ಬಂಟ್ವಾಳ:ಅಪರೂಪದ ವಿದ್ಯಾಮಾನಕ್ಕೆ ಬಿ.ಸಿ.ರೋಡಿನ ಹಿರಿಯ ಸಿವಿಲ್ ನ್ಯಾಯಾಲಯ ಸಾಕ್ಷಿಯಾಯಿತು. ಪರಸ್ಪರ ವೈಮನಸ್ಸಿನಿಂದ ನಮಗೆ ಜಂಟಿ ಜೀವನ ಬೇಡ, ನಾವು ಒಂಟಿಯಾಗಿಯೇ ಇರುತ್ತೇವೆ ನಮಗೆ ವಿಚ್ಚೇಧನ ಕೊಡಿ ಎಂದು ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಚೇದನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದ ಜೋಡಿಯೊಂದು ನ್ಯಾಯಾಧೀಶರು ನಡೆಸಿದ ಸಂಧಾನ ಪ್ರಕ್ರಿಯೆಯಲ್ಲಿ ಮತ್ತೆ ಒಂದಾದ ಘಟನೆ ನಡೆದಿದೆ.
ರಾಷ್ಟ್ರೀಯ ಲೋಕಾ ಅದಾಲತ್‌ನಲ್ಲಿ ನ್ಯಾಯಾಧೀಶರು ನಡೆಸಿದ ಸಂಧಾನ ಪ್ರಕ್ರಿಯೆಯಲ್ಲಿ ಮತ್ತೆ ಒಂದಾದ ಜೋಡಿಗಳು ನ್ಯಾಯಾಧೀಶರು ಹಾಗೂ ವಕೀಲರ ಸಮ್ಮುಖದಲ್ಲಿ ಮತ್ತೆ ಹಾರ ಬದಲಾಯಿಸಿಕೊಂಡು ನಾವು ಪತಿ- ಪತ್ನಿಯರಾಗಿ ಬದುಕುತ್ತೇವೆ ಎಂದು ಒಪ್ಪಂದ ಮಾಡಿಕೊಂಡು ದಾಂಪತ್ಯದ ವಿರಸಕ್ಕೆ ತೆರೆ ಎಳೆದರು.
ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಚೇಧನ ಕೋರಿ ೨೦೨೫ರಲ್ಲಿ ಜೋಡಿಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವ್ಯಾಜ್ಯ ಹಲವು ವರ್ಷಗಳಿಂದ ನಡೆಯುತ್ತಿತ್ತು. ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ. ಪಿ ಅವರು ಸಂಧಾನ ಪ್ರಕ್ರಿಯೆ ನಡೆಸಿ ದಂಪತಿಗಳು ಮತ್ತೆ
ದಾಂಪತ್ಯ ಜೀವನ ಮುಂದುವರೆಸಲು ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಸುದೀರ್ಘ ಕಾಲದಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಗಂಡಹೆಂಡತಿಯ ನಡುವಿನ ಗಂಭೀರ ಕೌಟುಂಬಿಕ -ವಿವಾದವು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿತು. ಪ್ರಕರಣ ಇತ್ಯರ್ಥಗೊಂಡ ಹಿನ್ನಲೆಯಲ್ಲಿ ದಂಪತಿಗಳ ಮೊಗದಲ್ಲಿ ಹರ್ಷ ಮೂಡಿದರೆ, ನ್ಯಾಯ ಸಂಧಾನ ನಡೆಸಿದ ನ್ಯಾಯಧೀಶರು ಹಾಗೂ ವಕೀಲರಿಗೆ ಸಾರ್ಥಕ್ಯದ ಭಾವ ಮೂಡಿತು.
ಈ ಸಂದರ್ಭ ರಾಜಿ ಸಂಧಾನ ಯಶಸ್ವಿಯಾಗಲು ಸಹಕರಿಸಿದ ದಂಪತಿಗಳ ವಕೀಲರಾದ ಪಿ. ಭಾನುಶಂಕರ್ ಮತ್ತು ಪಿ. ಜಯರಾಮ ರೈಯವರು, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕೋಸ್ತಾ ಎಂ. ಹಾಗೂ ಸಹ ವಕೀಲರುಗಳು ಉಪಸ್ಥಿತರಿದ್ದು ದಂಪತಿಗಳ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿದರು.















