ಚಾಮರಾಜನಗರ: ರಾಜ್ಯಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ಮಾರ್ಚ್ 30) ಯುಗಾದಿ ಜಾತ್ರೆ ಸಂಭ್ರಮ ಶುರುವಾಗಿದೆ.
ಈ ಜಾತ್ರೆ ಮಾರ್ಚ್ 31ರ ವರೆಗೆ ನಡೆಯಲಿದ್ದು, ಇಂದು ಮುಂಜಾನೆಯಿಂದಲೇ ಮಾದಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಎಣ್ಣೆ ಮಜ್ಜನ ಸೇವೆ, ಹೋಮ-ಹವನ, ಮತ್ತು ಮಹಾ ಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿವೆ.
ಜಾತ್ರೆಯ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚುವುದರಿಂದ, ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 29ರ ಸಂಜೆಯಿಂದ ಮಾರ್ಚ್ 31ರ ವರೆಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ವ್ಯವಸ್ಥೆಯು ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಮಾಡಲಾಗಿದೆ.
ಈ ಜಾತ್ರೆಯ ವಿಶೇಷತೆಯೆಂದರೆ, ಇದಕ್ಕೂ ಮುನ್ನ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಶಿವರಾತ್ರಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಆ ವೇಳೆ ಕೇವಲ 10 ದಿನಗಳಲ್ಲಿ ಮಾದಪ್ಪನ ಹುಂಡಿಯಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗಿತ್ತು. ಈಗ ಯುಗಾದಿ ಜಾತ್ರೆಯೂ ಕೂಡ ಅದೇ ರೀತಿಯಾಗಿ ಅದ್ದೂರಿಯಾಗಿ ನಡೆಯುತ್ತಿದೆ. ಇನ್ನು ಸಾವಿರಾರು ಭಕ್ತರ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಜಾತ್ರೆಯ ಸಂಭ್ರಮವನ್ನು ಆಚರಿಸಲು ಕರ್ನಾಟಕ ಮಾತ್ರ ಅಲ್ಲದೆ,
ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ಭಕ್ತರ ದಂಡೇ ಆಗಮಿಸುತ್ತಿದೆ. ಭದ್ರತೆ ಮತ್ತು ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಹನೂರು ತಾಲೂಕಿನ ಇತಿಹಾಸ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭವಾಗಿದೆ. ಈ ಹಿನ್ನೆಲೆ 3 ದಿನ ಕಾಲ ಬೆಟ್ಟಕ್ಕೆ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಹಿನ್ನೆಲೆ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.
ಆದ್ದರಿಂದ ಮಾರ್ಚ್ 29ರಿಂದ 31ರ ವರೆಗೆ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ, ಗೂಡ್ಸ್ ವಾಹನಗಳ ಪ್ರವೇಶ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ವಾಹನಗಳಿಗೆ ಹನೂರು ತಾಲೂಕಿನ ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಅಮಾವಾಸ್ಯೆ ಪೂಜೆ ಹಾಗೂ ಭಾನುವಾರ ಯುಗಾದಿ ರಥೋತ್ಸವ ಹಿನ್ನಲೆ ಭಕ್ತರ ದಂಡು ಹರಿದುಬರುವ ನಿರೀಕ್ಷೆಯಿದೆ. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.














