ತುಂಬೆ: ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ. ಯುವ ಶಕ್ತಿಯಿಂದ ವಿಕಸಿತ ಭಾರತದ ಯಶಸ್ಸು:ಡಾ ರವೀಶ್ ತುಂಗ

Coastal Bulletin
ತುಂಬೆ: ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ. ಯುವ ಶಕ್ತಿಯಿಂದ ವಿಕಸಿತ ಭಾರತದ ಯಶಸ್ಸು:ಡಾ ರವೀಶ್ ತುಂಗ

ಬಂಟ್ವಾಳ :ತಾಲೂಕಿನ ತುಂಬೆಯ ಭಾಗ್ಯೋದಯ ಮಿತ್ರ ಕಲಾ ವೃಂದ (ರಿ)ಇದರ ನವೀಕೃತ ಕಟ್ಟಡ "ಭಾಗ್ಯೋದಯ"ದ ಉದ್ಘಾಟನಾ ಸಮಾರಂಭ ಸೆ 6ರಂದು ಹನುಮ ನಗರ ತುಂಬೆಯಲ್ಲಿ ನಡೆಯಿತು.


ನವೀಕೃತ ಕಟ್ಟಡದ ನಾಮಫಲಕ "ಭಾಗ್ಯೋದಯ"ವನ್ನು ಅನಾವರಣಗೊಳಿಸಿದ ಅರ್ಕುಳ ಮನಸ್ವಿನಿ ಆಸ್ಪತ್ರೆಯ ಖ್ಯಾತ ಮನೋ ವೈದ್ಯ ಡಾ ರವೀಶ್ ತುಂಗ ಮಾತನಾಡಿ,ಯುವಶಕ್ತಿಯೇ ದೇಶದ ಭವಿಷ್ಯ.ಯುವಶಕ್ತಿಯಿಂದ ವಿಕಸಿತ ಭಾರತದ ಯಶಸ್ಸು ಸಾಧ್ಯ,ಯುವ ಸಂಘಟನೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಿ, ಸಾಧನೆಗೆ ಪರಿಶ್ರಮದೊಂದಿಗೆ ದೇವರ ಅನುಗ್ರಹ ಅಗತ್ಯ, ಗ್ರಾಮ ಉದ್ದಾರಕ್ಕೆ ಶಾಲೆ, ದೇವಸ್ಥಾನ, ಆಸ್ಪತ್ರೆಯ ಅಗತ್ಯತೆ ಇದೆ, ಸಂಘಟನೆಯ ಸೇವಾ ಕಾರ್ಯಕ್ಕೆ ತನ್ನ ಸಹಕಾರ ಸದಾ ಇದೆ ಎಂದರು.

ಕಟ್ಟಡ ಉದ್ಘಾಟಿಸಿದ ಎಂ ಪಿ ಫ್ಯಾಮಿಲಿ ಶಾಪ್ ಮಂಗಳೂರು ಇದರ ಮಾಲಕ ದಿನೇಶ್ ಎಂ ಪಿ ಮಾತನಾಡಿ,ಯುವ ಜನರು ತಮ್ಮ ಮನಸ್ಥಿತಿಯ ಬಗ್ಗೆ ಯೋಚಿಸಿ ಜೀವನದಲ್ಲಿ ಒಳ್ಳೆಯ ಆಚಾರ ವಿಚಾರವನ್ನು ಅಳವಡಿಸಿಕೊಂಡು ಭಗವಂತನ ಸೇವೆಯಲ್ಲಿ ತೊಡಗಬೇಕು,ತಂದೆ ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕಾದ ಅನಿವಾರ್ಯತೆ ಇದೆ, ಸತ್ಕಾರ್ಯಗಳು ಈ ಸಂಘದ ಕಟ್ಟಡದಲ್ಲಿ ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು.

ಅತಿಥಿ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ಟಿ ತಾರಾನಾಥ ಕೊಟ್ಟಾರಿ ಮಾತನಾಡಿ, ಸಂಘಟನೆಯೊಂದು ಸಮಾಜಮುಖಿಯಾಗಿ ತೊಡಗಿಸಿಕೊಂಡರೆ ಗ್ರಾಮದ ಅಭ್ಯೋದಯಕ್ಕೆ

ಕಾರಣವಾಗುತ್ತದೆ .ಈ ರೀತಿಯಾಗಿ ತುಂಬೆಯ ಯುವ ಸಮಾಜ ತೊಡಗಿಸಿಕೊಂಡು  ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಭಾಗ್ಯೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಯೋಗೀಶ್ ಕಜೆಕಂಡ ಪ್ರಾಸ್ತವಿಕವಾಗಿ ಮಾತನಾಡಿ ಸಂಘ ನಡೆದು ಬಂದ ದಾರಿ ಹಾಗೂ ಹಿರಿಯರ ತ್ಯಾಗದ ಬಗ್ಗೆ ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಹಾಗೂ ಸ್ಥಾಪಕ ಸದಸ್ಯ ವೆಂಕಪ್ಪ ಕುಲಾಲ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ದೀಪ್ತಿ ಪರನೀರು, ತನ್ವಿ ಪರನೀರು  ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಪ್ರಮುಖರಾದ ಹಿರಿಯ ಸದಸ್ಯ ಲಿಂಗಪ್ಪ ಕುಲಾಲ್,ಪ್ರ.ಕಾರ್ಯದರ್ಶಿ ರಾಜೇಶ್ ಪರ್ಲಕ್ಕೆ, ಕೋಶಾಧಿಕಾರಿ ಚರಣ್, ಜೊತೆ ಕಾರ್ಯದರ್ಶಿ ಧನ್ಯ ಗೋಪಾಲ್,ಕ್ರೀಡಾ ಕಾರ್ಯದರ್ಶಿ ಅನಿಶ್ ಪರ್ಲಕ್ಕೆ ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿ,ಹರ್ಷ ಸನ್ಮಾನಪತ್ರ ವಾಚಿಸಿದರು, ವಿದ್ಯಾ ಸಚಿನ್ ಧನ್ಯವಾದವಿತ್ತು, ಶಿಕ್ಷಕ ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ವರದಿ :ಸಂತೋಷ್ ಕುಲಾಲ್ ನೆತ್ತರಕೆರೆ 

ಫೋಟೋ ಕೃಪೆ: ಶ್ರೇಯಾ ಸ್ಟುಡಿಯೋ 

Leave a Comment