ಬಂಟ್ವಾಳ : ವಿದ್ಯಾರ್ಥಿಗಳಲ್ಲಿ ಆತ್ಮರಕ್ಷಣೆ ಕೌಶಲ್ಯ, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ಉಚಿತ ಕರಾಟೆ ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಮಾರ್ಷಲ್ ಆರ್ಟ್ ಕರಾಟೆ ತರಬೇತುದಾರ ರಾಜೇಶ್ ಮಂಜೇಶ್ವರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರಾಟೆ ತರಬೇತಿ ನೀಡುವುದು ತಮ್ಮ ಉದ್ದೇಶವಾಗಿದೆ. ಕರಾಟೆ ಕೇವಲ ಆತ್ಮರಕ್ಷಣೆಯ ಕಲೆಯಲ್ಲ, ಅದು ಶಿಸ್ತು, ಆತ್ಮವಿಶ್ವಾಸ, ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಸದೃಢತೆಯನ್ನು ಬೆಳೆಸುವ ಅತ್ಯುತ್ತಮ ಕಲೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ
ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಉದಯಕುಮಾರ್ ಜ್ಯೋತಿನಗುಡ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾವಿದ ಹರೀಶ್ ಆಚಾರ್ಯ ಹಾಗೂ ವರದಿಗಾರ ಯಾದವ ಅಗ್ರಬೈಲು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ, ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















