ಮಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಕೇವಲ 'ಪೇಡ್ ಪಾದಯಾತ್ರೆ' ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತೀವ್ರವಾಗಿ ಲೇವಡಿ ಮಾಡಿದ್ದಾರೆ.
ಮಂಗಳೂರು ಪ್ರವಾಸದ ವೇಳೆ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೇಗೆ ಪೇಡ್ ನ್ಯೂಸ್ ಬರುತ್ತದೋ, ಅದೇ ರೀತಿ ಬಿಜೆಪಿಯವರು ಮಾಡುತ್ತಿರುವುದು ಸಂಪೂರ್ಣವಾಗಿ ಪೇಡ್ ಪಾದಯಾತ್ರೆ. ಇದರಲ್ಲಿ ಜನಸಾಮಾನ್ಯರ ಯಾವುದೇ ಪಾಲ್ಗೊಳ್ಳುವಿಕೆ ಅಥವಾ ಮನ್ನಣೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬಗ್ಗೆ ಭಾರಿ ಗೊಂದಲವಿದೆ, ಹಲವು ನಾಯಕರೇ ಈ ಪಾದಯಾತ್ರೆಗೆ ಹೋಗಿಲ್ಲ. ಕೇವಲ ಮರಿ ಯಡಿಯೂರಪ್ಪನವರ (ಬಿ.ವೈ.ವಿಜಯೇಂದ್ರ) ನಾಯಕತ್ವವನ್ನು ಪುನಃಸ್ಥಾಪಿಸಲು ಮತ್ತು ನಿರುದ್ಯೋಗಿ ನಾಯಕರಿಗೆ ಕೆಲಸ ತೋರಿಸಲು ಈ ಪಾದಯಾತ್ರೆ ಮಾಡುತ್ತಿದ್ದಾರೆಯೇ ವಿನಃ ಜನರಿಗೋಸ್ಕರವಲ್ಲ. ಜನಸಾಮಾನ್ಯರ ಮೇಲೆ ಅಷ್ಟೊಂದು ಕಾಳಜಿಯಿದ್ದರೆ ಸದನದಲ್ಲಿ ಚರ್ಚೆ ಮಾಡಲು ಇವರಿಗೆ ಏನು ಅಡ್ಡಿಯಾಗಿತ್ತು? ಎಂದು ಪ್ರಶ್ನಿಸಿದರು.
ಗಣಿಗಾರಿಕೆಯಲ್ಲಿ ಕಳ್ಳತನ ಮಾಡಿ, ಭ್ರಷ್ಟಾಚಾರದ ಕಾಂಟ್ರ್ಯಾಕ್ಟ್ ತೆಗೆದುಕೊಂಡು ನಾಲ್ಕೈದು ವರ್ಷ ಜೈಲಿನಲ್ಲಿದ್ದವರು ಇವತ್ತು ನಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆಯೇ? ಇಡೀ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಚೆಕ್ ಮೂಲಕ ಲಂಚ ಪಡೆದು ಜೈಲು ಪಾಲಾದ ಇತಿಹಾಸ ಸೃಷ್ಟಿಸಿದವರು ಇವರು. ಇವರ ಮನೆಯ ಪಕ್ಕದಲ್ಲೇನಾದರೂ ಸತ್ಯ ಹರಿಶ್ಚಂದ್ರ ಇದ್ದನೇ? ಭ್ರಷ್ಟಾಚಾರದಲ್ಲಿ ಕುತ್ತಿಗೆಯವರೆಗೆ ಮುಳುಗಿರುವ ಇವರು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ಮಾತನಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಕಂದಾಯ ಸಚಿವರು ಈಗಾಗಲೇ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದಾರೆ. ಅವರ ವರದಿಯನ್ನು ಖುದ್ದು ಪುಷ್ಟೀಕರಿಸಲು ಸಿಎಂ ವೈಮಾನಿಕ ಸಮೀಕ್ಷೆ
ನಡೆಸಿದ್ದಾರೆ. ಇದರಲ್ಲಿ ತಪ್ಪೇನಿದೆ? ದೇಶದ 'ವಿಶ್ವಗುರು' ಪ್ರಧಾನಮಂತ್ರಿಗಳು ಪ್ರವಾಹ ಬಂದಾಗ ಮಹಾರಾಷ್ಟ್ರ, ಆಂಧ್ರಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಲಿಲ್ಲವೇ? ಆದರೆ ಕರ್ನಾಟಕಕ್ಕೆ ಮಾತ್ರ ಅವರು ಬರಲೇ ಇಲ್ಲ. ಕೇಂದ್ರದ ಬಳಿ ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದರೂ ಅವಕಾಶ ನೀಡಲಿಲ್ಲ. ಇಂತಹವರು ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಅರ್ಹರೇ? ಎಂದು ಟೀಕಾಪ್ರಹಾರ ನಡೆಸಿದರು.
ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಕರಾವಳಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವಂತೆ ತಾವು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದಂತೆ ಮತ್ತು ನಮ್ಮ ನಾಯಕ ರಾಹುಲ್ ಗಾಂಧಿ ಅವರ ಆಶಯದಂತೆ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರದ ಸೆನ್ಸಸ್‌ನಲ್ಲೂ ಜಾತಿ ಗಣತಿಯ ಕಾಲಂ ಸೇರಿಸಬೇಕು ಎಂಬುದು ನಮ್ಮ ನಿಲುವು ಎಂದರು.
ಪ್ರದೀಪ್ ಈಶ್ವರ್ ಅವರು ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆ ಹೇಳುವ ಸ್ವಾತಂತ್ರ್ಯವಿದೆ, ನಾವು ನಾಗ್ಪುರ ಯುನಿವರ್ಸಿಟಿಯಲ್ಲಿ ಟ್ರೈನ್ ಆದವರಲ್ಲ. ಅದು ಅವರ ವೈಯಕ್ತಿಕ ಅನಿಸಿಕೆಯೇ ಹೊರತು ಪಕ್ಷದ ಅಧಿಕೃತ ತೀರ್ಮಾನವಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.















