ಪ್ರತಿ ವರ್ಷ 14 ವರ್ಷದೊಳಗಿನ 1,533 ಮಕ್ಕಳಲ್ಲಿ ಕ್ಯಾನ್ಸರ್: ಸಚಿವ ಶರಣ್ ಪ್ರಕಾಶ್ ಪಾಟೀಲ್

Coastal Bulletin
ಪ್ರತಿ ವರ್ಷ 14 ವರ್ಷದೊಳಗಿನ 1,533 ಮಕ್ಕಳಲ್ಲಿ ಕ್ಯಾನ್ಸರ್: ಸಚಿವ ಶರಣ್ ಪ್ರಕಾಶ್ ಪಾಟೀಲ್

ಬೆಂಗಳೂರು: "ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಬೋನ್ ಮ್ಯಾರೋ ಆಸ್ಪಿರೇಟ್ ಆ್ಯಂಡ್ ಟ್ರಿಪೈನ್ ಬಯಾಪ್ಸಿ (ಬಿಎಂಎಟಿ) ಸಂಸ್ಥೆಗಳನ್ನು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಗುವುದು" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸೋಮವಾರ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಪಾಟೀಲ್, "ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಈ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಉದ್ದೇಶವಿದೆ. ಪ್ರಾರಂಭಿಕ ಹಂತದಲ್ಲಿ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು" ಎಂದರು.

"ಈಗಾಗಲೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಕಲಬುರಗಿಯಲ್ಲೂ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲೂ ಇದನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಸಚಿವರು ಉತ್ತರಿಸಿದರು.

ಮಕ್ಕಳಲ್ಲಿ ಕ್ಯಾನ್ಸರ್‌ ಆತಂಕಕಾರಿ: "ಮಕ್ಕಳಲ್ಲಿ ಇತ್ತೀಚೆಗೆ ಕ್ಯಾನ್ಸರ್ ಕಂಡುಬರುತ್ತಿರುವುದು ಅತ್ಯಂತ ಆತಂಕಕಾರಿ. ಇದರ ಬಗ್ಗೆ

ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಸಾರ್ವಜನಿಕರಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲೂ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಆದರೂ ಕ್ಯಾನ್ಸರ್ ಹೆಚ್ಚಳವಾಗುತ್ತಿರುವುದು ಆತಂಕ ಸೃಷ್ಟಿಸಿದೆ" ಎಂದು ಕಳವಳ ವ್ಯಕ್ತಪಡಿಸಿದರು.

"ಪ್ರತಿ ವರ್ಷ 14 ವರ್ಷದೊಳಗಿನ 876 ಗಂಡು ಮಕ್ಕಳು, 657 ಹೆಣ್ಣು ಮಕ್ಕಳು ಸೇರಿ 1,533 ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ. ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲೇ ಅರಿವು ಮೂಡಿಸುವ ಕೆಲಸವಾಗಬೇಕು. ಕೇವಲ ಸರ್ಕಾರದಿಂದ ಮಾತ್ರವಲ್ಲದೆ ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸುವ ಮೂಲಕ ತಡೆಗಟ್ಟಬಹುದೆಂದು" ಸಚಿವ ಶರಣಪ್ರಕಾಶ್ ಪಾಟೀಲ್ ಸಲಹೆ ನೀಡಿದರು.

Leave a Comment