ರನ್ಯಾ ವಿರುದ್ಧ ಆಧಾರರಹಿತ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ; ಸರ್ಕಾರದಿಂದ ಸಿಐಡಿ ತನಿಖೆ ವಾಪಸ್‌

Coastal Bulletin
ರನ್ಯಾ ವಿರುದ್ಧ ಆಧಾರರಹಿತ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ; ಸರ್ಕಾರದಿಂದ ಸಿಐಡಿ ತನಿಖೆ ವಾಪಸ್‌

ಬೆಂಗಳೂರು: ದುಬೈನಿಂದ 14 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಬೆಂಗಳೂರಿಗೆ ಸಾಗಿಸಿರುವ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ವಿರುದ್ಧ ಯಾವುದೇ ರೀತಿಯ ಸುಳ್ಳು ಮತ್ತು ಆಧಾರರಹಿತ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನ್ಯಾಯಾಲಯ ಬುಧವಾರ ನಿರ್ಬಂಧಕಾಜ್ಞೆ ಹೊರಡಿಸಿದೆ. ಜೊತೆಗೆ, ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು. ರನ್ಯಾ ರಾವ್ ಅವರ ತಾಯಿ ಹೆಚ್.ಪಿ.ರೋಹಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ 15ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ನೀಡಿದೆ.

ನಾಳೆ ರನ್ಯಾ ರಾವ್ ಜಾಮೀನು ತೀರ್ಪು: ರನ್ಯಾ ರಾವ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಮಾ.14ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ನ್ಯಾಯಾಧೀಶ ವಿಶ್ವನಾಥ ಸಿ.ಗೌಡರ್ ತೀರ್ಪು ಕಾಯ್ದಿಸಿದ್ದಾರೆ.

ರನ್ಯಾ ಪರ ವಕೀಲರ ವಾದವೇನು?: ವಿಚಾರಣೆ ವೇಳೆ ರನ್ಯಾ ಪರ ವಕೀಲರು, "ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂಬ ಬಗ್ಗೆ ಅರೆಸ್ಟ್ ಮೊಮೊದಲ್ಲಿ ತನಿಖಾಧಿಕಾರಿಗಳು ವಿವರಣೆ ನೀಡಬೇಕು. ಬಂಧನಕ್ಕೆ ಸಕಾರಣ ನೀಡದಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ. ಆರೋಪಿಗೆ ತನ್ನ ಅಪರಾಧ ಕೃತ್ಯವೇನು ಎನ್ನುವುದನ್ನು ತಿಳಿಸಬೇಕು. ಆದರೆ, ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಐ) ತನಿಖಾಧಿಕಾರಿಗಳು ಅರೆಸ್ಟ್ ಮೊಮೊದಲ್ಲಿ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ" ಎಂದರು.

"ಅಲ್ಲದೆ, ಬಂಧಿಸಿದ ಕೂಡಲೇ ಕಸ್ಟಮ್ಸ್ ಇಲಾಖೆಯ ಗೆಜೆಟೆಡ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು. ಅವರೇ ಶೋಧನಾ ಕಾರ್ಯ ನಡೆಸಬೇಕು. ರನ್ಯಾ ಬಂಧನದ ವೇಳೆ ಕಸ್ಟಮ್ಸ್ ಕಾಯ್ದೆಯ ನಿಯಮಗಳನ್ನೂ ಅನುಸರಿಸಿಲ್ಲ. ಮೂರು ಆರೋಪಿಗಳ ಪೈಕಿ ರನ್ಯಾ ಅವರನ್ನು ಮಾತ್ರ ಬಂಧಿಸಲಾಗಿದೆ. ದೇಹ, ಶೂ ಮತ್ತು ಪ್ಯಾಕೆಟ್‌ನಲ್ಲಿ ಚಿನ್ನ ಇರಿಸಿಕೊಳ್ಳಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಆದರೆ, ಮೆಟಲ್ ಡಿಟೆಕ್ಟರ್​​ನಲ್ಲಿ ಚಿನ್ನ ಇರುವುದೇ ಪತ್ತೆಯಾಗಿಲ್ಲ. ಬಂಧನ ಪ್ರಕ್ರಿಯೆಯಲ್ಲಿ ಡಿಆರ್‌ಐ ಅಧಿಕಾರಿಗಳು ಸಾಕಷ್ಟು ಕಾನೂನು ಲೋಪ ಎಸಗಿದ್ದಾರೆ. ಮೇಲಾಗಿ ಅರ್ಜಿದಾರೆ ಮಹಿಳೆಯಾಗಿದ್ದು, ಜಾಮೀನು ನೀಡಬೇಕು" ಎಂದು ಕೋರಿದರು.

ಡಿಐಆರ್ ಪರ ವಕೀಲರ ವಾದವೇನು?: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಐಆರ್ ಪರ ವಕೀಲರು, "ರನ್ಯಾ ರಾವ್ 83 ಲಕ್ಷ ರೂ. ನೀಡಿ ದುಬೈನಲ್ಲಿ 2 ವರ್ಷಗಳ ಕಾಲ ರೆಸಿಡೆಂಟ್ ವಿಸಾ ಪಡೆದಿದ್ಧಾರೆ. ದುಬೈನಿಂದ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿದ್ಧಾರೆ.

ರಾಜ್ಯ ಪೊಲೀಸರ ಪ್ರೊಟೋಕಾಲ್ ದುರ್ಬಳಕೆ ಮಾಡಿಕೊಂಡು ಚಿನ್ನ ಅಕ್ರಮ ಸಾಗಣೆ ಕೃತ್ಯದಲ್ಲಿ ತೊಡಗಿದ್ದಾರೆ. ಇದು ರಾಷ್ಟ್ರಕ್ಕೆ ಅಪಾಯಕಾರಿ ಬೆಳವಣಿಗೆ" ಎಂದು ವಿವರಿಸಿದರು.

"ಮಾ.3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರನ್ಯಾ ರಾವ್ ಅವರ ಲಗೇಜ್‌ನಲ್ಲಿ ಭಾರಿ ಪ್ರಮಾಣದ ಚಿನ್ನ ಇರುವುದು ಮೆಟಲ್ ಡಿಟೆಕ್ಟರ್‌ನಲ್ಲಿ ಪತ್ತೆಯಾಗಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದು ತಪಾಸಣೆ ನಡಸಿದಾಗ 14 ಕೆ.ಜಿ 24 ಕ್ಯಾರೆಟ್ ಗುಣಮಟ್ಟದ ಚಿನ್ನ ಸಿಕ್ಕಿದೆ. ಈ ಚಿನ್ನವನ್ನು ಭಾರತಕ್ಕೆ ತುರುವಾಗ ದುಬೈನಲ್ಲಿ ಸುಳ್ಳು ಹೇಳಿ, ಅಲ್ಲಿನ ಅಧಿಕಾರಿಗಳ ದಿಕ್ಕು ತಪ್ಪಿಸಿದ್ದಾರೆ. ಇದು ಪೂರ್ವಯೋಜಿತ ಕೃತ್ಯವಾಗಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಇತರರನ್ನೂ ಪತ್ತೆ ಮಾಡಬೇಕಿದೆ. ಪೂರ್ಣ ಪ್ರಮಾಣದಲ್ಲಿ ಅಕ್ರಮವನ್ನು ಬಯಲಿಗೆಳೆಯಬೇಕಿದೆ. ಈ ಹಂತದಲ್ಲಿ ಜಾಮೀನು ನೀಡಬಾರದು" ಎಂದು ಅವರು ಕೋರಿದರು.

ಸಿಐಡಿ ತನಿಖೆ ವಾಪಸ್ ಪಡೆದ ರಾಜ್ಯ ಸರ್ಕಾರ: ರನ್ಯಾ ರಾವ್ ವಿರುದ್ಧದ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಸಿಐಡಿ ತನಿಖೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಪ್ರಕರಣವನ್ನು ಸಿಬಿಐ, ಡಿಆರ್​​ಐ ಕೂಡ ತನಿಖೆ ನಡೆಸುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾರನ್ನು ನೇಮಿಸಿ, ಶಿಷ್ಟಾಚಾರ ಉಲ್ಲಂಘನೆ ಹಾಗೂ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಪಾತ್ರದ ಬಗ್ಗೆ ತನಿಖೆ ನಡೆಸಿ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಸಿಐಡಿ ತನಿಖೆಗೂ ಆದೇಶ ಹೊರಡಿಸಿತ್ತು. ಈ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ ಒಂದೇ ದಿನದಲ್ಲೇ ರಾಜ್ಯ ಸರ್ಕಾರ ಸಿಐಡಿ ತನಿಖಾ ಆದೇಶವನ್ನು ಹಿಂಪಡೆದಿದೆ.

Leave a Comment