ಬಗ್ಗೆ ಅತ್ಯಾಕರ್ಷಣೆಯಿರುತ್ತದೆ. ಕಂಡದ್ದು ಮಾತ್ರ ಸತ್ಯವೆಂದುಕೊಳ್ಳುವವರು. ಇತರರ ಒತ್ತಾಯ, ಪ್ರೇರಣೆಯಿಂದ ದೈವಾರಾಧನಾ ರಂಗದತ್ತ ಒಂದೊಮ್ಮೆ ಸೆಳೆಯಲ್ಪಟ್ಟರೂ ಬಹಳ ಸಮಯ ಅಲ್ಲಿ ನಿಲ್ಲುವ ಒಲವಿಲ್ಲದೆ ಹೊರನಡೆಯುವವರು. ಇವರೂ ಕೆಲವೊಮ್ಮೆ ತಮ್ಮ ಅನುಕೂಲ ಆಸಕ್ತಿಗಳಿಗಾಗಿ ಆರಾಧನಾ ರಂಗವನ್ನು ಅವಲಂಬಿಸುವುದಿದೆ. ಉದಾಹರಣೆಗೆ ಯೂಟ್ಯೂಬ್‌ನಲ್ಲಿರುವ ತಮ್ಮ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಬಹುತೇಕರು ಇಷ್ಟ ಪಡುವ ದೈವಾರಾಧನೆಯ ದೃಶ್ಯ ತುಣುಕುಗಳನ್ನು ಹಾಕುವವರಿದ್ದಾರೆ. ಇಂತಹ ದೃಶ್ಯಾವಳಿಯ ವೀಕ್ಷಣೆಯ ಸಂಖ್ಯೆಯಲ್ಲಿ ಭಕ್ತಿ ಪ್ರಮಾಣವನ್ನು ಅಳೆಯುವವರೂ ಇದ್ದಾರೆ. ಕೇವಲ ಕಾರ್ಯಸಾಧನೆ ಮಾತ್ರ ಇಲ್ಲಿನ ಉದ್ದೇಶವಾಗಿರುತ್ತದೆ.
ಒಟ್ಟಿನಲ್ಲಿ, ತುಳುನಾಡಿನ ದೈವಾರಾಧನಾ ರಂಗದಲ್ಲಿ ಯುವಜನಾಂಗ ಸದಾ ಸಕ್ರಿಯ. ಹಾಗಾಗಿ, ಮುಂದೆ ಹೇಗೋ ಏನೋ ಎಂಬ ಆತಂಕಕ್ಕೆಡೆಯಿಲ್ಲ. ಹಿಂದಿನ ಸಂಪ್ರದಾಯಗಳ ಅಚ್ಚುಕಟ್ಟುತನವನ್ನು ನೆನೆನೆನೆದು ಕೊರಗುವ ಸಿನಿಕತನ ಬೇಕಿಲ್ಲ. ಯುವಜನಾಂಗ ಈ ಬಗ್ಗೆ ನಿರ್ಲಕ್ಷ್ಯ ಇಟ್ಟುಕೊಂಡಿದೆಯೇನೋ ಎಂಬ ನಿರಾಸೆಯೂ ಅವಶ್ಯವಿಲ್ಲ. ಹಾಗೆ ನೋಡಿದರೆ ಮೇಲಿನ ಮೂರು ಗುಂಪುಗಳ ಮಧ್ಯೆ ಅಂಕಿಅಂಶವನ್ನು ಗಣಿಸಿದರೆ ಮೊದಲೆರಡು ವಿಭಾಗಳಿಗೇ ಪ್ರಮಾಣ ಹೆಚ್ಚಿದೆ ಎಂಬುದು ಗಮನಾರ್ಹ ಸಂಗತಿ. ಮೂರು ತಲೆಮಾರುಗಳಷ್ಟು ಹಿಂದಿನ ಯುವಜನತೆ ಹಿರಿಯರಿಂದ ದಾಟಿ ಬಂದದ್ದನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಬಂದಿತ್ತೇ ವಿನಾ ಅವರಲ್ಲಿ ತಾವು ನಡೆಸುವ ವಿಧಿನಿಷೇಧಗಳ ಕುರಿತು ಪೂರಕ ಹುಡುಕಾಟವಾಗಲೀ, ಹೊಸ ಓದಿನ ಅಧ್ಯಯನಶೀಲತೆಯಾಗಲೀ ಇರಲಿಲ್ಲ. ಪರಂಪರೆಯ ಜ್ಞಾನ, ಅನುಭವದ ಪಾಠ ಮಾತ್ರವೇ ಅವರ ಅರ್ಹತೆಯಾಗಿತ್ತು.
ಆದರೆ ವೈಜ್ಞಾನಿಕ - ತಾಂತ್ರಿಕ ನಾವೀನ್ಯತೆಗೆ ಮುಖಮಾಡಿರುವ ಇಂದಿನ ಯುವಜನಾಂಗ ಭೂತಕಾಲದ ಗತ ಅರಿವಿಗೆ ವಾಸ್ತವದಲ್ಲಿ ಅರ್ಥ ಹುಡುಕುತ್ತಿದೆ. ದೈವಾರಾಧನೆಯ ವಿವಿಧ ಆಚರಣೆಗಳ ಮೂಲ ಸ್ವರೂಪ, ರೂಪಾಂತರ, ವೈಜ್ಞಾನಿಕ ಆಧಾರ, ಸಂರಕ್ಷಣೆಗಳ ಬಗೆಗೆ ಶೋಧದೃಷ್ಟಿ ಇಟ್ಟುಕೊಂಡಿದೆ. ಸಮರ್ಥನೆಗೆ ಸಕಾರಣಗಳನ್ನು ಸಂರಚಿಸುತ್ತಿದೆ. ನಾಲಗೆಯ ವಾಙ್ಮಯವನ್ನು ವಿದ್ಯುನ್ಮಾನ ದಾಖಲೀಕರಣಗೊಳಿಸಿ ಭವಿತವ್ಯಕ್ಕಾಗಿ ಸುಭದ್ರಗೊಳಿಸುತ್ತಿವೆ. ಇಷ್ಟು ಮಾತ್ರವಲ್ಲ. ಒಂದು ವೇಳೆ ದೈವಾರಾಧನೆಯ ರಂಗದಲ್ಲಿ ಜನಾಂಗೀಯ ಅಥವಾ ಸ್ತ್ರೀ ತಾರತಮ್ಯ - ಶೋಷಣೆ, ಅನಾವಶ್ಯಕ ದೇಹದಂಡನಾ ಹಿಂಸಾಕರ್ಮ - ರಕ್ತಪಾತ, ಉಳ್ಳವರ ಪರ ಏಕಪಕ್ಷೀಯ ನ್ಯಾಯ, ಉದ್ದೇಶಪೂರ್ವಕ ನಿರ್ಲಕ್ಷ್ಯ ಇಂತಹ ಸನ್ನಿವೇಶಗಳು ಎದುರಾದಾಗ ಅಳುಕಿಲ್ಲದೆ ನಿರ್ಭಿಡೆಯಿಂದ ಪ್ರಶ್ನಿಸುವ ದಿಟ್ಟತನವೂ ಇಂದಿನ ಯುವಸಮೂಹದಲ್ಲಿದೆ. ಇದು ಅಗತ್ಯವಾಗಿ ಆಗಲೇಬೇಕಾದದ್ದು. ಬರಮಾಡಿಕೊಳ್ಳಬೇಕಾದ ಸುಲಕ್ಷಣ. ಏಕೆಂದರೆ ಈ ಜಾಗತೀಕರಣದ ಯುಗದಲ್ಲಿ ದೈವಾರಾಧನೆಯಂತಹ ಸಂಪ್ರದಾಯದ ಪ್ರಸ್ತುತವಾದರೂ ಏನು ಎಂದು ಯಾರಾದರೊಬ್ಬರು ಪ್ರಶ್ನೆಯನ್ನೆತ್ತಿದರೆ ಮುಂದೊಡ್ಡಿ ತೋರಿಸಲು ಭೌತಿಕವಸ್ತುಗಳೇನೂ ನಮ್ಮಲ್ಲಿಲ್ಲ. ಬರಿಯ ಸಕಾರಾತ್ಮಕ ಶಕ್ತಿಯಿಂದ ಹಾಗಾಗುತ್ತದೆ ಹೀಗಾಗುತ್ತದೆ ಎಂಬ ದೇಸೀವಿಜ್ಞಾನದ ಭಾವಗ್ರಸ್ತ ಪ್ರತಿಕ್ರಿಯೆಯು ನವ್ಯವಿಜ್ಞಾನಶೀಲರೆದುರು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸೋಲುತ್ತದೆ. ಆಗ ನಾವು ಸಮರ್ಥನೀಯ ಉತ್ತರಕ್ಕಾಗಿ ಹೊಸ ತಿಳಿಹು - ಹೊಳಹಿರುವ ಈ ಯುವಜನತೆಯ ಮುಖವನ್ನು ನೋಡಬೇಕೇ ಹೊರತು, ದಾಟಿಹೋದ ತಲೆಮಾರುಗಳನ್ನಲ್ಲ.
✍️ ಡಾ. ಅರುಣ್ ಉಳ್ಳಾಲ್














