ಒಂದು ಹೆಣ್ಣು ಮಗು ತನ್ನ ಜೀವನದುದ್ದಕ್ಕೂ ಅಮ್ಮನಾಗಿ, ಸೋದರಿಯಾಗಿ , ಮಡದಿಯಾಗಿ , ಪುತ್ರಿಯಾಗಿ , ಸ್ನೇಹಿತೆಯಾಗಿ ಹೀಗೆ ಪ್ರತಿಯೊಬ್ಬರ ಬದುಕಿನಲ್ಲೂ ಜೊತೆಯಾಗಿರುತ್ತಾಳೆ .ಆಕೆಯೆಂದರೆ ಒಂದು ಮಹಾಶಕ್ತಿ,ತ್ಯಾಗಮಯಿ,ಕರುಣಾಮಯಿ. ಮತ್ತೊಂದು ಜೀವಕ್ಕೆ ಜನ್ಮ ನೀಡಿ , ಪುನರ್ಜನ್ಮವನ್ನು ಪಡೆಯುವವಳು ಈಕೆ. ಹೆಣ್ಣು ಇಲ್ಲದ ಈ ಜಗತ್ತನ್ನು ಊಹಿಸುವುದಕ್ಕೇ ಸಾಧ್ಯವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಈಕೆಯ ಕೊಡುಗೆ ಅಪಾರ.
ಪ್ರತಿದಿನ ಬಿಡುವಿಲ್ಲದೆ ಮನೆಯ ಜವಾಬ್ದಾರಿ ಹೊತ್ತುಕೊಂಡು ಕುಟುಂಬದ ಏಳಿಗೆಗಾಗಿ ವಹಿಸುವ ಶ್ರಮ ಒಂದು ಕಡೆಯಾದರೆ, ಬದುಕಿಗೊಂದು ಶಕ್ತಿ, ಧೈರ್ಯ, ಚೈತನ್ಯ, ಬಲ, ಸ್ಫೂರ್ತಿ ನೀಡುವ ಕೆಲಸ ಇನ್ನೊಂದು ಕಡೆ. ಈ ಎಲ್ಲ ವಿಷಯಗಳಿಗೆ ಧನ್ಯವಾದ ಅರ್ಪಿಸಲು ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಿಳಾ ದಿನಾಚರಣೆಯ ಇತಿಹಾಸವನ್ನು ಒಮ್ಮೆ ನೋಡುವುದಾದರೆ, 1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು
ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಒತ್ತಾಯಿಸಿದ್ದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ 1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು. ಮುಂದೆ ಪ್ರತಿವರ್ಷ ಮಾರ್ಚ್ 8 ರಂದು ಮಹಿಳಾ ದಿನವಾಗಿ ಹೊಸ ಹೊಸ ಸಂದೇಶದ ಜೊತೆಗೆ ಆಚರಿಸಲಾಗುತ್ತಿದೆ.
ಈ ವರ್ಷ 'ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ' ಎಂಬ ಥೀಮ್‌ನೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಕೋಸ್ಟಲ್ ಬುಲೆಟಿನ್ ತಂಡದಿಂದ ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.














