ಸಜಿಪಮುನ್ನೂರು: ಗೃಹಪ್ರವೇಶದ ಔತಣಕೂಟ ದಿನದಂದೇ ಯುವ ವಿದ್ವಾಂಸ ಮೃತ್ಯು.

Coastal Bulletin
ಸಜಿಪಮುನ್ನೂರು: ಗೃಹಪ್ರವೇಶದ ಔತಣಕೂಟ ದಿನದಂದೇ ಯುವ ವಿದ್ವಾಂಸ ಮೃತ್ಯು.

ಬಂಟ್ವಾಳ : ತನ್ನ ನೂತನ ಮನೆಯ ಗೃಹಪ್ರವೇಶದ ಔತಣಕೂಟದ ದಿನದಂದೇ ಯುವ ಮುಸ್ಲಿಂ ವಿದ್ವಾಂಸರೋರ್ವರು ಇಹಲೋಕ ತ್ಯಜಿಸಿದ ಘಟನೆಯೊಂದು ಸಜಿಪಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳ ಎಂಬಲ್ಲಿ ಸೋಮವಾರ ಬೆಳಗ್ಗಿನ ಜಾವ ಸಂಭವಿಸಿದೆ.

ಮೂಲತಃ ಸಜಿಪನಡು ನಿವಾಸಿ ಪುತ್ತನಾಕ ಅವರ ಪುತ್ರರಾದ ಅಮೀ‌ರ್ ಅರ್ಶದಿ (36) ಎಂಬವರೇ ಹಠಾತ್ ಹೃದಯಾಘಾಕ್ಕೊಳಗಾಗಿ ನಿಧನರಾದ ಯುವ ವಿದ್ವಾಂಸ.

ಮರ್ಹೂಂ ಶೈಖುನಾ ಮಿತ್ತಬೈಲು ಉಸ್ತಾದರ ಶಿಷ್ಯರಾಗಿದ್ದ ಇವರು ತಾಳಿಪಡು ಮಸ್ಟಿದುಲ್ ಹುದಾ ಮಸೀದಿಯಲ್ಲಿ ಕಳೆದ ಐದು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದು, ಜಮಾಅತ್ ವ್ಯಾಪ್ತಿಯಲ್ಲಿ ಹಲವು ಗಣನೀಯ ಬದಲಾವಣೆ ಹಾಗೂ ಯುವಸಮೂಹದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯ ನಡೆಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅತ್ಯುತ್ತಮ ವಾಗ್ನಿಯೂ ಆಗಿದ್ದ ಇವರು ಈ ಹಿಂದೆ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಸುಮಾರು ಮೂರು ವರ್ಷಗಳ ಕಾಲ ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಇವರಿಗೆ ಇತ್ತೀಚೆಗಷ್ಟೆ ಕಿಡ್ನಿ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಮಧ್ಯ ರಾತ್ರಿ ಹಠಾತ್ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಬಿ ಸಿ ರೋಡು ಪರ್ಲಿಯಾದ ಖಾಸಗಿ ಆಸ್ಪತ್ರೆಗೆ

ಸಾಗಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇವರು ಇತ್ತೀಚೆಗಷ್ಟೆ ಸಜಿಪಮುನ್ನೂರು ಗ್ರಾಮದ ಆಲಂಪಾಡಿ-ಕೊಪ್ಪಳ ಎಂಬಲ್ಲಿ ನೂತನ ಮನೆ ನಿರ್ಮಿಸಿ ಕೆಲಸ ಪೂರ್ಣಗೊಂಡಿದ್ದು, ಎಪ್ರಿಲ್ 17 ರಂದು ಔಪಚಾರಿಕ ಗೃಹಪ್ರವೇಶ ಪ್ರಕ್ರಿಯೆ ನಡೆಸಿದ್ದರು ಎನ್ನಲಾಗಿದ್ದು, ಎಪ್ರಿಲ್ 27 ರ ಸೋಮವಾರ (ಇಂದು) ಮಧ್ಯಾಹ್ನ ಬಂಧು-ಮಿತ್ರರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕಾಗಿ ನಿನ್ನೆ ರಾತ್ರಿವರೆಗೂ ಬಂಧು-ಮಿತ್ರರಿಗೆ ಕರೆ ಮಾಡಿ ಆಹ್ವಾನಿಸಿದ್ದರು ಎಂದು ಆಹ್ವಾನ ಕರೆ ಸ್ವೀಕರಿಸಿದ ಬಂಧು-ಮಿತ್ರರು ಅವರ ಹಠಾತ್, ಅಕಾಲಿಕ ನಿಧನಕ್ಕೆ ತೀವ್ರ ಆಘಾತ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ. ನೂತನ ಗೃಹಪ್ರವೇಶ ಔತಣಕೂಟದ ಸಂಭ್ರಮ ಅನುಭವಿಸಬೇಕಾದ ಮನೆಯಲ್ಲಿ ಹಾಗೂ ಊರಿನಲ್ಲಿ ಇದೀಗ ದುಃಖದ ವಾತಾವರಣ ಮಡುಗಟ್ಟಿದೆ ಎಂದು ತಿಳಿದು ಬಂದಿದೆ.

ಮೃತ ಅರ್ಶದಿ ಅವರು, ತಂದೆ-ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು-ಮಿತ್ರ, ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Leave a Comment