ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಿದೆ ಎನ್ನಲಾದ ವಿವಿಧ ಹಗರಣಗಳ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆ ಶನಿವಾರದಿಂದ ಆರಂಭ ವಾಗಲಿದೆ. ಒಟ್ಟು ಏಳು ದಿನಗಳ ಪಾದಯಾತ್ರೆ ಇದಾಗಿದ್ದು, 8ನೇ ದಿನ ಆ.10ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಮೂಲಕ ಅಂತ್ಯಗೊಳ್ಳಲಿದೆ.
“ಭ್ರಷ್ಟ ಕಾಂಗ್ರೆಸ್ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ಶನಿವಾರ ಬೆಳಗ್ಗೆ 9.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಗುತ್ತದೆ. ಏಳು ದಿನಗಳ ಪಾದಯಾತ್ರೆ ಸಾಗುವ ಮಾರ್ಗದ ವಿವರವನ್ನು ಇಲ್ಲಿ ನೀಡಲಾಗಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಒಟ್ಟು 124 ಕಿ.ಮೀ ಪಾದಯಾತ್ರೆ ಸಾಗಲಿದ್ದು, ಸಮಾರೋಪ ಸಮಾರಂಭ ಸೇರಿ ಒಟ್ಟು ಎಂಟು ದಿನಗಳ ಕಾರ್ಯಕ್ರಮದ ಮಾಹಿತಿ ಇಲ್ಲಿದೆ.
ಪಾದಯಾತ್ರೆ ಸಾಗುವ ಮಾರ್ಗದ ವಿವರ
ಆ.3- ಕೆಂಗೇರಿಯಿಂದ ಹೊರಟು ಬಿಡದಿಯಲ್ಲಿ ವಾಸ್ತವ್ಯ
ಆ.4- ಬಿಡದಿಯಿಂದ ಹೊರಟು ಕೆಂಗಲ್‌ನಲ್ಲಿ ಹಾಲ್ಟ್
ಆ.5- ಕೆಂಗಲ್ ನಿಂದ ಹೊರಟು ನಿಡಘಟ್ಟದಲ್ಲಿ
ವಾಸ್ತವ್ಯ
ಆ.6- ನಿಡಘಟ್ಟದಿಂದ ಹೊರಟು ಮಂಡ್ಯ
ಆ.7- ಮಂಡ್ಯದಿಂದ ಹೊರಟು ತೂಬಿನಕೆರೆಯಲ್ಲಿ ವಾಸ್ತವ್ಯ
ಆ.8- ತೂಬಿನ ಕೆರೆಯಿಂದ ಹೊರಟು ಶ್ರೀರಂಗಪಟ್ಟಣದಲ್ಲಿ ಹಾಲ್ಟ್
ಆ.9- ಶ್ರೀರಂಗಪಟ್ಟಣದಿಂದ ಹೊರಟು ಮೈಸೂರು ಹೊರವಲಯದಲ್ಲಿ ವಾಸ್ತವ್ಯ
ಆ.10- ಮೈಸೂರು ಹೊರವಲಯದಿಂದ ಕೇಂದ್ರ ನಾಯಕರ ಜತೆ ಪಾದಯಾತ್ರೆ ಹೊರಟು ಸಮಾರೋಪ ಸಮಾರಂಭದ ವೇದಿಕೆ ತಲುಪುವುದು.
ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ಇಲ್ಲ ಎಂದು ಮೊನ್ನೆ ಗೃಹ ಸಚಿವ ಪರಮೇಶ್ವರ ಹೇಳಿದ ಬೆನ್ನಲ್ಲೇ ಸರ್ಕಾರದಿಂದ ಸಮಸ್ಯೆ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿ ಉಚ್ಚ ನ್ಯಾಯಾಲಯಕ್ಕೆ ತೆರಳಿತ್ತು. ಶಾಸಕ ಪಿ. ರಾಜೀವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದನ್ ಗೌಡರ್, ಅನುಮತಿ ನೀಡಿದ್ದು, ಪಾದಯಾತ್ರೆ ಸಾಗುವ ಜಾಗದಲ್ಲಿ ಭದ್ರತೆ ನೀಡುವಂತೆ ಡಿಸಿ, ಎಸ್ಪಿಗೆ ಸೂಚನೆ ನೀಡಿದ್ದಾರೆ.















