ಕಷ್ಟದ ಹಾದಿ ಸವೆಸಿದವರಿಗಷ್ಟೇ ಮತ್ತೊಬ್ಬರ ಕಷ್ಟ ಅರಿವಾಗುತ್ತದೆ. ಮತ್ತೊಬ್ಬರು ಮಾಡಿದ ಚಿಕ್ಕ ಉಪಕಾರವೂ ನೆನಪಿನಲ್ಲಿ ಉಳಿಯುತ್ತದೆ.ಇದಕ್ಕೆ ವೆಯ್ಟ್ ಲಿಫ್ಟರ್ ಮೀರಾ ಬಾಯಿ ಚಾನು ಉದಾಹರಣೆಯಾಗಿ ನಿಂತಿದ್ದಾರೆ. ಒಲಿಂಪಿಕ್ ಬೆಳ್ಳಿ ಗೆದ್ದು ಬಂದಾಕೆ ಸನ್ಮಾನ ಸ್ವೀಕರಿಸುತ್ತಾ ಸಾಗಬಹುದಿತ್ತು.ಸುತ್ತಮುತ್ತ ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಓಡಾಡಬಹುದಿತ್ತು. ಆದರೆ, ಮೀರಾ ಬಾಯಿ ಚಾನು, ಗೆಲುವಿನ ಹಿಂದೆ ನೆರವಾದ ಟ್ರಕ್ ಡ್ರೈವರ್ಸ್ ಗೆ ಸನ್ಮಾನಿಸಿದ್ದಾರೆ.
ಅಭ್ಯಾಸದ ವೇಳೆ ಟ್ರಕ್ ಪ್ರಯಾಣಿಸಿ ಸಿಕ್ಕ ಸಿಕ್ಕ ಟ್ರಕ್ ಏರಿ ಸಾಗುತ್ತಿದ್ದ ಚಾನು!
ಮಣಿಪುರದ ಮಾಂಗ್ಕೊಕ್ ಕಾಕ್ಚಿಂಗ್ ಎಂಬ ಹಳ್ಳಿಯವರಾದ ಈ ಮೀರಾಗೆ ಒಂದು ಗುರಿಯಿತ್ತು.ಅದರಲ್ಲೂ ತಾನೊಬ್ಬಳು ಗುರಿಗಾರ್ತಿಯಾಗಬೇಕೆಂಬ ಮಹದಾಸೆ ಆಕೆಗಿತ್ತು. ಮನೆಯಲ್ಲಿ ಆರ್ಥಿಕ ಸಂಕಷ್ಟ ಇತ್ತಾದ್ರೂ, ಅಪ್ಪ ಅಮ್ಮನ ಪ್ರೋತ್ಸಾಹ ಮಗಳಿಗಿತ್ತು. ಇದೇ ಹುಮ್ಮಸ್ಸಿನಲ್ಲಿ ಹನ್ನೆರಡನೇ ವಯಸ್ಸಿನಲ್ಲಿ ಇಂಪಾಲದ
ಕುಮನ್ ಲಂಪಕ್ ಸ್ಟೇಡಿಯಂನಲ್ಲಿ ಅಭ್ಯಾಸಕ್ಕೆ ತೆರಳುತ್ತಿದ್ದರು.ತನ್ನ ಊರಿನ ಬೆಟ್ಟಗುಡ್ಡ,ಇಳಿಜಾರಿನಲ್ಲಿ ಕಟ್ಟಿಗೆ ಹೊತ್ತು ಸಾಗುತ್ತಿದ್ದ ಈ ಹಳ್ಳಿ ಹುಡುಗಿ ವೆಯ್ಟ್ ಲಿಫ್ಟಿಂಗ್ ಅಭ್ಯಾಸಕ್ಕಾಗಿ 20 ರಿಂದ 30 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು.ಹಳ್ಳಿಯಿಂದ ಸಾಗುವಾಗ ಚಾನು,ಮುಖ್ಯರಸ್ತೆಗೆ ಬಂದು ಟ್ರಕ್ ಗೆ ಕೈ ಅಡ್ಡ ಹಿಡಿಯುತ್ತಿದ್ದರು , ನಿಲ್ಲಿಸಿದ ಟ್ರಕ್ ಏರಿ ಅಭ್ಯಾಸಕ್ಕೆ ಸಾಗುತ್ತಿದ್ರು.















