ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದಕ್ಕೆ ಟ್ರಾಫಿಕ್ ಕಾರಣವಲ್ಲ: ಬೆಂಗಳೂರು ಪೊಲೀಸರಿಂದ ಫ್ಯಾಕ್ಟ್‌ ಚೆಕ್‌

Coastal Bulletin
ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದಕ್ಕೆ ಟ್ರಾಫಿಕ್ ಕಾರಣವಲ್ಲ: ಬೆಂಗಳೂರು ಪೊಲೀಸರಿಂದ ಫ್ಯಾಕ್ಟ್‌ ಚೆಕ್‌

ಬೆಂಗಳೂರು: ನೀಟ್ (NEET) ಪರೀಕ್ಷೆಯ ಅಭ್ಯರ್ಥಿಯೊಬ್ಬರು ಕೇಂದ್ರಕ್ಕೆ ತಡವಾಗಿ ತಲುಪಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದ್ದ ವದಂತಿಗಳಿಗೆ ಬೆಂಗಳೂರು ನಗರ ಪೊಲೀಸ್ (BCP) ಹಾಗೂ ಬೆಂಗಳೂರು ಸಂಚಾರ ಪೊಲೀಸ್ (BTP) ಜಂಟಿಯಾಗಿ ಸ್ಪಷ್ಟನೆ ನೀಡಿವೆ.

ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮ ಉಂಟಾದ ಟ್ರಾಫಿಕ್ ಜಾಮ್‌ನಿಂದ ಅಭ್ಯರ್ಥಿ ತಡವಾಗಿದ್ದಾರೆ ಎಂಬ ಆರೋಪವನ್ನು ಪೊಲೀಸರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಅಭ್ಯರ್ಥಿ ಮತ್ತು ಪೋಷಕರೊಂದಿಗಿನ ಸಂಭಾಷಣೆ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಪೊಲೀಸರು ಅಧಿಕೃತ ಫ್ಯಾಕ್ಟ್ ಚೆಕ್ (Fact Check) ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಯಾವ ಸಮಯದಲ್ಲಿ ಏನು?

ಮಧ್ಯಾಹ್ನ 12:57 – ಅಭ್ಯರ್ಥಿಯು ಆರ್.ಟಿ. ನಗರದಲ್ಲಿರುವ (R.T. Nagar) ತಮ್ಮ ನಿವಾಸದಿಂದ ಹೊರಟಿದ್ದಾರೆ.

ಮಧ್ಯಾಹ್ನ 01:30 -ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ನಿಗದಿಪಡಿಸಲಾಗಿದ್ದ ಕೊನೆಯ ಸಮಯ.

ಮಧ್ಯಾಹ್ನ 01:33 – ನಿಗದಿತ ಸಮಯ ಮುಗಿದ 3 ನಿಮಿಷಗಳ ನಂತರ ಅಭ್ಯರ್ಥಿಯು ಪರೀಕ್ಷಾ ಕೇಂದ್ರದ ಆವರಣವನ್ನು ತಲುಪಿದ್ದಾರೆ.

ಪೊಲೀಸರು ಹೇಳಿದ್ದು ಏನು?

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಪರೀಕ್ಷಾ ಕೇಂದ್ರದ ಪ್ರವೇಶದ ಕೊನೆಯ ಸಮಯಕ್ಕೆ (Cut-off time) ಕೇವಲ 33 ನಿಮಿಷಗಳು ಬಾಕಿ ಇರುವಾಗಷ್ಟೇ ಅಭ್ಯರ್ಥಿ ಮನೆಯಿಂದ ಹೊರಟ್ಟಿರುವುದು ಧೃಡಪಟ್ಟಿದೆ.

ಕಡಿಮೆ ಸಮಯದಲ್ಲಿ ತಲುಪಬಹುದಾದ

ಸುಲಭ ಹಾಗೂ ಹತ್ತಿರದ ರಸ್ತೆಗಳು ಲಭ್ಯವಿದ್ದರೂ ಸಹ, ಅಭ್ಯರ್ಥಿಯು ಹೆಚ್ಚು ಸಮಯ ತೆಗೆದುಕೊಳ್ಳುವ ಸುದೀರ್ಘ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಅಂದು ರಸ್ತೆಗಳಲ್ಲಿ ಟ್ರಾಫಿಕ್ ಪರಿಸ್ಥಿತಿ ಸಾಮಾನ್ಯವಾಗಿತ್ತು. ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಿಂದಾಗಿ ಯಾವುದೇ ರೀತಿಯ ಅಸಹಜ ಸಂಚಾರ ದಟ್ಟಣೆ ಉಂಟಾಗಿರಲಿಲ್ಲ. ಅಭ್ಯರ್ಥಿ ಚಲಿಸುತ್ತಿದ್ದ ಮಾರ್ಗದಲ್ಲಿ ನಿಯೋಜನೆಗೊಂಡಿದ್ದ ಸಂಚಾರ ಪೊಲೀಸ್ ಸಿಬ್ಬಂದಿಗಳು, ಅಭ್ಯರ್ಥಿಯ ವಾಹನವು ಸುಲಭವಾಗಿ ಸಾಗಲು ಅಗತ್ಯವಿದ್ದ ಕಡೆಗಳಲ್ಲೆಲ್ಲಾ ನೆರವು ನೀಡಿರುವುದು ಕಂಡುಬಂದಿದೆ.

ಲಭ್ಯವಿರುವ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಸಾರ್ವಜನಿಕ ಕಾರ್ಯಕ್ರಮದ ಟ್ರಾಫಿಕ್‌ನಿಂದಾಗಿ ಅಭ್ಯರ್ಥಿ ತಡವಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಕೇವಲ 33 ನಿಮಿಷ ಮುಂಚಿತವಾಗಿ ಮನೆ ಬಿಟ್ಟಿರುವುದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇ ಅಭ್ಯರ್ಥಿ ಪರೀಕ್ಷೆಗೆ ತಡವಾಗಿ ಬರಲು ಮುಖ್ಯ ಕಾರಣ ಎಂದು ಹೇಳಿದೆ.

ಜೂನ್‌ 21 ಭಾನುವಾರ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಿಕೆ ಹರಿಪ್ರಸಾದ್‌ ಪದಗ್ರಹಣ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಿಂದಾಗಿ ನೀಟ್‌ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

Leave a Comment