ಬೆಂಗಳೂರು: ಹಾಲು ಉತ್ಪಾದನೆ ಜೊತೆಗೆ ಉತ್ಪಾದಿಸುವ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರೈತರ ಹಾಗೂ ಗ್ರಾಹಕರ ಹಿತದೃಷ್ಟಿಯಿಟ್ಟುಕೊಂಡು ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಈಗಾಗಲೇ ಚರ್ಚಿಸಲಾಗಿದ್ದು, ದರ ಎಷ್ಟು ಹೆಚ್ಚಿಸಬೇಕು ಎಂಬ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.
2023-24 ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 82.93 ಲಕ್ಷ ಲೀಟರ್ ಹಾಲು ಉತ್ಪಾದಿಸಿದ್ದು, 2024-25 ಸಾಲಿನಲ್ಲಿ ಈ ಸಂಖ್ಯೆ 90 ರಿಂದ 95 ಲಕ್ಷ ಲೀಟರ್ಗೆ ಏರಿದೆ. ಈ ಹಾಲನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ಸಂಗ್ರಹಿಸುತ್ತಿದೆ. ಪ್ರತಿವರ್ಷ ಗಮನಾರ್ಹ ರೀತಿಯಲ್ಲಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತಿದ್ದು, ಖರ್ಚು ಸಹ ಅಧಿಕವಾಗತೊಡಗಿದೆ. ರೈತರು ಸಹ 10 ರೂಪಾಯಿ ಪ್ರೋತ್ಸಾಹಧನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ, ರೈತರ ಹಾಗೂ ಗ್ರಾಹಕರ ಹಿತ ಗಮನದಲ್ಲಿರಿಸಿಕೊಂಡು ಹಾಲು ಮಾರಾಟ ದರ ಹೆಚ್ಚಳ ಬಗ್ಗೆ ಚರ್ಚಿಸಲಾಗಿದೆ. ದರ ಏರಿಕೆ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿ
ಮುಂದಿನ ದಿನಗಳಲ್ಲಿ ಹಾಲಿನ ದರ ಏರಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಬಿಜೆಪಿ ಸದಸ್ಯ ಡಾ.ಎಂ.ಜಿ.ಮುಳೆ ಹಾಗೂ ಕಾಂಗ್ರೆಸ್ನ ಉಮಾಶ್ರೀ ಅವರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ಹೈನುಗಾರಿಕೆ ನಡೆಸುವ ರೈತರಿಗೆ ಸರ್ಕಾರವು ಪ್ರತಿ ಲೀಟರ್ 5 ರೂಪಾಯಿ ಪ್ರೋತ್ಸಾಹಧ ನೀಡುತ್ತಿದ್ದು, 2023ರ ಏಪ್ರಿಲ್ನಿಂದ 2025ರ ಫೆಬ್ರುವರಿ ಅಂತ್ಯಕ್ಕೆ ಒಟ್ಟು 2661.70 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಿದೆ. 9.45 ಲಕ್ಷ ಫಲಾನುಭವಿಗಳಿಗೆ ಒಟ್ಟು 656 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಆರ್ಥಿಕ ಇಲಾಖೆ ಗಮನಕ್ಕೆ ತರಲಾಗಿದೆ. ಹಣ ಮಂಜೂರಾದ ಬಳಿಕ ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಲಾಗುವುದು ಸಚಿವರು ಭರವಸೆ ನೀಡಿದರು.














