ಬಂಟ್ವಾಳ :ಸಂಸ್ಕಾರ ಭಾರತೀ,ದ.ಕ ಜಿಲ್ಲಾ ಇದರ ವತಿಯಿಂದ ಅಸ್ತಂಗತರಾದ ಸಿರಿಕಂಠದ ಗಾಯಕಿ ಎಸ್.ಜಾನಕಿಯವರಿಗೆ ನುಡಿನಮನ ಕಾರ್ಯಕ್ರಮ ಬಿ ಸಿ ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತಾರಾನಾಥ ಕೊಟ್ಟಾರಿ,ಫರೆಂಗಿಪೇಟೆ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದು, ಸಂಸ್ಕಾರಭಾರತೀ ಇದರ ಪಾರಂಪರಿಕ ಕಲಾ ಸಂಯೋಜಕಿ ಡಾ.ವಾರಿಜಾರವರು ಅಗಲಿದ ಜಾನಕಮ್ಮನ ಬಗ್ಗೆ ಮಾತನಾಡುತ್ತಾ "ನಮ್ಮ ಸಮಕಾಲೀನರಾಗಿ ಜಾನಕಮ್ಮ ಇದ್ದರೆಂಬುದೇ ನಮ್ಮ ಸೌಭಾಗ್ಯ, ಮಗುವಿನ ಸ್ವರಕೆ ಮಗುವಾಗಿ,ದನಿ ನಡುಗುವ ಹಿರಿಯ ವಯಸ್ಸಿಗೂ ಸ್ವರವಾಗಿ ಹತ್ತಿಪ್ಪತ್ತು ಭಾಷೆಗಳಲ್ಲಿ ನಲವತ್ತೆಂಟು ಸಾವಿರ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರೆಂದರೆ ಅದೇನು ಸುಲಭದ ಮಾತೇ! ನೂರಾರು ಪ್ರಶಸ್ತಿಗಳನ್ನು ಪಡೆದಿದ್ದರೂ ಅತ್ಯಂತ ಸರಳ ಸ್ವಭಾವ, ಆಕೆಯ ಬದುಕೇ ಸರಳತೆಯಲ್ಲಿ ಹಾಸಿಹೊದ್ದಂತಿತ್ತು.ಅವರ ಕಂಠಸಿರಿಯಲ್ಲಿ ಬಾಡಿದ ಹೂವೂ ಅರಳಿತು! ಪದ್ಮವಿಭೂಷಣದಂತಹ ರಾಷ್ಟ್ರ ಪ್ರಶಸ್ತಿಯೂ ಒಲಿಯಿತು.ಅವರ ನಡೆನುಡಿಯೇ ನಮಗೆಆದರ್ಶವೆಂದರು.
ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಪ್ರದರ್ಶಕ ಕಲಾ ಸಂಯೋಜಕರಾದ ಬಿ.ದೀಪಕ್ ಕುಮಾರ್ ರವರು " ಜಾನಕಮ್ಮನ ಹಾಡುಗಳ ಜೊತೆಜೊತೆಗೇ ನಾವು ಬೆಳೆದವರು.ಅವರು ಎಲ್ಲಾ ಕಲಾ, ಸಂಗೀತ ಪ್ರಕಾರ ಹಾಗೂ ಎಲ್ಲಾ ಭಾವನೆಗಳಿಗೆ ತಮ್ಮ
ಕಂಠಸಿರಿಯ ಮೂಲಕ ಏರಿಳಿತ,ನಗು ಅಳು ಎಂಬ ಜೀವ ತುಂಬಿ ನಮ್ಮ ಜೀವನದ ಸುಂದರ ನೆನಪುಗಳಿಗೆ ಕಾರಣರಾಗಿದ್ದಾರೆ. ಅವರು ಹಾಡುವಾಗ ಹಾಡುತ್ತಿದ್ದಾರೆಂದೇ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಅವರು ಯಾವುದೇ ಆಂಗಿಕ ಚಲನೆಗಳನ್ನು ಮಾಡುತ್ತಿರಲಿಲ್ಲ .ಅವರು ಕೇವಲ ಕಂಠವನ್ನಷ್ಟೇ ದುಡಿಸಿಕೊಂಡು ತನ್ಮಯತೆಯಿಂದ ಹಾಡಿ ಕೇಳುಗನನ್ನು ಲೀನವಾಗುವಂತೆ ಮಾಡುತ್ತಿದ್ದರು.ಇದು ಉತ್ತಮ ಗಾಯಕರ ಲಕ್ಷಣ.ಜಾನಕಮ್ಮ ಅತ್ಯಂತ ಸರಳ ಜೀವಿ.ಅವರು ಅಸ್ತಂಗತರಾದವರಲ್ಲ..ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಂದಾದೀಪವಾಗಿ ಉಳಿದವರು" ಎಂದರು.
ಈ ನುಡಿನಮನ ಕಾರ್ಯಕ್ರಮ ದಲ್ಲಿ ಸಂಸ್ಕಾರ ಭಾರತೀ ಇದರ ದಕ್ಷಿಣ ಪ್ರಾಂತದ ಉಪಾಧ್ಯಕ್ಷೆ ರೂಪಲೇಖ ಹರಿಕೃಷ್ಣ, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಸಹ ಕೋಶಪ್ರಮುಖ್ ರಘುವೀರ್ ಗಟ್ಟಿ ಹಾಗೂ ಜಿಲ್ಲಾ ಕಾರ್ಯದರ್ಶಿ ವಿನುತಾ ಕೆ.ಸಾಲೆತ್ತೂರು, ಕೋಶ ಪ್ರಮುಖ್ ವಿಜಯಾ ಬಿ.ಶೆಟ್ಟಿ ಸಾಲೆತ್ತೂರು, ಉಪಾಧ್ಯಕ್ಷರಾದ ಅನಿಲ್ ಪಂಡಿತ್, ಸಂಪತ್ ಸುವರ್ಣ, ಸಹಕಾರ್ಯದರ್ಶಿ ಬಿ.ಶಶಿಕುಮಾರ್, ಪ್ರವೀಣ್ ಕುಮಾರ್ ಶೆಟ್ಟಿ,ಕಾರ್ಯಕಾರಿ ಸದಸ್ಯರಾದ ಪುರುಷೋತ್ತಮ ಎನ್, ಗಿರೀಶ್ ವೇಣೂರು ಹಾಗೂ ಸಂಸ್ಕಾರ ಮಿತ್ರರು ಹಾಜರಿದ್ದರು. ವಿನುತಾ ಕೆ.ಸಾಲೆತ್ತೂರು ರವರು ಕಾರ್ಯಕ್ರಮ ನಿರ್ವಹಿಸಿದರು.
















