ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತರಲ್ಲಿ ಗುರುತಿಸಿಕೊಂಡಿರುವ ಹಾಗೂ ಮೂಡಬಿದ್ರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಿಥುನ್ ರೈ ಕೃಷ್ಣ ಮಠಕ್ಕೆ ಮುಸಲ್ಮಾನ ರಾಜ ಜಾಗ ನೀಡಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ 'ನಮ್ಮೂರ ಮಸೀದಿ ನೋಡ ಬನ್ನಿ' ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ 'ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರುಗಳು' ಎಂಬ ಹೇಳಿಕೆ ನೀಡಿದ್ದಾರೆ. ತುಳು ಭಾಷೆಯಲ್ಲಿ ಮಾತನಾಡಿದ ಅವರ ಭಾಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಹೇಳಿಕೆಗೆ ಖಾರವಾಗೇ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಕೆ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ. ಮಿಥುನ್ ರೈ ಹೇಳಿಕೆ ಖಂಡಿಸಿರುವ ರಘುಪತಿ ಭಟ್ ಮುಸಲ್ಮಾನ ಅರಸರು ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ ಅನಂತೇಶ್ವರಕ್ಕಾಗಲಿ
ನೀಡಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಭೂಮಿ ಕೊಟ್ಟ ಬಗ್ಗೆ ಉಲ್ಲೇಖ ಇದೆ, ಮುಂದೆ ಆ ಭೂಮಿಯೆ ಕೃಷ್ಣ ಮಠಕ್ಕೆ ಬಳಕೆಯಾಗಿದೆ. ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆ ಎಂದಿದ್ದಾರೆ.
ಮಿಥುನ್ ರೈ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ಪ್ರತಿಕ್ರಿಯಿಸಿದ್ದು, ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದು, ಅವರೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು ಎಂದು ಹೇಳಿದ್ರೂ ಅಚ್ಚರಿ ಪಡಬೇಕಿಲ್ಲ. ಅಷ್ಟೇ ಯಾಕೆ ಭಾರತ ಎಂಬ ಹೆಸರು ಕೂಡಾ ಮುಸಲ್ಮಾನರೇ ನೀಡಿದ್ದು ಎಂದೂ ಹೇಳಬಹುದು. ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಗುಡುಗಿದ್ದಾರೆ.














